ಒಂದು ಪಿಸ್ತೂಲ್, 7000 ಅಡಿ ಎತ್ತರದ ಪರ್ವತ, ಶತ್ರುಗಳ ನಡುವೆ 48 ಗಂಟೆ ಏಕಾಂಗಿ ಹೋರಾಟ: ಇರಾನ್‌ ಸೈನಿಕರಿಂದ ಪಾರಾದ ಅಮೆರಿಕದ ಕರ್ನಲ್‌

ವಾಷಿಂಗ್ಟನ್/ತೆಹ್ರಾನ್ : ಇರಾನ್‌ನ ಶತ್ರು ಪಡೆಗಳ ಕಣ್ತಪ್ಪಿಸಿ, 48 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದ ಅಮೆರಿಕದ ವಾಯುಪಡೆಯ ಕರ್ನಲ್ ಒಬ್ಬರನ್ನು ಅತ್ಯಂತ ಸಾಹಸಮಯವಾಗಿ ರಕ್ಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಇದನ್ನು “ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಧೈರ್ಯಶಾಲಿ ಸರ್ಚ್ ಅಂಡ್ ರೆಸ್ಕ್ಯೂ ಆಪರೇಷನ್” ಎಂದು ಬಣ್ಣಿಸಿದ್ದಾರೆ.
ಏಪ್ರಿಲ್ 3 ರ ಶುಕ್ರವಾರದಂದು, ಅಮೆರಿಕದ ಶಕ್ತಿಶಾಲಿ ಎಫ್-15ಇ ಸ್ಟ್ರೈಕ್ ಈಗಲ್ (F-15E Strike Eagle) ಯುದ್ಧ ವಿಮಾನವು ನೈಋತ್ಯ ಇರಾನ್ ಮೇಲೆ ಪತನಗೊಂಡಿತು. ವಿಮಾನದಲ್ಲಿದ್ದ ಪೈಲಟ್ ಅನ್ನು ಅಮೆರಿಕದ ಪಡೆಗಳು ತಕ್ಷಣವೇ ಪತ್ತೆ ಹಚ್ಚಿ ರಕ್ಷಿಸಿದ್ದರು. ಆದರೆ, ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಧಿಕಾರಿಯಾಗಿದ್ದ (WSO) ಕರ್ನಲ್ ಅವರು ನಾಪತ್ತೆಯಾಗಿದ್ದರು. ಇರಾನ್ ಸರ್ಕಾರವು ಇವರನ್ನು ಸೆರೆಹಿಡಿಯಲು ನೆರವು ನೀಡುವ ಅಥವಾ ಮಾಹಿತಿ ನೀಡುವ ನಾಗರಿಕರಿಗೆ $60,000 (ಅಂದಾಜು 50 ಲಕ್ಷ ರೂ.) ಬಹುಮಾನ ಘೋಷಿಸಿತ್ತು.

ಶತ್ರುಗಳ ನಡುವೆ 48 ಗಂಟೆಗಳ ಏಕಾಂಗಿ ಹೋರಾಟ
ಸುಮಾರು ಎರಡು ದಿನಗಳ ಕಾಲ ಕರ್ನಲ್ ಅವರು ಇರಾನ್ ಸೈನಿಕರಿಂದ ತಪ್ಪಿಸಿಕೊಳ್ಳಲು ನಡೆಸಿದ ಹೋರಾಟ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇರಲಿಲ್ಲ. ಇರಾನಿನ ಪಡೆಗಳು ಸುತ್ತುವರಿಯುತ್ತಿದ್ದಂತೆ, ಅವರು ಪರ್ವತದ ಬಿರುಕುಗಳಲ್ಲಿ ಅಡಗಿಕೊಂಡಿದ್ದರು. ಶತ್ರುಗಳ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಕರ್ನಲ್ ಒಬ್ಬರೇ ಸುಮಾರು 7,000 ಅಡಿ ಎತ್ತರದ ಕಡಿದಾದ ಪರ್ವತ ಶ್ರೇಣಿಯನ್ನು ಹತ್ತಿ ಸಾಗಿದ್ದರು.
ಅವರ ಬಳಿ ಟ್ರ್ಯಾಕಿಂಗ್ ಬೀಕನ್ ಮತ್ತು ಸಂವಹನ ಸಾಧನಗಳಿದ್ದರೂ, ಸುಮಾರು 24 ಗಂಟೆಗಳ ಕಾಲ ಅವರ ನಿಖರ ಸ್ಥಳ ಅಮೆರಿಕಕ್ಕೂ ತಿಳಿದಿರಲಿಲ್ಲ. ಅವರ ಬಳಿ ಕೇವಲ ಒಂದು ಹ್ಯಾಂಡ್‌ಗನ್ (ಕೈಬಂದೂಕು) ಮಾತ್ರವಿತ್ತು.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

ವಿಶೇಷ ಪಡೆಗಳ ರಕ್ಷಣಾ ಕಾರ್ಯಾಚರಣೆ ನಡೆದದ್ದು ಹೇಗೆ..?
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸಿಐಎ ತನ್ನ “ವಿಶೇಷ ತಾಂತ್ರಿಕ ಸಾಮರ್ಥ್ಯ” ಬಳಸಿ ಪರ್ವತ ಪ್ರದೇಶಗಳಲ್ಲಿ ಕರ್ನಲ್ ಚಲನವಲನವನ್ನು ಪತ್ತೆಹಚ್ಚಿತು. ಶನಿವಾರ ರಾತ್ರಿ ಅಮೆರಿಕದ ವಿಶೇಷ ಪಡೆಗಳು (Special Forces) ಗುಪ್ತವಾಗಿ ಇರಾನ್ ನೆಲಕ್ಕೆ ಇಳಿದವು. ಭಾನುವಾರ ಬೆಳಿಗ್ಗೆ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಯಾವುದೇ ಅಮೆರಿಕನ್ ಸೈನಿಕರಿಗೆ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಅಮೆರಿಕ ಹೇಳಿದೆ. ಅಮೆರಿಕವು ದಕ್ಷಿಣ ಇಸ್ಫಹಾನ್‌ನ ಪಾಳುಬಿದ್ದ ವಿಮಾನ ನಿಲ್ದಾಣವನ್ನು ಈ ಕಾರ್ಯಾಚರಣೆಗೆ ಬಳಸಿಕೊಂಡಿದೆ ಎಂದು ಹೇಳಲಾಗಿದೆ.

ರಕ್ಷಣೆಗೆ ನೆರವಾದ ‘SERE’ ತರಬೇತಿ
ಈ ಅಸಾಧ್ಯವಾದ ಬದುಕುಳಿಯುವಿಕೆಗೆ ಕಾರಣ ಎಸ್‌ಇಆರ್‌ಇ (SERE (Survival, Evasion, Resistance, and Escape)) ಎಂಬ ಕಠಿಣ ತರಬೇತಿ. ಅಂದರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಬದುಕುಳಿಯುವುದು, ಶತ್ರುಗಳಿಂದ ತಪ್ಪಿಸಿಕೊಳ್ಳುವುದು, ಸೆರೆಸಿಕ್ಕರೆ ಪ್ರತಿರೋಧಿಸುವುದು ಮತ್ತು ಅಲ್ಲಿಂದ ಪಾರಾಗುವುದು. ಇದು ಅತಿ ಕೆಟ್ಟ ಪರಿಸ್ಥಿತಿಯಲ್ಲಿ, ಅಂದರೆ ಶತ್ರು ದೇಶದ ಕಾಡಿನಲ್ಲಿ ಅಥವಾ ಬೆಟ್ಟಗಳಲ್ಲಿ ಏಕಾಂಗಿಯಾಗಿ ಸಿಲುಕಿದಾಗ ಹೇಗೆ ಬದುಕುಳಿಯಬೇಕು ಎಂಬ ಬಗ್ಗೆ ಕಲಿಸುತ್ತದೆ. ಉಪಕರಣಗಳಿಗಿಂತ ಹೆಚ್ಚಾಗಿ ಮಾನಸಿಕ ಸ್ಥೈರ್ಯ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇಲ್ಲಿ ಒತ್ತು ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜಗಳದಲ್ಲಿ ಉದ್ಯೋಗದಾತರಿಗೆ ಹೆಂಡತಿ ದೂರು ನೀಡುವುದು ಏಕೆ..? ಈ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಳವಳ

ಇರಾನ್ ಹೇಳಿಕೆ
ಅಮೆರಿಕದ ಈ ಯಶಸ್ವಿ ಕಾರ್ಯಾಚರಣೆಯನ್ನು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ. ಇರಾನ್ ಸೇನೆಯ ವಕ್ತಾರ ಎಬ್ರಾಹಿಂ ಜೊಲ್ಫಾಘರಿ ಮಾತನಾಡಿ, “ಅಮೆರಿಕದ ಕಾರ್ಯಾಚರಣೆ ವಿಫಲವಾಗಿದೆ. ನಾವು ಅಮೆರಿಕದ ಎರಡು ಸಿ-130 ಸಾರಿಗೆ ವಿಮಾನಗಳು ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ನಾಶಪಡಿಸಿದ್ದೇವೆ” ಎಂದು ಪ್ರತಿಪಾದಿಸಿದ್ದಾರೆ. ಟ್ರಂಪ್ ಅವರ ಹೇಳಿಕೆ ಬರಿ ‘ಬಡಾಯಿ ಕೊಚ್ಚಿಕೊಳ್ಳುವಿಕೆ ‘ ಎಂದು ಇರಾನ್ ಲೇವಡಿ ಮಾಡಿದೆ.
ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶತ್ರು ದೇಶದ ಆಳವಾದ ಪ್ರದೇಶದಲ್ಲಿ ಇಬ್ಬರು ಪೈಲಟ್‌ಗಳನ್ನು ಪ್ರತ್ಯೇಕವಾಗಿ ಮತ್ತು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement