ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ; ಇದು ಅಪ್ಪಟ ವಿಶ್ವಾಸ ದ್ರೋಹ ಎಂದ ಡಿಎಂಕೆ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲದ ಡಿಎಂಕೆ ಮತ್ತು ಎಐಎಡಿಎಂಕೆ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿರುವ ನಟ ವಿಜಯ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿಗೆ ಮುಂದಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ತನ್ನ ದೀರ್ಘಕಾಲದ ಮಿತ್ರಪಕ್ಷವಾದ ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ “ಅಪ್ಪಟ ವಿಶ್ವಾಸದ್ರೋಹ” ಎಂದು ಕರೆದಿದೆ.
ತಮಿಳುನಾಡಿನಲ್ಲಿ ಸುಮಾರು 60 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್, ಇದೀಗ ವಿಜಯ ನೇತೃತ್ವದ ಸರ್ಕಾರದ ಭಾಗವಾಗಲು ನಿರ್ಧರಿಸಿದೆ. ಈ ನಿರ್ಧಾರವು ಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. “ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗಲೆಲ್ಲಾ ಡಿಎಂಕೆ ಬೆಟ್ಟದಂತೆ ಬೆನ್ನಿಗೆ ನಿಂತಿತ್ತು. ಆದರೆ ಈಗ ಕಾಂಗ್ರೆಸ್ ತನ್ನ ಅಸಲಿ ಮುಖವಾಡ ಕಳಚಿ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಡಿಎಂಕೆ ಖಜಾಂಚಿ ಟಿ.ಆರ್. ಬಾಲು ಟೀಕಿಸಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯ ಅವರ ಟಿವಿಕೆ (TVK) ಪಕ್ಷವು 234 ಕ್ಷೇತ್ರಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಸರಳ ಬಹುಮತಕ್ಕೆ (118) ಇನ್ನೂ 10 ಸ್ಥಾನಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ವಿಜಯ ಅವರು ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ (VCK) ಪಕ್ಷಗಳ ಬೆಂಬಲ ಕೋರಿದ್ದರು. ಕಾಂಗ್ರೆಸ್ 05 ಸ್ಥಾನಗಳಲ್ಲಿ ಜಯಗಳಿಸಿದ್ದರೆ ಎಡಪಕ್ಷಗಳು 04 ಸ್ಥಾನಗಳಲ್ಲಿ ಜಯಗಳಿಸಿವೆ. ವಿಸಿಕೆ 02 ಸ್ಥಾನಗಳಲ್ಲಿ ಗೆದ್ದಿದೆ.

ಪ್ರಮುಖ ಸುದ್ದಿ :-   ಮುಂಗಾರು ಮತ್ತೆ ಚುರುಕು ; ಬಲಗೊಳ್ಳುತ್ತಿರುವ ಮಳೆ ಮೋಡಗಳು ; ಜೂ. 21ರಿಂದ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ

ಕಾಂಗ್ರೆಸ್ ವಿರುದ್ಧ ಡಿಎಂಕೆ ಗಂಭೀರ ಆರೋಪ
“ಕಾಂಗ್ರೆಸ್ ನಮ್ಮ ಮೈತ್ರಿಯಲ್ಲಿದ್ದುಕೊಂಡು 5 ಸ್ಥಾನಗಳನ್ನು ಗೆದ್ದಿತ್ತು. ಈಗ ಆ ಸ್ಥಾನಗಳನ್ನು ಹಿಡಿದುಕೊಂಡು ಮತ್ತೊಂದು ಗುಂಪಿಗೆ ಸೇರುವುದು ಮತದಾರರಿಗೆ ಮಾಡುವ ಅಪಮಾನ. ಬಿಜೆಪಿ ಹೇಗೆ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತದೆಯೋ, ಕಾಂಗ್ರೆಸ್ ಈಗ ತಮಿಳುನಾಡಿನಲ್ಲಿ ಅದನ್ನೇ ಮಾಡುತ್ತಿದೆ ಎಂದು ಬಾಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮಗೆ ಸೋಲು ಮತ್ತು ದ್ರೋಹ ಯಾವುದೂ ಹೊಸದಲ್ಲ. ಆದರೆ ಯಾವುದೂ ಇಲ್ಲಿ ಶಾಶ್ವತವೂ ಅಲ್ಲ. ಕಾಂಗ್ರೆಸ್ ತನ್ನ ನೈತಿಕತೆಯನ್ನು ಮರೆತಿದೆ, ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಡಿಎಂಕೆ ಎಚ್ಚರಿಕೆ ನೀಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement