ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಭಾರತದ ಹಡಗುಗಳಿಗೆ ನಮ್ಮಿಂದ ಯಾವುದೇ ಶುಲ್ಕ ಇಲ್ಲ : ಇರಾನ್‌ ರಾಯಭಾರಿ ಸ್ಪಷ್ಟನೆ

ನವದೆಹಲಿ: ಇರಾನ್ ಮೇಲೆ ಅಮೆರಿಕದ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತದ ಸರಕು ಸಾಗಣೆ ನೌಕೆಗಳಿಗೆ ಸಂಬಂಧಿಸಿದಂತೆ ಇರಾನ್ ಮಹತ್ವದ ಹೇಳಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಭಾರತೀಯ ಕಚ್ಚಾ ತೈಲ ಹಡಗುಗಳಿಂದ ನಾವು ಯಾವುದೇ ರೀತಿಯ ‘ಟೋಲ್’ ಅಥವಾ ಸುಂಕವನ್ನು ವಸೂಲಿ ಮಾಡುತ್ತಿಲ್ಲ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಸೋಮವಾರ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನಿಗೆ ಸುಂಕ ಪಾವತಿಸುವ ನೌಕೆಗಳನ್ನು ತಡೆಯುವುದಾಗಿ ಎಚ್ಚರಿಸಿದ ಬೆನ್ನಲ್ಲೇ  ಅವರು ಈ ಹೇಳಿಕೆ ಬಂದಿದೆ. ಎನ್‌ಡಿಟಿವಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ರಾಯಭಾರಿ ಫತಾಲಿ ಅವರು, “ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯು ಯಾವಾಗಲೂ ಮುಕ್ತವಾಗಿರುತ್ತದೆ. ನಾವು ಇದುವರೆಗೆ ಯಾವುದೇ ಶುಲ್ಕ ವಿಧಿಸಿದ್ದೇವೆಯೇ ಎಂದು ನೀವು ಭಾರತ ಸರ್ಕಾರವನ್ನೇ ಕೇಳಬಹುದು” ಎಂದು ಹೇಳಿದ್ದಾರೆ.
ಉತ್ತಮ ಸಂಬಂಧದ ಪ್ರತಿಫಲ: 
ಈ ಕಷ್ಟದ ಸಮಯದಲ್ಲಿ ಭಾರತ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯವಿದೆ. ಉಭಯ ದೇಶಗಳು ಸಮಾನ ಹಿತಾಸಕ್ತಿ ಮತ್ತು ಸಾಮಾನ್ಯ ಭವಿಷ್ಯವನ್ನು ಹಂಚಿಕೊಳ್ಳುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆಯಕಟ್ಟಿನ ಜಲಮಾರ್ಗದಲ್ಲಿ ಭಾರತೀಯ ನೌಕೆಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಇರಾನ್ ಅಧಿಕಾರಿಗಳು ಭಾರತದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಭಾರತ ಸರ್ಕಾರದ ಪ್ರತಿಕ್ರಿಯೆ:
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾದಾಗಿನಿಂದಲೂ ಭಾರತ ಸರ್ಕಾರವು ಇರಾನ್‌ಗೆ ಯಾವುದೇ ಹಣ ಪಾವತಿಸುತ್ತಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದೆ. ವಿಶೇಷವಾಗಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತೊಯ್ಯುವ ನೌಕೆಗಳಿಗೆ ಯಾವುದೇ ಶುಲ್ಕ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಮಾತನಾಡಿ, “ಭಾರತದ ಧ್ವಜ ಹೊಂದಿರುವ ಅಥವಾ ಭಾರತದಿಂದ ನಿರ್ವಹಿಸಲ್ಪಡುವ ನೌಕೆಗಳ ಮೇಲೆ ಸುಂಕ ವಿಧಿಸುವ ಕುರಿತು ಇರಾನ್ ಜೊತೆ ಯಾವುದೇ ಚರ್ಚೆ ನಡೆದಿಲ್ಲ” ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆ:
ಭಾರತದ ಪಾಲಿಗೆ ಈ ಜಲಮಾರ್ಗವು ಅತ್ಯಂತ ನಿರ್ಣಾಯಕವಾಗಿದೆ. ಭಾರತಕ್ಕೆ ಆಮದಾಗುವ ಕಚ್ಚಾ ತೈಲ ಮತ್ತು ಎಲ್‌ಪಿಜಿ ಪೂರೈಕೆಯ ಸುಮಾರು ಅರ್ಧದಷ್ಟು ಭಾಗವು ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗಬೇಕಾಗುತ್ತದೆ. ಪ್ರಸ್ತುತ ಉದ್ವಿಗ್ನತೆಯ ನಡುವೆಯೂ 15 ಭಾರತೀಯ ಧ್ವಜ ಹೊಂದಿರುವ ನೌಕೆಗಳು ಪರ್ಷಿಯನ್ ಕೊಲ್ಲಿಯಲ್ಲಿವೆ ಎಂದು ವರದಿಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement