ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿ ಎಐ (AI) ತಂತ್ರಜ್ಞಾನ ಅಳವಡಿಸುವುದು ಕಾನೂನುಬಾಹಿರ : ಚೀನಾ ಕೋರ್ಟ್ ತೀರ್ಪು

ಕೇವಲ ಖರ್ಚು ಉಳಿತಾಯದ ಉದ್ದೇಶಕ್ಕಾಗಿ ಉದ್ಯೋಗಿಗಳನ್ನು ತೆಗೆದುಹಾಕಿ ಅವರ ಜಾಗಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕಾನೂನುಬಾಹಿರ ಎಂದು ಚೀನಾದ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಉದ್ಯೋಗ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಚೀನಾದ ಹ್ಯಾಂಗ್‌ಝೌ ಇಂಟರ್ಮೀಡಿಯೆಟ್ ಪೀಪಲ್ಸ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದೆ. ‘ಝೌ’ ಎಂಬ ಹಿರಿಯ ತಾಂತ್ರಿಕ ಉದ್ಯೋಗಿ ಈ ಕಾನೂನು ಹೋರಾಟ ನಡೆಸಿದ್ದರು.ಝೌ ಅವರು ನವೆಂಬರ್ 2022 ರಲ್ಲಿ ಕ್ವಾಲಿಟಿ ಅಶ್ಯೂರೆನ್ಸ್ ಸೂಪರ್‌ವೈಸರ್ ಆಗಿ ತಿಂಗಳಿಗೆ 25,000 ಯುವಾನ್ (ಸುಮಾರು ₹3.47 ಲಕ್ಷ) ಸಂಬಳಕ್ಕೆ ಕಂಪನಿಯನ್ನು ಸೇರಿದ್ದರು. AI ಔಟ್‌ಪುಟ್‌ಗಳನ್ನು ಉತ್ತಮಗೊಳಿಸುವುದು ಮತ್ತು ಸೂಕ್ಷ್ಮ ವಿಷಯಗಳನ್ನು ಫಿಲ್ಟರ್ ಮಾಡುವುದು ಇವರ ಕೆಲಸವಾಗಿತ್ತು.
ಆದರೆ ಕಂಪನಿಯು ಇತ್ತೀಚೆಗೆ ‘ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್’ (LLM) ಅಳವಡಿಸಿಕೊಂಡ ನಂತರ ಝೌ ಅವರ ಕೆಲಸವನ್ನು ಆ ಸಾಫ್ಟ್‌ವೇರ್ ಮಾಡತೊಡಗಿತು. ಇದರಿಂದಾಗಿ ಕಂಪನಿಯು ಅವರಿಗೆ ಶೇ. 40 ರಷ್ಟು ಸಂಬಳ ಕಡಿತಗೊಳಿಸಿ ಕೆಳಹಂತದ ಕೆಲಸಕ್ಕೆ ಸೇರುವಂತೆ ಒತ್ತಾಯಿಸಿತು.
ಕಂಪನಿಯ ವಾದ ಮತ್ತು ವಜಾ
ಸಂಬಳ ಕಡಿತಕ್ಕೆ ಝೌ ಒಪ್ಪದಿದ್ದಾಗ, “ಸಂಸ್ಥೆಯ ಪುನರ್ರಚನೆ ಮತ್ತು ಸಿಬ್ಬಂದಿ ಕಡಿತ”ದ ನೆಪವೊಡ್ಡಿ ಕಂಪನಿಯು ಅವರನ್ನು ಕೆಲಸದಿಂದ ವಜಾಗೊಳಿಸಿತು. ಅವರಿಗೆ 3,11,695 ಯುವಾನ್ (ಸುಮಾರು ₹43.29 ಲಕ್ಷ) ಪರಿಹಾರ ನೀಡುವುದಾಗಿ ಕಂಪನಿ ಹೇಳಿತು. ಆದರೆ, ಈ ವಜಾ ಕ್ರಮ ಅನ್ಯಾಯವೆಂದು ಝೌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಮಹತ್ವದ ತೀರ್ಪು
ಚೀನಾದ ಕಾರ್ಮಿಕ ಒಪ್ಪಂದದ ಕಾನೂನಿನ ಪ್ರಕಾರ, ಎಐ (AI) ಅಳವಡಿಕೆಯು “ವಸ್ತುನಿಷ್ಠ ಸಂದರ್ಭಗಳಲ್ಲಿನ ಪ್ರಮುಖ ಬದಲಾವಣೆ” (Major change in objective circumstances) ಅಡಿಯಲ್ಲಿ ಬರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಎಐ (AI) ಅಳವಡಿಕೆಯು ಕಂಪನಿಯ ಸ್ವಯಂಪ್ರೇರಿತ ವ್ಯವಹಾರ ನಿರ್ಧಾರವೇ ಹೊರತು, ನೈಸರ್ಗಿಕ ವಿಕೋಪ ಅಥವಾ ಸರ್ಕಾರದ ನೀತಿ ಬದಲಾವಣೆಯಂತಹ ಅನಿವಾರ್ಯ ಪರಿಸ್ಥಿತಿಯಲ್ಲ ಎಂದು ಅದು ಹೇಳಿದೆ.
ಕಂಪನಿಯು ಉದ್ಯೋಗಿಯನ್ನು ಮುಂದುವರಿಸಲು ಅಸಾಧ್ಯ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿದೆ. ಅಲ್ಲದೆ, ಅವರಿಗೆ ನೀಡಿದ ಪರ್ಯಾಯ ಉದ್ಯೋಗ ಪ್ರಸ್ತಾವನೆಯು ಸಮಂಜಸವಾಗಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಈ ವಜಾ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸಿ, ಝೌ ಅವರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆದೇಶಿಸಿದೆ.
 ಕಂಪನಿಗಳು AI ಅಳವಡಿಸುವ ಮೊದಲು ಉದ್ಯೋಗಿಗಳ ಜೊತೆ ಮಾತುಕತೆ ನಡೆಸಬೇಕು, ಅವರಿಗೆ ತರಬೇತಿ ನೀಡಬೇಕು ಮತ್ತು ಸಮಂಜಸವಾದ ಪರ್ಯಾಯ ಉದ್ಯೋಗ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
 ಎಐಅಳವಡಿಕೆಯಿಂದಾಗಿ ಜಾಗತಿಕ ಕಂಪನಿಗಳಾದ ಮೆಟಾ, ಅಮೆಜಾನ್, ಒರಾಕಲ್, ಸ್ಪಾಟಿಫೈ ಮತ್ತು ಜೆಮಿನಿಯಂತಹ ದೊಡ್ಡ ಕಂಪನಿಗಳು  ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿತ್ತಿರುವ ಬೆನ್ನಲ್ಲೇ ಈ ತೀರ್ಪು ಬಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement