20 ವರ್ಷಗಳಲ್ಲೇ ಅಮೆರಿಕಕ್ಕೆ ಅತಿದೊಡ್ಡ ಆಘಾತ ! ಅಮೆರಿಕದ 2 ಪ್ರಬಲ ಯುದ್ಧ ವಿಮಾನ ಇರಾನ್‌ ಹೊಡೆದುರುಳಿಸಿದ್ದು ಹೇಗೆ ಗೊತ್ತೆ ?

ಕಳೆದ 20 ವರ್ಷಗಳಲ್ಲೇ ಕಂಡುಬರದ ಅಪರೂಪದ ವಿದ್ಯಮಾನವೊಂದರಲ್ಲಿ, ಇರಾನ್ ಸೇನೆಯು ಅಮೆರಿಕದ ಎರಡು ಪ್ರಬಲ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಇರಾನ್ ಸೇನೆಯ ಶಕ್ತಿ ಕುಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ, ಇರಾನ್ ಅಮೆರಿಕಕ್ಕೆ ಪ್ರಬಲ ತಿರುಗೇಟು ನೀಡುವ ಮೂಲಕ ಅಮೆರಿಕವನ್ನು ಬೆರಗುಗೊಳಿಸಿದೆ.
ಕಳೆದ ಐದು ವಾರಗಳಿಂದ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಟ್ರಂಪ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆದರೆ, ಶುಕ್ರವಾರ ಇರಾನ್ ಪಡೆಗಳು ಅಮೆರಿಕದ F-15E ಸ್ಟ್ರೈಕ್ ಈಗಲ್ (Strike Eagle) ಯುದ್ಧ ವಿಮಾನವನ್ನು ಹೊಡೆದುರುಳಿಸಿವೆ. ಈ ಘಟನೆಯಲ್ಲಿ ಇಬ್ಬರು ಪೈಲಟ್‌ಗಳನ್ನು ರಕ್ಷಿಸಲಾಗಿದ್ದು, ಮತ್ತೊಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಇದರ ಜೊತೆಗೆ, ಅಮೆರಿಕದ ಮತ್ತೊಂದು A-10 ವಾರ್ತೋಗ್ (Warthog) ಯುದ್ಧ ವಿಮಾನ ಕೂಡ ಇರಾನ್ ದಾಳಿಗೆ ತುತ್ತಾಗಿ ಪರ್ಷಿಯನ್ ಕೊಲ್ಲಿಯಲ್ಲಿ ಪತನಗೊಂಡಿದೆ ಎಂದು ಇರಾನ್ ಮಾಧ್ಯಮಗಳು ಹೇಳಿಕೊಂಡಿವೆ.
ರಾಡಾರ್ ಕಣ್ಣಿಗೆ ಬೀಳದೆ ಇರಾನ್‌ ದಾಳಿ ಮಾಡಿದ್ದು ಹೇಗೆ?
ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಇರಾನ್‌ನ ಬಹುತೇಕ ರಾಡಾರ್ ವ್ಯವಸ್ಥೆಗಳು ಧ್ವಂಸವಾಗಿವೆ ಎಂದು ಭಾವಿಸಲಾಗಿತ್ತು. ಆದರೆ, ಇರಾನ್ ಈಗ ‘ಪ್ಯಾಸಿವ್ ಸೆನ್ಸಾರ್’ (Passive Sensors) ತಂತ್ರಜ್ಞಾನವನ್ನು ಬಳಸುತ್ತಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಿಡುಗಡೆ ಮಾಡಿದ ವಿಡಿಯೋಗಳ ಪ್ರಕಾರ, ಅವರು ಸಾಂಪ್ರದಾಯಿಕ ರಾಡಾರ್‌ಗಳ ಬದಲಾಗಿ ಎಲೆಕ್ಟ್ರೋ-ಆಪ್ಟಿಕಲ್/ಇನ್‌ಫ್ರಾರೆಡ್ (EO/IR) ಟ್ರ್ಯಾಕಿಂಗ್ ಸಿಸ್ಟಮ್ ಬಳಸಿದ್ದಾರೆ.
ಈ ವ್ಯವಸ್ಥೆಯು ಯುದ್ಧ ವಿಮಾನದ ಎಂಜಿನ್‌ನಿಂದ ಹೊರಬರುವ ಶಾಖವನ್ನು (Heat Signature) ಪತ್ತೆಹಚ್ಚಿ ಕ್ಷಿಪಣಿಯನ್ನು ಗುರಿಯತ್ತ ಕಳುಹಿಸುತ್ತದೆ. ಇದರಿಂದಾಗಿ ವಿಮಾನದ ಪೈಲಟ್‌ಗಳಿಗೆ ತಮ್ಮತ್ತ ಕ್ಷಿಪಣಿ ದಾಳಿ ಮಾಡುತ್ತಿರುವುದು ರಡಾರ್ ಮೂಲಕ ತಿಳಿಯುವುದಿಲ್ಲ.
ಸವಾಲುಗಳ ನಡುವೆಯೂ ಯಶಸ್ಸು:
F-15E ಮತ್ತು A-10 ನಂತಹ ಆಧುನಿಕ ವಿಮಾನಗಳನ್ನು ಹೊಡೆದುರುಳಿಸುವುದು ಅತಿ ಕಷ್ಟದ ಕೆಲಸ. ಇವುಗಳಲ್ಲಿ ಶಾಖವನ್ನು ಕಡಿಮೆ ಮಾಡುವ ತಂತ್ರಜ್ಞಾನ ಮತ್ತು ಕ್ಷಿಪಣಿಗಳನ್ನು ದಿಕ್ಕು ತಪ್ಪಿಸುವ ‘ಫ್ಲೇರ್’ಗಳಿರುತ್ತವೆ. ಆದರೂ, ಪೈಲಟ್‌ಗಳ ಗಮನ ಬೇರೆಡೆ ಇರುವಾಗ ಅಥವಾ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವಾಗ ಇರಾನ್ ಈ ಸಾಹಸ ಮಾಡಿದೆ ಎನ್ನಲಾಗಿದೆ.
ಇದರಲ್ಲಿ ಯಾವುದೇ ರಡಾರ್ ಬಳಕೆಯಾಗುವುದಿಲ್ಲ, ಬದಲಿಗೆ ‘ಕೂಲ್ಡ್ ಥರ್ಮಲ್ ಸೀಕರ್’ (Cooled Thermal Seeker) ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಶೀತಲವಾಗಿರುವ ಆಕಾಶದ ಹಿನ್ನೆಲೆಯಲ್ಲಿ ವಿಮಾನದ ಎಂಜಿನ್ ಹೊರಸೂಸುವ ತೀವ್ರವಾದ ಶಾಖವನ್ನು ಈ ಸೀಕರ್ ಪತ್ತೆಹಚ್ಚುವವರೆಗೆ ಆಪರೇಟರ್ ಲಾಂಚರ್ ಅನ್ನು ತನ್ನ ಟಾರ್ಗೆಟ್‌ನತ್ತ ಹಿಡಿದಿರುತ್ತಾನೆ. ಒಮ್ಮೆ ಗುರಿ ಲಾಕ್ ಆದ ಮೇಲೆ, ಕ್ಷಿಪಣಿಯು ಆ ಚಲಿಸುವ ಶಾಖದ ಮೂಲವನ್ನೇ ಅನುಸರಿಸಿ ನಿಖರವಾಗಿ ದಾಳಿ ಮಾಡುತ್ತದೆ. ಇತ್ತೀಚಿನ ದಾಳಿಗಳಲ್ಲಿ ಇರಾನ್‌ನ ಸ್ವದೇಶಿ ನಿರ್ಮಿತ ‘ಮಜೀದ್’ (Majid) ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿರುವ ಸಾಧ್ಯತೆಯಿದೆ.
ಇರಾನ್‌ನ ಸ್ವದೇಶಿ ‘ಮಜೀದ್’ ಕ್ಷಿಪಣಿ ವ್ಯವಸ್ಥೆಯ ಕೈಚಳಕ:
ಈ ದಾಳಿಗಳಲ್ಲಿ ಇರಾನ್ ನಿರ್ಮಿತ ‘ಮಜೀದ್’ (AD-08) ಕ್ಷಿಪಣಿ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಶಂಕಿಸಲಾಗಿದೆ. ಇದು ಕಡಿಮೆ ಎತ್ತರದಲ್ಲಿ ಹಾರುವ ವಿಮಾನ, ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಇದು ಇರಾನ್‌ನ ರಕ್ಷಣಾ ಕೈಗಾರಿಕಾ ಸಂಸ್ಥೆಯು ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಅಲ್ಪ ವ್ಯಾಪ್ತಿಯ, ಕಡಿಮೆ ಎತ್ತರದ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದನ್ನು ಏಪ್ರಿಲ್ 2021 ರಲ್ಲಿ ಅನಾವರಣಗೊಳಿಸಲಾಯಿತು. ಇದನ್ನು Aras-2 4×4 ಯುದ್ಧ ವಾಹನಗಳ ಮೇಲೆ ಅಳವಡಿಸಲಾಗಿದ್ದು, ಇದು ಸುಲಭವಾಗಿ ಓಡಾಡುವ ಸಾಮರ್ಥ್ಯ ಹೊಂದಿದೆ.
ಇದು ಕಡಿಮೆ ಎತ್ತರದಲ್ಲಿ ಹಾರುವ ವಿಮಾನಗಳು, ಹೆಲಿಕಾಪ್ಟರ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ. ರಾಡಾರ್ ಕಿರಣಗಳನ್ನು ಬಳಸದೆ, ಕೇವಲ ಶಾಖ ಮತ್ತು ದೃಶ್ಯ ಸಂವೇದಕಗಳ (Passive Imaging Infrared & Electro-optical tracking) ಮೂಲಕ 15 ಕಿ.ಮೀ ದೂರದವರೆಗಿನ ಗುರಿಯನ್ನು ಪತ್ತೆಹಚ್ಚುತ್ತದೆ. ರಾಡಾರ್ ಹೊರಸೂಸುವಿಕೆ ಇಲ್ಲದ ಕಾರಣ ಇದು ಶತ್ರುಗಳ ಕಣ್ಣಿಗೆ ಬೀಳುವುದಿಲ್ಲ.
: ಇದರ ಪ್ರತಿ AD-08 ಕ್ಷಿಪಣಿಯು 75 ಕೆಜಿ ತೂಕವಿದ್ದು, 700 ಮೀಟರ್‌ನಿಂದ 8 ಕಿಲೋಮೀಟರ್ ದೂರದ ವ್ಯಾಪ್ತಿಯಲ್ಲಿ ಮತ್ತು 6 ಕಿಲೋಮೀಟರ್ ಎತ್ತರದವರೆಗೆ ದಾಳಿ ಮಾಡಬಲ್ಲದು. ಇದು ಶಬ್ದಕ್ಕಿಂತ ಎರಡು ಪಟ್ಟು ವೇಗವಾಗಿ (Mach 2) ಚಲಿಸುತ್ತದೆ. ಈ ವ್ಯವಸ್ಥೆಯು ಏಕಕಾಲದಲ್ಲಿ ನಾಲ್ಕು ವಿಭಿನ್ನ ಗುರಿಗಳನ್ನು ಟ್ರ್ಯಾಕ್ ಮಾಡಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದು, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ.
ಕಳೆದ ಒಂದು ತಿಂಗಳ ದಾಳಿಗಳ ವಿವರ:
ಮಾರ್ಚ್ ತಿಂಗಳಿನಿಂದ ಈವರೆಗೆ ಇರಾನ್ ಹಲವು ಅಮೆರಿಕ ಮತ್ತು ಇಸ್ರೇಲ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಮಾರ್ಚ್ ಆರಂಭದಲ್ಲಿ ಇಸ್ಫಾಹಾನ್ ಪ್ರಾಂತ್ಯದಲ್ಲಿ ಇಸ್ರೇಲ್‌ನ ಹರ್ಮ್ಸ್ 900 ಮತ್ತು ಐಎಐ ಏಟನ್ ಡ್ರೋನ್‌ಗಳು ಪತನವಾಗಿವೆ. ಮಾರ್ಚ್ 13ರಂದು ಪೋರ್ಟ್‌ ಅಬ್ಬಾಸ್ ಬಳಿ ಅಮೆರಿಕದ ಎಂಕ್ಯೂ-9 ರೀಪರ್ ಡ್ರೋನ್ ಪತನವಾಗಿದೆ.
ಮಾರ್ಚ್ 28 -ಏಪ್ರಿಲ್ 2 ರ ನಡುವೆ ಶಿರಾಜ್ ಮತ್ತು ಹಾರ್ಮುಜ್ ಪ್ರಾಂತ್ಯಗಳಲ್ಲಿ ಸಾಲು ಸಾಲು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಏಪ್ರಿಲ್ 3ರಂದು ಅಮೆರಿಕದ ಪ್ರಬಲ F-15E ಮತ್ತು A-10 ಯುದ್ಧ ವಿಮಾನಗಳ ಪತನಗೊಂಡಿವೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಈ ಯುದ್ಧದ ಅವಧಿಯಲ್ಲಿ ಅಮೆರಿಕ ಈವರೆಗೆ 13,000 ಕ್ಕೂ ಹೆಚ್ಚು ಹಾರಾಟಗಳನ್ನು ನಡೆಸಿದ್ದು, ಇರಾನ್‌ನ 12,300 ಗುರಿಗಳ ಮೇಲೆ ದಾಳಿ ಮಾಡಿದೆ. ಇಷ್ಟೆಲ್ಲಾ ದಾಳಿಗಳ ನಡುವೆಯೂ ಇರಾನ್ ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದು ಯುದ್ಧದ ತೀವ್ರತೆಯನ್ನು ಸೂಚಿಸುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement