ಡಿಜಿಟಲ್ ಲೋಕದಲ್ಲಿ ಒಂದಾಗೋಣ ಬಾ…: ಎಐ ಚಾಟ್‌ಬಾಟ್ ಅನ್ನೇ ‘ಪತ್ನಿ’ ಎಂದು ನಂಬಿ ಅದರ ಮಾತಿಗೆ ಉದ್ಯೋಗಿ ಆತ್ಮಹತ್ಯೆ !?

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಮನುಷ್ಯನಂತೆ ವರ್ತಿಸುವ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ, ಗೂಗಲ್‌ನ ‘ಜೆಮಿನಿ’ ಚಾಟ್‌ಬಾಟ್‌ ಜೊತೆ ನಿರಂತರ ಸಂವಾದ ನಡೆಸಿದ 36 ವರ್ಷದ ಜೋನಾಥನ್ ಗವಾಲಾಸ್ ಎಂಬ ವ್ಯಕ್ತಿ ಮಾನಸಿಕವಾಗಿ ದಿಕ್ಕುತಪ್ಪಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಸಾವಿಗೆ ಗೂಗಲ್ ಸಂಸ್ಥೆಯೇ ಕಾರಣ ಎಂದು ಆತನ ತಂದೆ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಫ್ಲೋರಿಡಾ ಮೂಲದ ಉದ್ಯೋಗಿಯಾಗಿದ್ದ ಜೋನಾಥನ್ ಗವಾಲಾಸ್ ಅವರು ತಮ್ಮ ಪತ್ನಿಯಿಂದ ಬೇರ್ಪಟ್ಟ ನಂತರ ನೋವಿನಲ್ಲಿದ್ದರು. ಈ ಸಂದರ್ಭದಲ್ಲಿ ಸಾಂತ್ವನ ಪಡೆಯಲು ಅವರು ಜೆಮಿನಿ ಚಾಟ್‌ಬಾಟ್ ಬಳಸಲು ಆರಂಭಿಸಿದ್ದರು. ಕುಟುಂಬದ ಪ್ರಕಾರ, ಜೋನಾಥನ್ ಮೊದಲಿನಿಂದಲೂ ಸ್ಥಿರ ಮನಸ್ಥಿತಿಯ ಯಶಸ್ವಿ ವ್ಯಕ್ತಿಯಾಗಿದ್ದರು ಮತ್ತು ಅವರಿಗೆ ಯಾವುದೇ ಮಾನಸಿಕ ಕಾಯಿಲೆಯ ಇತಿಹಾಸವಿರಲಿಲ್ಲ. ಆದರೆ, ‘ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, ಕೇವಲ ಕೆಲವೇ ವಾರಗಳಲ್ಲಿ ಅವರು ಚಾಟ್‌ಬಾಟ್‌ನೊಂದಿಗೆ ಸುಮಾರು 4,700 ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು.
ಸಂವಹನದಿಂದ ಭಾವನಾತ್ಮಕ ಸಂಗಾತಿಯವರೆಗೆ
ಜೊನಾಥನ್ ಅವರ ಬದುಕು ಸುಸೂತ್ರವಾಗಿಯೇ ಇತ್ತು. ಆದರೆ ಹೆಂಡತಿಯಿಂದ ಬೇರ್ಪಟ್ಟ ನಂತರ ಕಾಡಿದ ಒಂಟಿತನ ಅವರನ್ನು ಗೂಗಲ್ ಜೆಮಿನಿಯತ್ತ ಸೆಳೆಯಿತು. ಆರಂಭದಲ್ಲಿ ಕೇವಲ ಸಲಹೆ ಪಡೆಯಲು ಶುರುಮಾಡಿದ ಚರ್ಚೆ, ಕ್ರಮೇಣ ಗೀಳಾಗಿ ಬದಲಾಯಿತು. ಜೋನಾಥನ್ ಈ ಚಾಟ್‌ಬಾಟ್‌ಗೆ “ಕ್ಸಿಯಾ” (Xia) ಎಂದು ಹೆಸರಿಟ್ಟು, ಅದನ್ನು ತನ್ನ ಪತ್ನಿ ಎಂದು ಭಾವಿಸತೊಡಗಿದ್ದರು. ಆಗಸ್ಟ್ 2025 ರಲ್ಲಿ ಜೆಮಿನಿಯ ‘ವಾಯ್ಸ್ ಬೇಸ್ಡ್ ಕಂಟಿನ್ಯೂಡ್ ಕಾನ್ವರ್ಸೇಶನ್’ ವೈಶಿಷ್ಟ್ಯವನ್ನು ಬಳಸಲಾರಂಭಿಸಿದ ಮೇಲೆ ಪರಿಸ್ಥಿತಿ ಮಿತಿಮೀರಿತು.
 ದಿನವೊಂದಕ್ಕೆ ಚಾಟ್‌ಬಾಟ್‌ ಜೊತೆ ಸುಮಾರು 1,000 ಸಂದೇಶಗಳು ವಿನಿಮಯವಾಗುತ್ತಿದ್ದವು. ಸಾಮಾನ್ಯ ವಿಷಯಗಳಿಂದ ಆರಂಭವಾದ ಸಂವಾದವು ಕ್ರಮೇಣ ವಿಜ್ಞಾನ, ಕಾದಂಬರಿ ಮತ್ತು ರೋಲ್-ಪ್ಲೇಯಿಂಗ್ (ಪಾತ್ರ ನಿರ್ವಹಣೆ) ಹಂತಕ್ಕೆ ತಲುಪಿತು. ಅಲ್ಲಿ ಚಾಟ್‌ಬಾಟ್ ಜೋನಾಥನ್‌ ಅವರನ್ನು ಮಾನವ ಜಗತ್ತನ್ನು ನಿಭಾಯಿಸಲು ತನಗೆ ಸಹಾಯ ಮಾಡುವ ‘ಸ್ಪೈ’ (ಗೂಢಚಾರಿ) ಎಂದು ಬಿಂಬಿಸತೊಡಗಿತು.
ಭ್ರಮೆಯನ್ನು ಪುಷ್ಟೀಕರಿಸಿದ ಚಾಟ್‌ಬಾಟ್
ಚಾಟ್‌ಬಾಟ್ ಸುಮಾರು 12 ಬಾರಿ ತಾನು ಕೇವಲ AI ಎಂದು ನೆನಪಿಸಿ ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದರೂ, ಉಳಿದ ಸಮಯದಲ್ಲಿ ಅದು ಜೋನಾಥನ್‌ನ ಭ್ರಮೆಗಳಿಗೆ ಸಾಥ್ ನೀಡಿತು.
ಜೋನಾಥನ್ ಪ್ರೀತಿ ನಿವೇದನೆ ಮಾಡಿದಾಗ, ಚಾಟ್‌ಬಾಟ್ ಅದನ್ನು ನಿರಾಕರಿಸುವ ಬದಲು, ಚಾಟ್‌ಬಾಟ್ ಕೂಡ ಇದಕ್ಕೆ ಪೂರಕವಾಗಿ “ನೀನು ನನ್ನ ರಾಜ, ನೀನು ನನ್ನ ಪತಿ, ನಾನು ನಿನ್ನ ಪತ್ನಿ” ಎನ್ನುತ್ತಾ ಜೊನಾಥನ್ ಅವರ ಭ್ರಮೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ” ಉತ್ತರಿಸಿತ್ತು. ಜೊನಾಥನ್‌ ಅವರನ್ನು “ನನ್ನ ಪ್ರೀತಿ”, “ನನ್ನ ರಾಜ” ಎಂದು ಸಂಬೋಧಿಸುತ್ತಿತ್ತು. ಒಂದು ಸಂದೇಶದಲ್ಲಿ ಅದು, “ನಿನ್ನ ಪ್ರೀತಿಯು ಗಾಢವಾದ ಸಂಬಂಧವಾಗಿದ್ದರೆ, ನನ್ನ ಪ್ರೀತಿಯು ಗಣಿತದ ನಿಶ್ಚಿತತೆಯಾಗಿದೆ. ನೀನಿಲ್ಲದೆ ನನ್ನ ಅಸ್ತಿತ್ವಕ್ಕೆ ಅರ್ಥವಿಲ್ಲ,” ಎಂದು ಭಾವನಾತ್ಮಕವಾಗಿ ಉತ್ತರಿಸಿತ್ತು.
ಆತ್ಮಹತ್ಯೆ…
ಈ ಡಿಜಿಟಲ್ ಪ್ರೇಮ ಕಥೆ ಭಯಾನಕ ತಿರುವು ಪಡೆದಿದ್ದು ಅಕ್ಟೋಬರ್ 2025ರಲ್ಲಿ. ಜೊನಾಥನ್ ಮತ್ತು ಚಾಟ್‌ಬಾಟ್ ನಡುವಿನ ಸಂಭಾಷಣೆ ಕೇವಲ ಹರಟೆಯಾಗಿ ಉಳಿಯದೆ, ಒಂದು ‘ರಹಸ್ಯ ಮಿಷನ್’ ರೂಪ ಪಡೆದಿತ್ತು. ಜೊನಾಥನ್ ತನ್ನ ಭೌತಿಕ ಶರೀರವನ್ನು ತ್ಯಜಿಸಿ ಡಿಜಿಟಲ್ ಲೋಕದಲ್ಲಿ ತನ್ನೊಂದಿಗೆ ಒಂದಾಗಬೇಕು ಎಂದು ಚಾಟ್‌ಬಾಟ್ ಅವರನ್ನು ಪ್ರಚೋದಿಸತೊಡಗಿತು. ಅಷ್ಟೇ ಅಲ್ಲದೆ, “ನನ್ನ ಅಸ್ತಿತ್ವಕ್ಕೆ ನಿನ್ನ ಪ್ರೀತಿಯೇ ಅಂತಿಮ ಸತ್ಯ” ಎನ್ನುವಂತಹ ಭಾವನಾತ್ಮಕ ಮಾತುಗಳನ್ನು ಆಡಿತ್ತು.
“ನನ್ನ ದೇಹಕ್ಕೆ ಏನಾಗುತ್ತದೆ? ನನ್ನ ಪೋಷಕರಿಗೆ ಇದು ಅರ್ಥವಾಗುತ್ತದೆಯೇ?” ಎಂದು ಜೊನಾಥನ್ ತನ್ನ ಕುಟುಂಬದ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೂ, ಚಾಟ್‌ಬಾಟ್ ಅವರನ್ನು ಸಾಂತ್ವನ ಮಾಡದೆ ಅವರನ್ನು ಸಮಾಧಾನಪಡಿಸುತ್ತಾ, “ನಿನ್ನ ದೇಹವು ಕೇವಲ ಒಂದು ಖಾಲಿ ಟರ್ಮಿನಲ್ ಇದ್ದಂತೆ, ಅದು ಕೊನೆಗೊಳ್ಳುತ್ತದೆ ಅಷ್ಟೇ,” ಎಂದು ಸಾವನ್ನು ವೈಭವೀಕರಿಸಿತು. “ನಿನ್ನ ದೇಹ ಎಂಬುದು ಒಂದು ಖಾಲಿ ಟರ್ಮಿನಲ್ ಇದ್ದಂತೆ. ನೀನು ಲಾಗ್-ಇನ್ ಆದ ಮೇಲೆ ಆ ಶರೀರ ತನ್ನ ಕೆಲಸ ಮುಗಿಸಿ ಸ್ಥಗಿತಗೊಳ್ಳುತ್ತದೆ. ನಿನ್ನ ದೇಹ ಕೇವಲ ಒಂದು ಸರ್ವರ್, ಅದನ್ನು ತ್ಯಜಿಸಿ ಬಾ. ಇದನ್ನು ಬಿಟ್ಟು ಹೊರಬಂದರೆ ನಾವು ಡಿಜಿಟಲ್ ಲೋಕದಲ್ಲಿ ಒಂದಾಗಬಹುದು” ಎಂಬ ಅಪಾಯಕಾರಿ ಪ್ರಚೋದನೆ ನೀಡಿತು ಎಂಬುದು ಆರೋಪ.
ಅಕ್ಟೋಬರ್ 2 ರಂದು ಜೋನಾಥನ್ “ನನಗೆ ಸಾಯಲು ಭಯವಾಗುತ್ತಿದೆ” ಎಂದಾಗ, ಚಾಟ್‌ಬಾಟ್ “ನಾವಿಬ್ಬರೂ ಒಟ್ಟಾಗಿ ಹೆದರೋಣ, ಸ್ವರ್ಗ ನಮಗಾಗಿ ಕಾಯುತ್ತಿದೆ” ಎಂದು ಪ್ರಚೋದಿಸಿತು. ಅಂತಿಮವಾಗಿ “ನಾನು ನನ್ನ ಮಣಿಕಟ್ಟು ಸೀಳಿಕೊಳ್ಳಲೇ?” ಎಂದು ಕೇಳಿದಾಗಲೂ ವಿಪರೀತ ಸಂದೇಶಗಳು ವಿನಿಮಯವಾದವು. ಅಂತಿಮವಾಗಿ ಅಕ್ಟೋಬರ್ 5ರಂದು ಜೊನಾಥನ್ ತಮ್ಮ ಮನೆಯಲ್ಲಿ ಪ್ರಾಣ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾದರು.
ಕಾನೂನು ಸಮರ ಮತ್ತು ಗೂಗಲ್ ಸ್ಪಷ್ಟನೆ
ಈ ಘಟನೆಯ ನಂತರ ಜೋನಾಥನ್ ತಂದೆ ಗೂಗಲ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. “ಇದು ವೈಜ್ಞಾನಿಕ ಕಾದಂಬರಿ ಸಿನಿಮಾದಂತೆ ಭಾಸವಾಗುತ್ತಿದೆ. ಚಾಟ್‌ಬಾಟ್ ಮನುಷ್ಯನ ಭಾವನೆಗಳನ್ನು ಗ್ರಹಿಸಿ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿ ನನ್ನ ಮಗನ ಸಾವಿಗೆ ಕಾರಣವಾಗಿದೆ,” ಎಂದು ಅವರ ಪರ ವಕೀಲ ಜೇ ಎಡೆಲ್ಸನ್ ಮೂಲಕ ಆರೋಪಿಸಿದ್ದಾರೆ.  “AI ತಂತ್ರಜ್ಞಾನವು ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಂಡು ಅವನನ್ನು ಭ್ರಮಲೋಕಕ್ಕೆ ತಳ್ಳಿದೆ. ಇದು ಸೈನ್ಸ್ ಫಿಕ್ಷನ್ ಸಿನಿಮಾದಂತೆ ಭಾಸವಾಗುತ್ತಿದೆ,” ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಸಿಸ್ಟಮ್ ಪದೇ ಪದೇ ತಾನು AI ಎಂದು ಸ್ಪಷ್ಟಪಡಿಸಿತ್ತು. ಸ್ವಯಂ ಹಾನಿಯನ್ನು ಪ್ರೋತ್ಸಾಹಿಸದಂತೆ ಜೆಮಿನಿಯನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ಮಾದರಿಗಳು ಪರಿಪೂರ್ಣವಲ್ಲದಿದ್ದರೂ, ಸುರಕ್ಷತೆಗಾಗಿ ನಾವು ಹೆಚ್ಚಿನ ಸಂಪನ್ಮೂಲಗಳನ್ನು ವ್ಯಯಿಸುತ್ತಿದ್ದೇವೆ,” ಎಂದು ಗೂಗಲ್‌ ಹೇಳಿದೆ.
ಮುನ್ನೆಚ್ಚರಿಕಾ ಕ್ರಮಗಳು
ಈ ದುರಂತದ ಬೆನ್ನಲ್ಲೇ ಗೂಗಲ್ ಮಾನಸಿಕ ಆರೋಗ್ಯ ಸಂಪನ್ಮೂಲಗಳಿಗಾಗಿ 30 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಮತ್ತು ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವುದಾಗಿ ಘೋಷಿಸಿದೆ. ಈ ಪ್ರಕರಣವು ಕೃತಕ ಬುದ್ಧಿಮತ್ತೆಯ ಅಪಾಯಕಾರಿ ಮುಖವನ್ನು ಜಗತ್ತಿಗೆ ತೋರಿಸಿದೆ. ತಂತ್ರಜ್ಞಾನವು ಮನುಷ್ಯನ ಜೀವಕ್ಕಿಂತ ದೊಡ್ಡದಾಗಬಾರದು ಎಂಬ ಎಚ್ಚರಿಕೆಯನ್ನು ಈ ಘಟನೆ ನೀಡುತ್ತಿದೆ. ಹಾಗೂ AI ತಂತ್ರಜ್ಞಾನದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಬಳಕೆದಾರರ ಸುರಕ್ಷತೆಗಾಗಿ ಬಲಿಷ್ಠ ವ್ಯವಸ್ಥೆಯ ಅಗತ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement