31 ವರ್ಷ ಜೈಲಿನಲ್ಲಿದ್ದ ರಾಜೀವ ಗಾಂಧಿ ಹತ್ಯೆಯ ಅಪರಾಧಿ ಈಗ ಹೈಕೋರ್ಟ್‌ ವಕೀಲ…!

ಚೆನ್ನೈ: ಸ್ವಾತಂತ್ರ್ಯ ಎನ್ನುವುದು ಕೇವಲ ಜೈಲಿನಿಂದ ಹೊರಬರುವುದಷ್ಟೇ ಅಲ್ಲ, ಅದು ಹೊಸ ಬದುಕಿನ ಆರಂಭವೂ ಹೌದು. ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಎ.ಜಿ. ಪೆರಾರಿವಾಲನ್ ಈಗ ವಕೀಲರ ಗೌನ್ ಧರಿಸಿ ಕಟಕಟೆಯ ಆಚೆ ನಿಂತು ವಾದ ಮಂಡಿಸಲಿದ್ದಾರೆ. ಮಾಜಿ ಪ್ರಧಾನಿ ರಾಜೀವ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎ.ಜಿ. ಪೆರಾರಿವಾಲನ್ ಈಗ ಹೈಕೋರ್ಟ್​ ವಕೀಲರಾಗಿದ್ದಾರೆ.
2022ರಲ್ಲಿ ಶಿಕ್ಷೆ ಕಡಿತದ ಮೇಲೆ ಬಿಡುಗಡೆಯಾಗಿದ್ದ ಪೆರಾರಿವಾಲನ್, ನಂತರ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ ಕಾನೂನು ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದ್ದರು. 2025ರಲ್ಲಿ ಅಖಿಲ ಭಾರತ ಬಾರ್ ಪರೀಕ್ಷೆಯಲ್ಲಿ (AIBE) ಉತ್ತೀರ್ಣರಾಗಿದ್ದ ಅವರು, ಈಗ ಅಧಿಕೃತವಾಗಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ.
ತಾನು 31 ವರ್ಷಗಳ ಕಾಲ ಆರೋಪಿಯಾಗಿ ಮತ್ತು ಅಪರಾಧಿಯಾಗಿ ಕಳೆದ ಅದೇ ಕಾನೂನು ವ್ಯವಸ್ಥೆಯಲ್ಲಿ, ಈಗ 54 ವರ್ಷದ ಪೆರಾರಿವಾಲನ್ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್‌ ನಡೆಸಲಿದ್ದಾರೆ. ಸೋಮವಾರ ಕಪ್ಪು ಕೋಟ್ ಧರಿಸಿದ ಅವರು, ತಮಿಳುನಾಡು ಮತ್ತು ಪುದುಚೇರಿ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು.

31 ವರ್ಷಗಳ ಸುದೀರ್ಘ ಹೋರಾಟದ ಕಥೆ
1991ರಲ್ಲಿ ಎಲ್‌ಟಿಟಿಇ ಉಗ್ರ ಸಂಘಟನೆ ನಡೆಸಿದ ರಾಜೀವ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಾಲನ್ ಬಂಧನಕ್ಕೊಳಗಾದಾಗ ಅವರಿಗೆ ಕೇವಲ 19 ವರ್ಷ. ವಿಚಾರಣೆಗೆಂದು ಕರೆದೊಯ್ದ ಪೊಲೀಸರು ಮರುದಿನವೇ ಕಳುಹಿಸುವುದಾಗಿ ಪೋಷಕರಿಗೆ ಹೇಳಿದ್ದರು. ಅದನ್ನು ನಂಬಿದ ಪೋಷಕರು ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಿಡುಗಡೆ ಮಾಡಲಿಲ್ಲ. ಸಿಬಿಐ ವಶದಲ್ಲಿದ್ದ ಪೆರಾರಿವಾಲನ್ ಅವರನ್ನು ಭೇಟಿ ಮಾಡಲು ಅವರ ತಾಯಿಗೂ ಅವಕಾಶ ನೀಡಲಿಲ್ಲ. ಸುಮಾರು 59 ದಿನಗಳ ಕಾಲ ಅವರು ಎಲ್ಲಿದ್ದಾರೆ ಎಂಬ ಸುಳಿವೇ ಇರಲಿಲ್ಲ. ನ್ಯಾಯಾಲಯದ ಮೊರೆ ಹೋದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹೆದರಿದ ಕುಟುಂಬ, ಹೇಬಿಯಸ್ ಕಾರ್ಪಸ್ ಅರ್ಜಿಯನ್ನೂ ಹಾಕಿರಲಿಲ್ಲ. ತಮ್ಮ ಮಗ ನಿರಪರಾಧಿಯಾಗಿದ್ದು, ನ್ಯಾಯ ವ್ಯವಸ್ಥೆ ಆತನನ್ನು ಶಿಕ್ಷಿಸುವುದಿಲ್ಲ ಎಂನ ನಂಬಿಕೆ ಅವರದಾಗಿತ್ತು.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

ಆರೋಪ ಮತ್ತು ಶಿಕ್ಷೆ
ರಾಜೀವ ಗಾಂಧಿ ಅವರನ್ನು ಹತ್ಯೆ ಮಾಡಲು ಬಳಸಿದ ಬಾಂಬ್‌ಗೆ 9 ವೋಲ್ಟ್ ಬ್ಯಾಟರಿಗಳನ್ನು ಪೆರಾರಿವಾಲನ್ ಖರೀದಿಸಿಕೊಟ್ಟಿದ್ದರು ಎಂಬುದು ಅವರ ಮೇಲಿದ್ದ ಮುಖ್ಯ ಆರೋಪ. ಅಂಗಡಿಯ ಮಾಲೀಕನ ಸಾಕ್ಷ್ಯವನ್ನೇ ಇದಕ್ಕೆ ಆಧಾರವಾಗಿ ಬಳಸಲಾಗಿತ್ತು. ‘ಟಾಡಾ’ (TADA) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 1998ರಲ್ಲಿ ಟಾಡಾ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತು. ಇದನ್ನು 1999ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಆದರೆ, ಕ್ಷಮಾದಾನ ಅರ್ಜಿಯ ವಿಲೇವಾರಿಯಲ್ಲಿ ಕೇಂದ್ರ ಸರ್ಕಾರ 11 ವರ್ಷ ವಿಳಂಬ ಮಾಡಿದ ಕಾರಣ, 2014ರಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತು. ಅಂತಿಮವಾಗಿ 2022ರ ಮೇ 18ರಂದು ಸಂವಿಧಾನದ 142ನೇ ವಿಧಿಯಡಿ ವಿಶೇಷ ಅಧಿಕಾರ ಬಳಸಿ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಿತು.

ಶಿಕ್ಷಣದ ಹಾದಿ
ಜೈಲಿನ ಗೋಡೆಗಳು ಪೆರಾರಿವಾಲನ್ ಅವರ ಕಲಿಕಾ ಆಸಕ್ತಿಯನ್ನು ಕುಂದಿಸಲಿಲ್ಲ. ಜೈಲಿನಲ್ಲಿದ್ದಾಗಲೇ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ ಡಿಪ್ಲೊಮಾ ಕೋರ್ಸ್‌ನಲ್ಲಿ ಚಿನ್ನದ ಪದಕ ಪಡೆದರು. ಪ್ಲಸ್ ಟೂ ಪರೀಕ್ಷೆಯಲ್ಲಿ 1200ಕ್ಕೆ 1096 ಅಂಕ ಗಳಿಸಿ ಕೈದಿಗಳ ಪೈಕಿ ಅಗ್ರಸ್ಥಾನ ಪಡೆದಿದ್ದರು. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ಬಿಸಿಎ ಮತ್ತು ಎಂಸಿಎ ಪದವಿಗಳನ್ನು ಹಾಗೂ ಏಳು ಡಿಪ್ಲೊಮಾ ಕೋರ್ಸ್‌ಗಳನ್ನು ಪೂರೈಸಿದರು. ವಿಶೇಷವೆಂದರೆ, ಮರಣದಂಡನೆಯ ಭೀತಿಯಲ್ಲಿದ್ದಾಗಲೂ ಅವರು ಈ ಶಿಕ್ಷಣ ಮುಂದುವರಿಸಿದ್ದರು.
“ನನ್ನ ಗುರಿ ಕೇವಲ ಪ್ರಸಿದ್ಧ ಕ್ರಿಮಿನಲ್ ವಕೀಲನಾಗುವುದಲ್ಲ. ಕಾನೂನು ನೆರವಿಲ್ಲದೆ ಜೈಲಿನಲ್ಲಿ ಕೊಳೆಯುತ್ತಿರುವ ಸಾವಿರಾರು ಕೈದಿಗಳ ಧ್ವನಿಯಾಗುವುದು ನನ್ನ ಆಶಯ. ವಿಶೇಷವಾಗಿ ಆರ್ಥಿಕ ಶಕ್ತಿಯಿಲ್ಲದೆ ನ್ಯಾಯ ವಂಚಿತರಾಗಿರುವ ಬಡ ಜೀವಾವಧಿ ಕೈದಿಗಳ ಪರವಾಗಿ ನಾನು ನಿಲ್ಲುತ್ತೇನೆ,” ಎಂದು ಪೆರಾರಿವಾಲನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement