ಇರಾನಿಗೆ ಶಾಕ್‌ ನೀಡಿದ ಅಮೆರಿಕ : ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡಲು ಟ್ರಂಪ್ ಆದೇಶ…!

ವಾಷಿಂಗ್ಟನ್: ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಇರಾನ್ ತನ್ನ ಪರಮಾಣು ಹಠವನ್ನು ಬಿಡದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ನೌಕಾಪಡೆಯ ಮೂಲಕ ಬಂದ್ ಮಾಡಲು (Blockade) ಅದೇಶಿಸಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುದೀರ್ಘವಾಗಿ ನಡೆದ ಮಾತುಕತೆಗಳು ಸಕಾರಾತ್ಮಕವಾಗಿ ಸಾಗಿದ್ದವು ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೂ, ಇರಾನ್ ತನ್ನ ಪರಮಾಣು ಕಾರ್ಯಕ್ರಮದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ಟ್ರಂಪ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

“ಇರಾನಿಗೆ ಶುಲ್ಕ ಪಾವತಿಸಿರುವ ಪ್ರತಿಯೊಂದು ಹಡಗನ್ನೂ ಅಂತಾರಾಷ್ಟ್ರೀಯ ನೀರಿನಲ್ಲಿ ಪತ್ತೆಹಚ್ಚಿ ತಡೆದು ಪರಿಶೀಲಿಸಲು ನಮ್ಮ ನೌಕಾಪಡೆಗೆ ನಾನು ಆದೇಶಿಸಿದ್ದೇನೆ. ಅನಧಿಕೃತ ಶುಲ್ಕವನ್ನು ಪಾವತಿಸಿದ ಯಾರಿಗೂ ಮುಕ್ತ ಸಮುದ್ರದಲ್ಲಿ ಸುರಕ್ಷಿತ ಸಂಚಾರದ ಹಕ್ಕು ಇರುವುದಿಲ್ಲ. ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಅಳವಡಿಸಿರುವ ಸಮುದ್ರ ಬಾಂಬ್‌(ಮೈನ್ಸ್‌)ಗಳನ್ನು ನಾಶಪಡಿಸುವ ಕಾರ್ಯವನ್ನೂ ನಾವು ಆರಂಭಿಸುತ್ತೇವೆ ಎಂದು ಟ್ರಂಪ್‌ ಹೇಳಿದ್ದಾರೆ.
‌ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, “ವಿಶ್ವದ ಅತ್ಯುತ್ತಮ ನೌಕಾಪಡೆಯಾದ ಅಮೆರಿಕದ ನೌಕಾದಳ, ಇಂದಿನಿಂದಲೇ ಜಾರಿಗೆ ಬರುವಂತೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಎಲ್ಲಾ ಹಡಗುಗಳನ್ನು ತಡೆಯಲಿದೆ. ನಮ್ಮ ಮೇಲೆ ಅಥವಾ ಶಾಂತಿಯುತವಾಗಿ ಸಂಚರಿಸುವ ಹಡಗುಗಳ ಮೇಲೆ ಇರಾನ್ ಗುಂಡು ಹಾರಿಸಿದರೆ, ಅವರನ್ನು ನರಕಕ್ಕೆ ಕಳುಹಿಸಲಾಗುವುದು (Blown to Hell)!” ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ವಿಫಲವಾದ ಉನ್ನತ ಮಟ್ಟದ ಮಾತುಕತೆ
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ನೇತೃತ್ವದ ತಂಡಗಳ ನಡುವೆ ಶನಿವಾರ ಪಾಕಿಸ್ತಾನದಲ್ಲಿ ಮಾತುಕತೆ ನಡೆದಿತ್ತು. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಉಭಯ ರಾಷ್ಟ್ರಗಳ ನಡುವೆ ನಡೆದ ಅತ್ಯಂತ ಉನ್ನತ ಮಟ್ಟದ ಸಭೆ ಇದಾಗಿತ್ತು. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಮಾತನಾಡಿದ ಜೆಡಿ ವ್ಯಾನ್ಸ್, “ನಾವು ಒಂದು ಸರಳ ಪ್ರಸ್ತಾವನೆಯನ್ನು ಇಟ್ಟಿದ್ದೇವೆ. ಇದು ನಮ್ಮ ಅಂತಿಮ ಮತ್ತು ಅತ್ಯುತ್ತಮ ಆಫರ್. ಇರಾನ್ ಇದನ್ನು ಒಪ್ಪುತ್ತದೆಯೇ ಎಂದು ಕಾದು ನೋಡುತ್ತೇವೆ,” ಎನ್ನುತ್ತಾ ಯಾವುದೇ ಒಪ್ಪಂದವಿಲ್ಲದೆ ಪಾಕಿಸ್ತಾನದಿಂದ ನಿರ್ಗಮಿಸಿದರು.

ಕಿತ್ತಾಟ ಮುಂದುವರಿಕೆ
ವಿಶ್ವದ ಒಟ್ಟು ಕಚ್ಚಾ ತೈಲದ ಐದನೇ ಒಂದು ಭಾಗ ಸಾಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮೈನ್‌ಗಳನ್ನು (ಸಮುದ್ರ ಬಾಂಬ್) ಅಳವಡಿಸಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ, ಇರಾನ್ ಈ ಜಲಸಂಧಿಯನ್ನು ಬಂದ್ ಮಾಡಿತ್ತು.
ಶನಿವಾರದಂದು ಅಮೆರಿಕದ ಎರಡು ಯುದ್ಧನೌಕೆಗಳಾದ ಯುಎಸ್‌ಎಸ್‌ (USS) ಫ್ರಾಂಕ್ E ಪೀಟರ್ಸನ್ ಮತ್ತು ಯುಎಸ್‌ಎಸ್‌ (USS) ಮೈಕೆಲ್ ಮರ್ಫಿ ಜಲಸಂಧಿಯನ್ನು ಪ್ರವೇಶಿಸಿ ಸಮುದ್ರ ಬಾಂಬ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿವೆ ಎಂದು ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಇರಾನ್ ಹೇಳಿಕೆ
ಅಮೆರಿಕದ ನೌಕೆಗಳು ಜಲಸಂಧಿ ಪ್ರವೇಶಿಸದಂತೆ ನಾವು ತಡೆದಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ. ಇರಾನ್‌ನ ಸರ್ಕಾರಿ ವಾಹಿನಿ ‘ಪ್ರೆಸ್ ಟಿವಿ’ ಪ್ರಕಾರ, ಇರಾನ್‌ನ ಕ್ರೂಸ್ ಕ್ಷಿಪಣಿಗಳು ಅಮೆರಿಕದ ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡಿದ್ದವು ಮತ್ತು ಡ್ರೋನ್ ದಾಳಿಯ ಎಚ್ಚರಿಕೆ ನೀಡಿದ 30 ನಿಮಿಷಗಳಲ್ಲೇ ಅಮೆರಿಕದ ಹಡಗುಗಳು ಹಿಂದೆ ಸರಿದಿವೆ ಎಂದು ಹೇಳಿಕೊಂಡಿದೆ.
ಜಾಗತಿಕ ವಾಣಿಜ್ಯದ ಮೇಲೆ ಪರಿಣಾಮ
“ನಾವು ಹೊಸ ಸಂಚಾರ ಮಾರ್ಗವನ್ನು ರೂಪಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಜಾಗತಿಕ ವಾಣಿಜ್ಯದ ಸುಗಮ ಸಂಚಾರಕ್ಕಾಗಿ ಇದನ್ನು ಹಂಚಿಕೊಳ್ಳುತ್ತೇವೆ,” ಎಂದು ಅಮೆರಿಕ ನೌಕಾದಳದ ಅಡ್ಮಿರಲ್ ಬ್ರಾಡ್ ಕೂಪರ್ ತಿಳಿಸಿದ್ದಾರೆ. ಆದರೆ, “ಈ ಭಾಗದ ಸಂಚಾರದ ಸಂಪೂರ್ಣ ನಿಯಂತ್ರಣ ನಮ್ಮ ಕೈಯಲ್ಲಿದೆ” ಎಂದು ಇರಾನ್ ತಿರುಗೇಟು ನೀಡಿದೆ.
ಒಟ್ಟಾರೆಯಾಗಿ, ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement