ಇರಾನ್ ಭದ್ರ ಕೋಟೆಯೊಳಗೆ ಅಮೆರಿಕದ ಅದ್ಭುತ ಕಾರ್ಯಾಚರಣೆ : ಶತ್ರುಗಳ ನೆಲದಲ್ಲಿ ಸಿಲುಕಿದ್ದ ಪೈಲಟ್‌ಗಳನ್ನು ರಕ್ಷಿಸಿದ್ದೇ ರೋಚಕ…!

ವಾಷಿಂಗ್ಟನ್‌ : “ನಾವು ಅವನನ್ನು ಮರಳಿ ಕರೆತಂದಿದ್ದೇವೆ!” – ಇರಾನ್‌ನ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ಎಫ್-15 (F-15) ಯುದ್ಧ ವಿಮಾನದ ಸಿಬ್ಬಂದಿಯನ್ನು ಸಾಹಸಮಯವಾಗಿ ರಕ್ಷಿಸಿದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಮಾರಕ ಆಯುಧಗಳು ಮತ್ತು ನೂರಾರು ವಿಶೇಷ ಪಡೆಗಳ ನೆರವಿನೊಂದಿಗೆ ಅಮೆರಿಕವು ಇರಾನ್‌ ನೆಲದಲ್ಲಿ ಈ “ಚಮತ್ಕಾರಿಕ” ಕಾರ್ಯಾಚರಣೆ ನಡೆಸಿದೆ.
ಕಳೆದ ಶುಕ್ರವಾರ ಅಮೆರಿಕದ F-15E ಸ್ಟ್ರೈಕ್ ಈಗಲ್ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿತ್ತು. ವಿಮಾನದಲ್ಲಿದ್ದ ಪೈಲಟ್ ಅನ್ನು ಅಂದೇ ರಕ್ಷಿಸಲಾಗಿತ್ತು, ಆದರೆ ‘ವೆಪನ್ ಸಿಸ್ಟಮ್ ಆಫೀಸರ್’ (ಕಮಾಂಡರ್) ನಾಪತ್ತೆಯಾಗಿದ್ದರು. ಇವರನ್ನು ಪತ್ತೆಹಚ್ಚಲು ಅಮೆರಿಕ ಸೈನ್ಯ ಇರಾನ್‌ನ ವಾಯು ರಕ್ಷಣಾ ವಲಯದೊಳಗೆ ನುಗ್ಗಿ ಅತ್ಯಂತ ಚಮತ್ಕಾರಿಕ ಕಾರ್ಯಾಚರಣೆ ನಡೆಸಿದೆ.
ಅಧ್ಯಕ್ಷ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಈ ಕಾರ್ಯಾಚರಣೆಯ ರೋಚಕ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಸಿಐಎ (CIA) ಇರಾನ್ ಹಾದಿ ತಪ್ಪಿಸಲು ಒಂದು ತಂತ್ರ ಹೂಡಿತ್ತು. ಸೈನಿಕ ಈಗಾಗಲೇ ಸಿಕ್ಕಿಬಿದ್ದಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಹರಡಿ, ಇರಾನ್ ಪಡೆಗಳ ಗಮನ ಬೇರೆಡೆ ಸೆಳೆಯಿತು.
ಈ ಕಾರ್ಯಾಚರಣೆಯ ವೇಳೆ ಅಮೆರಿಕದ ಪಡೆಗಳು ಮತ್ತು ಇರಾನ್ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಅಮೆರಿಕದ ವಿಮಾನಗಳು ಇರಾನ್‌ನ ಬೆಂಗಾವಲು ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಿ, ಸೈನಿಕ ಅಡಗಿದ್ದ ಸ್ಥಳಕ್ಕೆ ಶತ್ರುಗಳು ಬರದಂತೆ ತಡೆದವು.
ಕಾರ್ಯಾಚರಣೆಯಲ್ಲಿ HH-60W ‘Jolly Green II’ ಎಂಬ ಅತ್ಯಾಧುನಿಕ ಹೆಲಿಕಾಪ್ಟರ್ ಪ್ರಮುಖ ಪಾತ್ರ ವಹಿಸಿದೆ. ಇದರೊಂದಿಗೆ A-10 ವಾರ್ತ್‌ಹಾಗ್ ಮತ್ತು F-35 ಸ್ಟೆಲ್ತ್ ವಿಮಾನಗಳು ಸೈನಿಕನಿಗೆ ರಕ್ಷಣೆ ನೀಡಿದ್ದವು.
ಕತ್ತಲೆಯಲ್ಲಿ ಪ್ರಾರಂಭವಾಗಿ ಹಗಲು ಹೊತ್ತಿನಲ್ಲಿ ಕೊನೆಗೊಂಡ ನಾಟಕೀಯ ಕಾರ್ಯಾಚರಣೆಯ ವೇಳೆ   ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ ಮತ್ತು ಆ ಘರ್ಷಣೆಯ ಮಧ್ಯದಲ್ಲಿಯೇ ಅಮೆರಿಕ ಮಿಲಿಟರಿ ವಾಯುಪಡೆಯ ಸಿಬ್ಬಂದಿಯನ್ನು ರಕ್ಷಿಸಿದೆ.
ರಕ್ಷಿಸಲ್ಪಟ್ಟ ಸೈನಿಕ ಒಬ್ಬ ಗೌರವಾನ್ವಿತ ‘ಕರ್ನಲ್’ ಎಂದು ತಿಳಿದುಬಂದಿದೆ. “ಈ ಧೀರ ಯೋಧ ಇರಾನ್‌ನ ಕಡಿದಾದ ಪರ್ವತಗಳಲ್ಲಿ ಶತ್ರುಗಳಿಂದ ಸುತ್ತುವರಿಯಲ್ಪಟ್ಟಿದ್ದರೂ, ಆತ ಎಂದಿಗೂ ಒಬ್ಬಂಟಿಯಾಗಿರಲಿಲ್ಲ. ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಶತ್ರುಗಳ ನೆಲದ ಆಳಕ್ಕೆ ನುಗ್ಗಿ ಇಬ್ಬರು ಪೈಲಟ್‌ಗಳನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ನಾವು ನಮ್ಮ ಸೈನಿಕರನ್ನು ಎಂದಿಗೂ ಕೈಬಿಡುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಪ್ರತಿಪಾದನೆ ಏನು ?
ಇತ್ತ ಇರಾನ್ ಸರ್ಕಾರ ತನ್ನ ನಾಗರಿಕರಿಗೆ ಸೈನಿಕನನ್ನು ಹಿಡಿದುಕೊಟ್ಟರೆ 66,000 ಡಾಲರ್ ಬಹುಮಾನ ಘೋಷಿಸಿತ್ತು. ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್, “ಅಮೆರಿಕದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ. ನಾವು ಅಮೆರಿಕದ ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಮತ್ತು ಒಂದು ಸಿ-130 ವಿಮಾನವನ್ನು ಹೊಡೆದುರುಳಿಸಿದ್ದೇವೆ ಹಾಗೂ ಐವರು ಸೈನಿಕರು ಸಾವಿಗೀಡಾಗಿದ್ದಾರೆ” ಎಂದು ಪ್ರತಿಪಾದಿಸಿದೆ.
ಆದರೆ, ಅಮೆರಿಕ ಈ ವಾದವನ್ನು ತಳ್ಳಿಹಾಕಿದ್ದು, ತನ್ನ ಒಬ್ಬನೇ ಒಬ್ಬ ಸೈನಿಕನಿಗೆ ಗಾಯವಾಗಿಲ್ಲ ಮತ್ತು ಕಾರ್ಯಾಚರಣೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯ ರಕ್ಷಿಸಲ್ಪಟ್ಟ ಅಧಿಕಾರಿಯನ್ನು ಇರಾನ್‌ನಿಂದ ಸುರಕ್ಷಿತವಾಗಿ ಹೊರತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement