ವಿಡಿಯೋ | ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದಕ್ಕೆ 9 ಕಿಮೀ ‘ಸಾಷ್ಟಾಂಗ ನಮಸ್ಕಾರ’ ಹಾಕಿ ವಿಚಿತ್ರ ಹರಕೆ ತೀರಿಸಿದ ಪತಿ…!

ಬಸ್ತಿ (ಉತ್ತರ ಪ್ರದೇಶ): ಸಾಮಾನ್ಯವಾಗಿ ಜನರು ಮದುವೆಯಾಗಲೆಂದೋ ಅಥವಾ ದಾಂಪತ್ಯ ಜೀವನ ಸುಖವಾಗಿರಲೆಂದೋ ದೇವರಿಗೆ ವಿಶೇಷ ಹರಕೆಗಳನ್ನು ಹೊರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ವಿಚ್ಛೇದನ ಸಿಕ್ಕು ತನ್ನ ದಾಂಪತ್ಯ ಜೀವನ ಅಂತ್ಯಗೊಂಡಿದ್ದಕ್ಕಾಗಿ ಬರೋಬ್ಬರಿ 9 ಕಿಲೋಮೀಟರ್ ದಂಡಾವತ್ ನಮಸ್ಕಾರ (ಸಾಷ್ಟಾಂಗ ನಮಸ್ಕಾರ) ಹಾಕುವ ಮೂಲಕ ವಿಚಿತ್ರ ಹರಕೆ ತೀರಿಸಿದ್ದಾರೆ…!
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರಖೋರಿಯಾ ನಿವಾಸಿ ಜೋಗೇಶ ಎಂಬುವವರೇ ಈ ಸುದ್ದಿಯ ಕೇಂದ್ರಬಿಂದು. ದೆಹಲಿಯಲ್ಲಿ ಒಳಾಂಗಣ ವಿನ್ಯಾಸ ವಲಯದಲ್ಲಿ (POP) ಕೆಲಸ ಮಾಡುವ ಇವರು 2022ರಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಮೊದಲ ದಿನಗಳಿಂದಲೇ ಪತಿ-ಪತ್ನಿಯ ನಡುವೆ ಕಲಹ ಆರಂಭವಾಗಿತ್ತು.
ಇದಕ್ಕೆ ಕಾರಣ ಜೋಗೇಶ ಅವರ ಕಡಿಮೆ ಆದಾಯ ಮತ್ತು ಕೆಲಸದ ಸಮಯದಲ್ಲಿ ವ್ಯತ್ಯಾಸ. ಇದು ದಂಪತಿ ನಡುವೆ ಪ್ರತಿದಿನ ಜಗಳ ನಡೆಯಲು ಕಾರಣವಾಗಿತ್ತು ಎಂದು ಹೇಳಲಾಗಿದೆ. ಈ ನಿರಂತರ ಕಲಹದಿಂದ ಜೋಗೇಶ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು.

ವಿಚ್ಛೇದನಕ್ಕಾಗಿ ವಿಚಿತ್ರ ಹರಕೆ:
ಸಂಸಾರದಲ್ಲಿ ಬೇಸತ್ತಿದ್ದ ಜೋಗೇಶ, ಪ್ರಸಿದ್ಧ ಸಿದ್ದ ಪೀಠವಾದ ಬೈರ್ವಾ ಸಮಯ ಮಾತಾ ದೇವಸ್ಥಾನಕ್ಕೆ ಹೋಗಿ, “ನನಗೆ ವಿಚ್ಛೇದನ ಸಿಕ್ಕಿ ಈ ದಾಂಪತ್ಯದಿಂದ ಮುಕ್ತಿ ದೊರೆತರೆ 9 ಕಿಲೋಮೀಟರ್ ದೂರದವರೆಗೆ ದಂಡ ನಮಸ್ಕಾರ ಹಾಕುತ್ತಾ ಬರುತ್ತೇನೆ” ಎಂದು ಹರಕೆ ಹೊತ್ತಿದ್ದರು. 2025ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡು ಅವರಿಗೆ ವಿಚ್ಛೇದನ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಜೋಗೇಶ ತಮ್ಮ ಹರಕೆ ತೀರಿಸಲು ಮುಂದಾಗಿದ್ದಾರೆ.
9 ಕಿಲೋಮೀಟರ್ ಕಠಿಣ ಯಾತ್ರೆ:
ಜಿಲ್ಲೆಯಲ್ಲಿ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ ಸೆಕ್ಷನ್ 125 (ಹಳೆಯ ಸೆಕ್ಷನ್ 144) ಜಾರಿಯಲ್ಲಿದ್ದ ಕಾರಣ, ಭಾನಪುರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹಿಮಾಂಶು ಕುಮಾರ ಅವರಿಂದ ವಿಶೇಷ ಅನುಮತಿ ಪಡೆದು ಜೋಗೇಶ ಈ ಯಾತ್ರೆ ಕೈಗೊಂಡಿದ್ದರು.

ಮುಂಜಾನೆ ಆಹಾರ ಮತ್ತು ನೀರು ಸೇವಿಸದೆ ಯಾತ್ರೆ ಆರಂಭಿಸಿದ ಜೋಗೇಶ, ರಸ್ತೆಯುದ್ದಕ್ಕೂ ಮಲಗುತ್ತಾ ಏಳುತ್ತಾ ಸಾಗಿದರು. ಈ ಯಾತ್ರೆಯ ಸಂದರ್ಭದಲ್ಲಿ ಜೋಗೇಶ ಅವರ ಪೋಷಕರು ಮತ್ತು ಗ್ರಾಮಸ್ಥರು ಭಕ್ತಿಗೀತೆಗಳನ್ನು ಹಾಡುತ್ತಾ ಅವರಿಗೆ ಸಾಥ್ ನೀಡಿದರು.
ಸಂಜೆಯ ವೇಳೆಗೆ ದೇವಸ್ಥಾನ ತಲುಪಿದಾಗ ಜೋಗೇಶ ಅವರ ಮೊಣಕಾಲುಗಳಿಗೆ ಗಾಯವಾಗಿತ್ತು ಮತ್ತು ಅವರು ಸಂಪೂರ್ಣ ಹೈರಾಣಾಗಿದ್ದರು. ಆದರೆ ಛಲ ಬಿಡದೆ ಹರಕೆ ತೀರಿಸಿದರು. ದೇವಸ್ಥಾನ ತಲುಪಿದ ಬಳಿಕ ಅವರು ಪೂಜೆ ಸಲ್ಲಿಸಿದರು.
ಇದು ಶಾಂತಿಯುತವಾಗಿ ನಡೆಯಲು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
ನೆಮ್ಮದಿಯ ಜೀವನಕ್ಕಾಗಿ ಪಟ್ಟ ಬವಣೆ ಮತ್ತು ಅದರ ಮುಕ್ತಿಗಾಗಿ ಹೊತ್ತ ಹರಕೆ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement