ಅಮೆರಿಕದ ದಿಗ್ಬಂಧನ ಅಸ್ತ್ರ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡ ಭಾರತದ 15 ಹಡಗುಗಳು

ದುಬೈ/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕವು ಇರಾನ್ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಭಾರತದ ಧ್ವಜವಿರುವ ಕನಿಷ್ಠ 15 ವಾಣಿಜ್ಯ ಹಡಗುಗಳು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಎಚ್ಚೆತ್ತಿರುವ ಭಾರತೀಯ ನೌಕಾಸೇನೆಯು ತನ್ನ 6 ಯುದ್ಧ ನೌಕೆಗಳನ್ನು ಪರ್ಷಿಯನ್ ಕೊಲ್ಲಿಯ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿದೆ. ಸಿಲುಕಿಕೊಂಡಿರುವ ಹಡಗುಗಳ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ನೌಕಾಸೇನೆಯು, ಅವರಿಗೆ ಸುರಕ್ಷಿತ ಮಾರ್ಗದರ್ಶನ ಮತ್ತು ಎಚ್ಚರಿಕೆಗಳನ್ನು ನೀಡುತ್ತಿದೆ. ಪ್ರಸ್ತುತ ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರ ಗಣನೀಯವಾಗಿ ಕುಸಿದಿದ್ದು, ವ್ಯಾಪಾರ ವಹಿವಾಟಿಗೆ ಭಾರಿ ಹಿನ್ನಡೆಯಾಗಿದೆ.

ಸುರಕ್ಷಿತವಾಗಿ ಮುನ್ನಡೆದ ‘ಜಗ ವಿಕ್ರಮ’
ಒಟ್ಟು 25 ಭಾರತೀಯ ಹಡಗುಗಳ ಪೈಕಿ 10 ಹಡಗುಗಳು ಈಗಾಗಲೇ ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿವೆ. ಇವುಗಳಲ್ಲಿ ಎಲ್‌ಪಿಜಿ ಟ್ಯಾಂಕರ್ ‘ಜಗ ವಿಕ್ರಗ’ ಪ್ರಮುಖವಾದುದು. 24 ಸಿಬ್ಬಂದಿ ಹಾಗೂ 20,400 ಟನ್ ಇಂಧನದೊಂದಿಗೆ ಏಪ್ರಿಲ್ 11 ರಂದು ಜಲಸಂಧಿ ದಾಟಿರುವ ಈ ಹಡಗು, ಸದ್ಯ ಭಾರತೀಯ ನೌಕಾಸೇನೆಯ ಬೆಂಗಾವಲಿನಲ್ಲಿ ಮುಂಬೈನತ್ತ ಸಾಗುತ್ತಿದೆ. ಏಪ್ರಿಲ್ 15 ರಂದು ಇದು ಭಾರತದ ತೀರ ತಲುಪುವ ನಿರೀಕ್ಷೆಯಿದೆ.
ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ
ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಶೇ. ೨೦ ರಷ್ಟು ಪಾಲು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಸೋಮವಾರದಿಂದ ಕಟ್ಟುನಿಟ್ಟಿನ ದಿಗ್ಬಂಧನ ಜಾರಿಗೆ ತಂದಿರುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಕಳೆದ ಕೆಲವು ವಾರಗಳಲ್ಲಿ ಈ ಭಾಗದಲ್ಲಿ ಸುಮಾರು 30 ಕಡಲ ಭದ್ರತಾ ಉಲ್ಲಂಘನೆ ಘಟನೆಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಇರಾನ್ ಎಚ್ಚರಿಕೆ
ಅಮೆರಿಕದ ಈ ನಡೆಯನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಇರಾನ್‌ನ ಮಿಲಿಟರಿ ಸಲಹೆಗಾರ ಮೊಹ್ಸೆನ್ ರೆಜೈ ಅವರು ಎಕ್ಸ್ (X) ನಲ್ಲಿ ಪ್ರತಿಕ್ರಿಯಿಸಿ, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ಜಲಸಂಧಿಯ ಮೇಲೆ ದಿಗ್ಬಂಧನ ಹೇರಿದರೆ ಅದನ್ನು ಎದುರಿಸಲು ನಮ್ಮ ಬಳಿ ಬಲಿಷ್ಠ ಆಯ್ಕೆಗಳಿವೆ” ಎಂದು ಎಚ್ಚರಿಸಿದ್ದಾರೆ.
ಭಾರತವು ಸದ್ಯ 28 ದೇಶಗಳ ಜೊತೆ ಸಮನ್ವಯ ಸಾಧಿಸಿ ಸಮುದ್ರ ಮಾರ್ಗದ ಭದ್ರತೆಯನ್ನು ಗಮನಿಸುತ್ತಿದೆ. ಕಚ್ಚಾ ತೈಲ, ಎಲ್‌ಎನ್‌ಜಿ ಮತ್ತು ಕೆಮಿಕಲ್ ಟ್ಯಾಂಕರ್‌ಗಳನ್ನು ಸುರಕ್ಷಿತವಾಗಿ ದೇಶಕ್ಕೆ ತರುವುದು ಈಗ ಕೇಂದ್ರ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement