ವಿಡಿಯೊ | ಕೇರಳಂ ದೇವಾಲಯಗಳಲ್ಲಿ ರೊಚ್ಚಿಗೆದ್ದ ಆನೆಗಳಿಂದ ದಾಳಿ : ಇಬ್ಬರು ಸಾವು ; ಕಾರು, ಸ್ಕೂಟರ್‌ ಜಖಂ

ತಿರುವನಂತಪುರಂ: ಕೇರಳದ ದೇವಾಲಯಗಳಲ್ಲಿ ನಡೆಯುತ್ತಿದ್ದ ಉತ್ಸವದ ವೇಳೆ ಶುಕ್ರವಾರ (ಮೇ 1) ಎರಡು ಪ್ರತ್ಯೇಕ ಆನೆ ದಾಳಿ ಪ್ರಕರಣಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಎರ್ನಾಕುಲಂ ಮತ್ತು ತ್ರಿಶ್ಶೂರು ಜಿಲ್ಲೆಗಳಲ್ಲಿ ನಡೆದ ಈ ಭೀಕರ ಘಟನೆಗಳಲ್ಲಿ ಓರ್ವ ಲಾರಿ ಚಾಲಕ ಹಾಗೂ ಒಬ್ಬ ಯುವ ಮಾವುತ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರಂತಗಳು ಧಾರ್ಮಿಕ ಆಚರಣೆಗಳಲ್ಲಿ ಆನೆಗಳ ಬಳಕೆ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೆ ಆತಂಕ ಮೂಡಿಸಿವೆ.
ಎರ್ನಾಕುಲಂ ಜಿಲ್ಲೆಯ ಅಂಕಮಾಲಿ ಸಮೀಪದ ಕಿಡಂಗೂರು ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ 9:15ರ ಸುಮಾರಿಗೆ ಮೊದಲ ಘಟನೆ ನಡೆಯಿತು.

ಉತ್ಸವದ ವಿಧಿವಿಧಾನ ಮುಗಿಸಿ ‘ಮಯ್ಯನಾಡ್ ಪಾರ್ಥಸಾರಥಿ’ ಎಂಬ ಆನೆಯನ್ನು ನೀರು ಕುಡಿಸಲು ಕರೆದೊಯ್ಯುವಾಗ ಅದು ಹಠಾತ್ತನೆ ರೊಚ್ಚಿಗೆದ್ದಿದೆ. ಆನೆಯನ್ನು ದೇವಸ್ಥಾನಕ್ಕೆ ಸಾಗಿಸಿದ್ದ ಲಾರಿ ಚಾಲಕ, ಕೊಲ್ಲಂ ನಿವಾಸಿ ವಿಷ್ಣು ಎಂಬವರನ್ನು ಆನೆ ಸೊಂಡಿಲಿನಿಂದ ಎತ್ತಿ ಅಪ್ಪಳಿಸಿ, ದಂತದಿಂದ ಚುಚ್ಚಿ ಸ್ಥಳದಲ್ಲೇ ಕೊಂದು ಹಾಕಿದೆ. ಬಳಿಕ ಅಲ್ಲೇ ನಿಲ್ಲಿಸಿದ್ದ ಕಾರೊಂದನ್ನು ಎತ್ತಿ ನೆಲ್ಲೆ ಅಪ್ಪಳಿಸಿದೆ, ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿ ರಂಪಾಟ ನಡೆಸಿತು. ಆನೆಯನ್ನು ಶಾಂತಗೊಳಿಸಲು ಯತ್ನಿಸಿದ ಮುಖ್ಯ ಮಾವುತ ಪ್ರದೀಪ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಗಂಟೆಗಳ ಹರಸಾಹಸದ ನಂತರ ಅರಣ್ಯ ಇಲಾಖೆಯ ಆನೆ ದಳವು ಅರಿವಳಿಕೆ ಮದ್ದು ನೀಡಿ ಆನೆಯನ್ನು ನಿಯಂತ್ರಣಕ್ಕೆ ತಂದಿದೆ.

ಕೂಡಲ್‌ಮಾಣಿಕ್ಯಂ ದೇವಾಲಯ
ಎರಡನೇ ಘಟನೆ ತ್ರಿಶ್ಶೂರು ಜಿಲ್ಲೆಯ ಇರಿಂಜಾಲಕುಡದ ಪ್ರಸಿದ್ಧ ಕೂಡಲ್‌ಮಾಣಿಕ್ಯಂ ದೇವಾಲಯದಲ್ಲಿ ನಡೆದಿದೆ. ಇಲ್ಲಿನ ‘ವಾಳವಡಿ ಕಾಶಿನಾಥನ್’ ಎಂಬ ಆನೆಯು ಗುರುವಾರ ರಾತ್ರಿಯಿಂದಲೇ ಅಸಹನೆ ತೋರುತ್ತಿತ್ತು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ಆನೆಯು ತನ್ನ ತಡೆಗೋಡೆಯನ್ನು ಮುರಿದು ಮಾವುತರ ಮೇಲೆ ದಾಳಿ ಮಾಡಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಎರಡನೇ ಮಾವುತ ಶ್ರೀಕುಟ್ಟನ್ (25) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೊದಲ ಮಾವುತ ಅಮಲ್ (28) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಸ್ಥಗಿತಗೊಂಡ ಉತ್ಸವಗಳು
ಈ ಸಾವು-ನೋವುಗಳಿಂದ ಭಕ್ತರಲ್ಲಿ ಭೀತಿ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ದೇವಾಲಯಗಳಲ್ಲಿ ಉತ್ಸವದ ಕಾರ್ಯಕ್ರಮಗಳನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಕೇರಳದ ಸಾಂಪ್ರದಾಯಿಕ ಉತ್ಸವಗಳಲ್ಲಿ ಆನೆಗಳ ಬಳಕೆ ಸಾಮಾನ್ಯವಾದರೂ, ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳ ಮೇಲಿನ ಮಾನಸಿಕ ಒತ್ತಡ ಮತ್ತು ಜನಸಂದಣಿಯ ನಿರ್ವಹಣೆಯಲ್ಲಿನ ವೈಫಲ್ಯದಿಂದಾಗಿ ಇಂತಹ ಸಾವುಗಳು ಮರುಕಳಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement