ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ಹಿಡಿದ ಕನ್ನಡಿಯಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮರಗಳನ್ನು ಕಡಿಯಲು ಬಂದ ಜೆಸಿಬಿ ಯಂತ್ರದ ಮುಂದೆ ಒಂಟಿ ಆನೆಯೊಂದು ದಿಟ್ಟವಾಗಿ ನಿಂತು ಪ್ರತಿರೋಧ ತೋರುತ್ತಿರುವ ದೃಶ್ಯ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ.
ಸಾಮಾಜಿಕ ಜಾಲತಾಣ ‘X’ ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಕಾಡಿನ ನಡುವೆ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿರುವುದನ್ನು ಕಾಣಬಹುದು. ಈ ವೇಳೆ ಅಲ್ಲಿಗೆ ಆಗಮಿಸಿದ ಆನೆಯೊಂದು, ಜೆಸಿಬಿ ಯಂತ್ರದ ಹಾದಿಗೆ ಅಡ್ಡಲಾಗಿ ನಿಲ್ಲುತ್ತದೆ. ಯಂತ್ರವು ಮುಂದೆ ಸಾಗದಂತೆ ಗಜರಾಜ ಪಟ್ಟು ಹಿಡಿದು ನಿಂತ ಪರಿಣಾಮ, ಕಾಮಗಾರಿ ಸ್ಥಗಿತಗೊಂಡಿದೆ. ಈ ದೃಶ್ಯವು “ತನ್ನ ಮನೆಯನ್ನು (ಕಾಡನ್ನು) ಉಳಿಸಿಕೊಳ್ಳಲು ಆನೆ ಮಾಡುತ್ತಿರುವ ಮೌನ ಪ್ರತಿಭಟನೆ” ಎಂಬಂತೆ ಭಾಸವಾಗುತ್ತಿದೆ.
“ಅಭಿವೃದ್ಧಿ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಇದೊಂದು ಹೃದಯವಿದ್ರಾವಕ ನೆನಪು. ಉದ್ಯಮಿಗಳು ಮತ್ತು ಸರ್ಕಾರಗಳು ಕಾಡನ್ನು ನಾಶಮಾಡಲು ಮುಂದಾಗಿರುವಾಗ, ಆನೆಯು ತನ್ನ ಮನೆಯನ್ನು ಉಳಿಸಿಕೊಳ್ಳಲು ಜೆಸಿಬಿ ಮುಂದೆ ದೃಢವಾಗಿ ನಿಂತಿದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ
ಭಾರತದಾದ್ಯಂತ ರಸ್ತೆ ನಿರ್ಮಾಣ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ಕಾಡುಗಳು ನಾಶವಾಗುತ್ತಿವೆ. ಇದರಿಂದಾಗಿ ಪ್ರಾಣಿಗಳ ಸಂಚಾರ ಮಾರ್ಗಗಳು (Animal Corridors) ಕಿರಿದಾಗುತ್ತಿವೆ. ಆನೆಗಳು ಸಾಮಾನ್ಯವಾಗಿ ತಮ್ಮ ಪೂರ್ವಜರು ಬಳಸುತ್ತಿದ್ದ ಹಳೆಯ ಹಾದಿಯಲ್ಲೇ ಸಂಚರಿಸುತ್ತವೆ. ಅಲ್ಲಿ ಕಾಮಗಾರಿ ಅಥವಾ ಅತಿಕ್ರಮಣ ನಡೆದಾಗ ಇಂತಹ ಮುಖಾಮುಖಿಗಳು ಅನಿವಾರ್ಯವಾಗುತ್ತಿವೆ.
ಈ ವಿಡಿಯೋ ಎಲ್ಲಿಯದು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಇದು ಪರಿಸರ ಸಂರಕ್ಷಣೆ ಮತ್ತು ಭೂಬಳಕೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಆರ್ಥಿಕ ಬೆಳವಣಿಗೆಯ ಜೊತೆಜೊತೆಗೆ ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದಕ್ಕೆ ಈ ‘ಗಜ-ಪ್ರತಿರೋಧ’ವೇ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ.
“ಸರ್ಕಾರಕ್ಕಿಂತಲೂ ಈ ಆನೆಗೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹೆಚ್ಚು ಅರಿವಿದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ತನ್ನ ಮನೆಯನ್ನು ರಕ್ಷಿಸಿಕೊಳ್ಳುತ್ತಿರುವ ಈ ಆನೆಯನ್ನು ನಾಳೆ ಭಯೋತ್ಪಾದಕ ಎನ್ನಲಾಗುತ್ತದೆಯೇ?” ಎಂದು ಮತ್ತೊಬ್ಬರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.ಜೆಸಿಬಿ ಆಪರೇಟರ್‌ನ ವರ್ತನೆಯ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದ್ದು, ಆನೆ ಹತ್ತಿರವಿದ್ದಾಗ ಯಂತ್ರವನ್ನು ಆಫ್ ಮಾಡದೆ ಅಪಾಯ ತಂದೊಡ್ಡಲಾಗಿದೆ ಎಂದು ಕೆಲವರು ಕಿಡಿಕಾರಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ