ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆದ 2026 ರ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಆರಂಭವಾಗಿದೆ. 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ರಾಜಕೀಯ ದಿಕ್ಕನ್ನು ಸೂಚಿಸುವ ಆರಂಭಿಕ ಟ್ರೆಂಡ್ಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಹಿಂದಿಕ್ಕಿ ಅಧಿಕಾರದತ್ತ ದಾಪುಗಾಲು ಇಡುತ್ತಿರುವುದು ಕಂಡುಬಂದಿದೆ. ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳಲ್ಲಿ ಬಿಜೆಪಿ 175 ಕ್ಷೇತ್ರಗಳಲ್ಲಿ ಮುಂದಿದ್ದರೆ ತೃಣಮೂಲ ಕಾಂಗ್ರೆಸ್ 101 ಕ್ಷೇತ್ರಗಳಲ್ಲಿ ಮುಂದಿದ್ದರೆ ಹಾಗೂ ಇತರರು 4 ಕ್ಷೇತ್ರಗಳಲ್ಲಿ ಮುಂದಿದ್ದಾರೆ.ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲಿನ ಭೀತಿಯಲ್ಲಿದ್ದಾರೆ. ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರಿಗಿಂತ ಹಿಂದಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷ ಡಿಎಂಕೆ ಹಿಂದೆ ಬಿದ್ದಿದೆ. ಅಲ್ಲಿ ತಮಿಳು ಸಿನೆಮಾ ನಟ ವಿಜಯ ಅವರ ಟಿವಿಕೆ ಪಕ್ಷವು ಮುಂದಿದೆ. ಅದರ ನಂತರ ಎಐಎಡಿಎಂಕೆ ಪಕ್ಷವಿದೆ. ಡಿಎಂಕೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆ 99 ಕ್ಷೇತ್ರಗಳಲ್ಲಿ ಮುಂದಿದ್ದರೆ, ಎಐಎಡಿಎಂಕೆ 78 ಕ್ಷೇತ್ರಗಳಲ್ಲಿ ಮುಂದಿದೆ. ಆಡಳಿತಾರೂಢ ಡಿಎಂಕೆ 63 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ.
ಅಸ್ಸಾಂನಲ್ಲಿ ಏಕಪಕ್ಷೀಯ ಸ್ಪರ್ಧೆ ಕಾಣುತ್ತಿದ್ದು, 126 ಕ್ಷೇತ್ರಗಳಲ್ಲಿ ಬಿಜೆಪಿ 97 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಕೇರಳದಲ್ಲಿ, ಆಡಳಿತಾರೂಢ ಎಲ್ಡಿಎಫ್ ಹಿಂದೆ ಬಿದ್ದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುಂದಿದೆ. ಕೇರಳದ ಒಟ್ಟು 140 ಕ್ಷೇತ್ರಗಳಲ್ಲಿ ಯುಡಿಎಫ್ 88 ಕ್ಷೇತ್ರಗಳಲ್ಲಿ ಮುಂದಿದ್ದರೆ, ಎಲ್ಡಿಎಫ್ 49 ಕ್ಷೇತ್ರಗಳಲ್ಲಿ ಮುಂದಿದೆ. ಎನ್ಡಿಎ 2 ಕ್ಷೇತ್ರಗಳಲ್ಲಿ ಮುಂದಿದೆ. ಪಾಂಡಿಚೇರಿಯಲ್ಲಿ ಎನ್ಡಿಎ ಮುಂದಿದ್ದು ಒಟ್ಟು 30 ಕ್ಷೇತ್ರಗಳಲ್ಲಿ ಅದು 20 ಕ್ಷೇತ್ರಗಳಲ್ಲಿ ಮುಂದಿದೆ. ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಮುಂದಿದ್ದರೆ ಇತರರು ಮೂರು ಕ್ಷೇತ್ರಗಳಲ್ಲಿ ಮುಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ