
ಕಾಮರೆಡ್ಡಿ (ತೆಲಂಗಾಣ): ಮಾಂಸಾಹಾರಿ ಅಡುಗೆ ಮಾಡುವ ವಿಚಾರವಾಗಿ ತಡರಾತ್ರಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯೇ ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಭೀಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕೊಡಂಡ ಶಿವಾಜಿ ಮತ್ತು ಲಕ್ಷ್ಮೀ ದಂಪತಿ ನಡುವೆ ನಡೆದ ಜಗಳದಲ್ಲಿ ಘಟನೆ ಸಂಭವಿಸಿದೆ. ಈ ದಂಪತಿಗೆ ಎರಡು ಮತ್ತು ಒಂದು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಈ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು ಎಂದು ಹೇಳಲಾಗಿದೆ. ಹಣಕಾಸಿನ ವಿಚಾರ ಹಾಗೂ ಜೀವನಶೈಲಿಯ ಬಗ್ಗೆ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಮಾಂಸಾಹಾರಕ್ಕಾಗಿ ಶುರುವಾದ ಕಿರಿಕ್:
ಏಪ್ರಿಲ್ 2ರ ರಾತ್ರಿ ಶಿವಾಜಿ ಅವರು ‘ಮಾಂಸಾಹಾರ ಏಕೆ ಅಡುಗೆ ಮಾಡಿಲ್ಲ?’ ಎಂದು ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಈ ಸಣ್ಣ ವಿಚಾರಕ್ಕೆ ಶುರುವಾದ ಮಾತಿನ ಚಕಮಕಿ ಜೋರಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಲಕ್ಷ್ಮಿ, ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಶಿವಾಜಿಯ ಕುತ್ತಿಗೆಗೆ ಬಲವಾಗಿ ಏಟು ನೀಡಿದ್ದು, ತೀವ್ರ ರಕ್ತಸ್ರಾವದಿಂದಾಗಿ ಶಿವಾಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಕಿರುಚಾಟ ಮತ್ತು ಗಲಾಟೆಯ ಶಬ್ದ ಕೇಳಿದ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
“ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿ ನಡುವೆ ಆರ್ಥಿಕ ಸಮಸ್ಯೆ ಮತ್ತು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಪದೇ ಪದೇ ಜಗಳವಾಗುತ್ತಿತ್ತು. ಘಟನೆಯ ದಿನದಂದು ಕ್ಷುಲ್ಲಕ ಕಾರಣಕ್ಕೆ ಜಗಳ ವಿಕೋಪಕ್ಕೆ ಹೋಗಿ ಈ ಕೃತ್ಯ ನಡೆದಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಇದು ಆವೇಶದಲ್ಲಿ ನಡೆದ ಕೊಲೆಯೇ ಅಥವಾ ಪೂರ್ವಯೋಜಿತ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ