ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದ ಇರಾನ್‌

ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಸಿದ ಬೆನ್ನಲ್ಲೇ, ಇರಾನ್‌ನ ಅರೆಸೇನಾ ಪಡೆ ‘ರೆವಲ್ಯೂಷನರಿ ಗಾರ್ಡ್’ ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಿದೇಶಿ ಹಡಗುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.
ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನದ ವರದಿಯ ಪ್ರಕಾರ, ‘ಎಂಎಸ್‌ಸಿ ಫ್ರಾನ್ಸೆಸ್ಕಾ’ (MSC Francesca) ಮತ್ತು ‘ಎಪಾಮಿನೋಡ್ಸ್’ (Epaminodes) ಎಂಬ ಎರಡು ಹಡಗುಗಳನ್ನು ಇರಾನ್ ಪಡೆಗಳು ವಶಪಡಿಸಿಕೊಂಡಿದ್ದು, ಅವುಗಳನ್ನು ಇರಾನ್ ಕರಾವಳಿಗೆ ಕೊಂಡೊಯ್ಯಲಾಗುತ್ತಿದೆ. ಇದರ ಬೆನ್ನಲ್ಲೇ ಮೂರನೇ ಹಡಗಿನ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಬ್ರಿಟಿಷ್ ಮಿಲಿಟರಿಯ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರವು ಈ ದಾಳಿಯನ್ನು ದೃಢಪಡಿಸಿದೆ.

ಬುಧವಾರ ಅಂತ್ಯಗೊಳ್ಳತ್ತಿದ್ದ ಇರಾನ್ ಮೇಲಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆದರೆ, ಇರಾನ್‌ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಮುಂದುವರಿಸುವುದಾಗಿ ಅಮೆರಿಕ ಹೇಳಿರುವುದು ಇರಾನ್ ಅನ್ನು ಕೆರಳಿಸಿದೆ. ಅಮೆರಿಕವು ಈ ಹಿಂದೆ ಇರಾನ್‌ನ ಎರಡು ಹಡಗುಗಳನ್ನು ವಶಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಜಾಗತಿಕ ಆರ್ಥಿಕತೆಯ ಮೇಲೆ ಆಘಾತ:
ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲದ ಶೇ. 20ರಷ್ಟು ವಹಿವಾಟು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಇರಾನ್ ಈ ಮಾರ್ಗವನ್ನು ಅಸ್ಥಿರಗೊಳಿಸಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ (Gas) ಮತ್ತು ಇಂಧನ ಬೆಲೆಗಳು ಗಗನಕ್ಕೇರಿವೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಪೂರೈಕೆ ಸರಪಳಿ ಕಡಿತಗೊಂಡಿದೆ. ಜಲಸಂಧಿ ದೀರ್ಘಕಾಲ ಮುಚ್ಚಲ್ಪಟ್ಟರೆ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು ಎಂಬ ಆತಂಕ ಎದುರಾಗಿದೆ.ದಿಗ್ಬಂಧನವನ್ನು ತೆರವುಗೊಳಿಸುವವರೆಗೂ ಸಂಧಾನ ಮಾತುಕತೆಗಳು ನಡೆಯುವುದಿಲ್ಲ ಎಂದು ಇರಾನ್ ರಾಜತಾಂತ್ರಿಕರು ಸ್ಪಷ್ಟಪಡಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement