ಬುದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಮದುವೆ ಸಮಾರಂಭವೊಂದರಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆದಿದ್ದು, ಮದುವೆ ಸಮಾರಂಭಕ್ಕೆ ನುಗ್ಗಿದ ನಾಯಿ 60ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ. ವಧುವಿನ ಬೀಳ್ಕೊಡುಗೆಯ (Farewell) ಸಂಭ್ರಮದಲ್ಲಿದ್ದ ಜನರು ನಾಯಿ ದಾಳಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
ಸೋಮವಾರ ಬಿಸೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ‘ಅಭಿನಂದನ್ ಬ್ಯಾಂಕ್ವೆಟ್ ಹಾಲ್’ನಲ್ಲಿ ಈ ಘಟನೆ ಸಂಭವಿಸಿದೆ. ಮದುವೆಯ ಸಂಪ್ರದಾಯಗಳು ಮುಗಿದು ವಧುವನ್ನು ಕಳುಹಿಸಿಕೊಡುವ ಸಿದ್ಧತೆ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಕಲ್ಯಾಣ ಮಂಟಪದೊಳಗೆ ನುಗ್ಗಿದ ನಾಯಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಲಾರಂಭಿಸಿತು. ನಾಯಿಯ ಹಠಾತ್ ದಾಳಿಯಿಂದಾಗಿ ಮದುವೆ ಮನೆಯಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಮಹಿಳೆಯರು ಮತ್ತು ಮಕ್ಕಳು ಪ್ರಾಣಭಯದಿಂದ ಕಿರುಚುತ್ತಾ ಓಡತೊಡಗಿದರು. ಈ ಗೊಂದಲದಲ್ಲಿ ಅನೇಕರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಒಂಬತ್ತು ವರ್ಷದ ಮಗುವಿನಿಂದ ಹಿಡಿದು 66 ವರ್ಷದ ವೃದ್ಧರವರೆಗೆ ಹಲವರು ಗಾಯಗೊಂಡಿದ್ದಾರೆ.
ಬ್ಯಾಂಕ್ವೆಟ್ ಹಾಲ್‌ನಲ್ಲಿ ದಾಳಿ ನಡೆಸಿದ ಬಳಿಕ ನಾಯಿಯು ರಸ್ತೆಗೆ ಓಡಿ ಬಂದಿದೆ. ಅಲ್ಲಿ ದಾರಿಹೋಕರು ಮತ್ತು ಅಂಗಡಿಯವರ ಮೇಲೆ ದಾಳಿ ಮಾಡಿ, ನಂತರ ಹತ್ತಿರದ ಹಳ್ಳಿಯೊಂದಕ್ಕೆ ನುಗ್ಗಿ ಜಾನುವಾರುಗಳನ್ನೂ ಕಚ್ಚಿದೆ ಎನ್ನಲಾಗಿದೆ.
ವೈದ್ಯಕೀಯ ಚಿಕಿತ್ಸೆ:
ಗಾಯಗೊಂಡ ತಕ್ಷಣ ಎಲ್ಲರನ್ನು ಬಿಸೌಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ದಾಖಲಿಸಲಾಯಿತು. ಅಲ್ಲಿ ಅವರಿಗೆ ರೇಬೀಸ್ ವಿರೋಧಿ ಚುಚ್ಚುಮದ್ದು (Anti-rabies shots) ನೀಡಿ ಬಿಡುಗಡೆ ಮಾಡಲಾಗಿದೆ. “ಸೋಮವಾರ ಒಟ್ಟು 109 ಜನರು ರೇಬೀಸ್ ಚಿಕಿತ್ಸೆಗಾಗಿ ನೋಂದಾಯಿಸಿಕೊಂಡಿದ್ದರು, ಅದರಲ್ಲಿ ಸುಮಾರು 60 ಜನರು ಮದುವೆ ಮನೆಯ ಘಟನೆಗೆ ಸಂಬಂಧಿಸಿದವರಾಗಿದ್ದಾರೆ” ಎಂದು ಸಿಎಚ್‌ಸಿ (CHC) ವೈದ್ಯಕೀಯ ಅಧಿಕಾರಿ ಅರವಿಂದ ವರ್ಮಾ ತಿಳಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಪುರಸಭೆ ಹಣ ವ್ಯಯಿಸುತ್ತಿದ್ದರೂ, ವಾಸ್ತವದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಅನಾಹುತ ಮಾಡಿದ ನಾಯಿ ಇನ್ನೂ ಮುಕ್ತವಾಗಿ ತಿರುಗಾಡುತ್ತಿರುವುದು ಜನರ ನಿದ್ದೆಗೆಡಿಸಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಪರ ಜಿಲ್ಲಾಧಿಕಾರಿ ಅರುಣಕುಮಾರ, ಬಿಸೌಲಿ ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮತ್ತು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ