ಬಿಹಾರದಲ್ಲಿ ನಿತೀಶ ಆಡಳಿತ ಅಂತ್ಯ : ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಸಿಎಂ ಆಗಿ ಆಯ್ಕೆ..!

ಪಾಟ್ನಾ: ಬಿಹಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯ ನಾಯಕರೊಬ್ಬರು ಮುಖ್ಯಮಂತ್ರಿ ಪಟ್ಟಕ್ಕೇರುವುದು ಈಗ ಅಧಿಕೃತಗೊಂಡಿದೆ. ಬಿಜೆಪಿಯ ಹಿರಿಯ ನಾಯಕ ಸಾಮ್ರಾಟ ಚೌಧರಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಮೂಲಗಳ ಪ್ರಕಾರ, ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭವು ಬುಧವಾರ (ಏ.೧೫) ನಡೆಯುವ ಸಾಧ್ಯತೆಯಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಸುದೀರ್ಘ ಕಾಲದ ಮುಖ್ಯಮಂತ್ರಿಯಾಗಿದ್ದ ನಿತೀಶಕುಮಾರ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ನಿತೀಶಕುಮಾರ, ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಈಗ ಹೊಸ ಸರ್ಕಾರ ಬಿಹಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳಲಿದೆ. ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಹೊಸ ಸರ್ಕಾರಕ್ಕೆ ಇರಲಿದೆ,” ಎಂದು ತಿಳಿಸಿದ್ದಾರೆ.
ಯಾರು ಈ ಸಾಮ್ರಾಟ ಚೌಧರಿ?
57 ವರ್ಷದ ಸಾಮ್ರಾಟ ಚೌಧರಿ ನಿತೀಶಕುಮಾರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
 ಇವರು ಹಿಂದುಳಿದ ವರ್ಗದ (OBC) ಪ್ರಭಾವಿ ‘ಕುಶ್ವಾಹ’ (ಕೋಯಿರಿ) ಸಮುದಾಯಕ್ಕೆ  ಸೇರಿದವರು. ಯಾದವರ ನಂತರ ಬಿಹಾರದಲ್ಲಿ ಈ ಸಮುದಾಯವೇ ಅತಿ ದೊಡ್ಡದಾಗಿದೆ. ಜೆಡಿಯು ಬೇಡಿಕೆಯ ಮೇರೆಗೆ ಬಿಜೆಪಿ ಇವರನ್ನು ಈ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದೆ ಎನ್ನಲಾಗಿದೆ.
1990ರಲ್ಲಿ ರಾಜಕೀಯ ಪ್ರವೇಶಿಸಿದ ಚೌಧರಿ, ಲಾಲು ಪ್ರಸಾದ ಯಾದವ್ ಅವರ ಆರ್‌ಜೆಡಿ ಮತ್ತು ನಿತೀಶ ಅವರ ಜೆಡಿಯು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. 2017ರಲ್ಲಿ ಅವರು ಬಿಜೆಪಿಯನ್ನು ಸೇರಿದರು.
ಬಿಜೆಪಿಯ ಕಾಯುವಿಕೆಗೆ ಅಂತ್ಯ
2005ರಿಂದಲೂ ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟದ ಕಿರಿಯ ಪಾಲುದಾರನಾಗಿಯೇ ಇತ್ತು. ಕೆಲವು ವರ್ಷಗಳನ್ನು ಹೊರತುಪಡಿಸಿದರೆ, ಪಕ್ಷವು ಅಧಿಕಾರಕ್ಕಾಗಿ ನಿತೀಶಕುಮಾರ ಅವರನ್ನೇ ಅವಲಂಬಿಸಿತ್ತು. ಆದರೆ  ಈಗ ಮೊದಲ ಬಾರಿಗೆ ಸ್ವತಃ ಬಿಜೆಪಿಯ ನಾಯಕನೇ ಮುಖ್ಯಮಂತ್ರಿ ಪೀಠವನ್ನು ಅಲಂಕರಿಸುತ್ತಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿಯ 89 ಶಾಸಕರಿದ್ದರೆ, ನಿತೀಶಕುಮಾರ ನೇತೃತ್ವದ ಜೆಡಿಯು 85 ಶಾಸಕರನ್ನು ಹೊಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement