ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಿರುವ ಬೆನ್ನಲ್ಲೇ, ಸುಮಾರು ಮೂರು ದಶಕಗಳ ಹಿಂದಿನ ಸಂಸತ್ತಿನ ರೋಚಕ ಪ್ರಸಂಗವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕಸರತ್ತುಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಅಂದು ಬಿಜೆಪಿ ನಾಯಕ ಪ್ರಮೋದ ಮಹಾಜನ್ ಅವರು ಮೈತ್ರಿ ರಾಜಕೀಯದ ವಿಡಂಬನೆ ಮಾಡುತ್ತಾ ನೀಡಿದ್ದ ಭಾಷಣವು ಇಂದಿನ ಸ್ಥಿತಿಗೆ ಅತ್ಯಂತ ಪ್ರಸ್ತುತವೆನಿಸುತ್ತಿದೆ.
ತಮಿಳುನಾಡಿನ ಇಂದಿನ ಚಿತ್ರಣ
ಇತ್ತೀಚಿನ ಚುನಾವಣೆಯಲ್ಲಿ ನಟ ವಿಜಯ ನೇತೃತ್ವದ ಟಿವಿಕೆ (TVK) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತದ ಕೊರತೆಯಿಂದಾಗಿ ಸರ್ಕಾರ ರಚನೆಯ ಆಹ್ವಾನ ಸಿಕ್ಕಿಲ್ಲ. ಕೇವಲ ಒಂದು ಅಥವಾ ಎರಡು ಸ್ಥಾನಗಳನ್ನು ಹೊಂದಿರುವ ಸಣ್ಣ ಪಕ್ಷಗಳ ಬೆಂಬಲಕ್ಕಾಗಿ ಅತಿ ದೊಡ್ಡ ಪಕ್ಷವು ಪರದಾಡುತ್ತಿದೆ. ಇತ್ತ ಎರಡನೇ ಅತಿ ದೊಡ್ಡ ಪಕ್ಷ ಅಧಿಕಾರದಿಂದ ದೂರ ಉಳಿದಿದ್ದರೆ, ಮೂರನೇ ಸ್ಥಾನದಲ್ಲಿರುವ ಪಕ್ಷ ಮೈತ್ರಿ ರಚಿಸಿ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿದೆ. ಎಲ್ಲಕ್ಕಿಂತ ಕುತೂಹಲಕಾರಿ ಎಂದರೆ, ಅತಿ ಕಡಿಮೆ ಸ್ಥಾನ ಹೊಂದಿರುವ ಪಕ್ಷವು ಸರ್ಕಾರದಲ್ಲಿ ಸ್ಥಾನ ಪಡೆಯುತ್ತಿದೆಯಾವುದೇ ಪಕ್ಷದ ಸರ್ಕಾರ ಬಂದರೂ ಅದು ಸರ್ಕಾರದಲ್ಲಿ ಸ್ಥಾನ ಪಡೆಯುತ್ತಿದೆ…! ಈ ವಿಚಿತ್ರ ಸನ್ನಿವೇಶವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪರಮ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಕೂಡ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಒಂದಾಗಲಿವೆಯೇ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ.
1996ರ ಅತಂತ್ರ ಲೋಕಸಭೆ ಮತ್ತು ವಾಜಪೇಯಿ ರಾಜೀನಾಮೆ
ಈ ವೇಳೆ ಮೂರು ದಶಕಗಳ ಹಿಂದಿನ ಲೋಕಸಣೆ ಭಾಷಣವನ್ನು ಮತ್ತೆ ಮುನ್ನೆಲೆಗೆ ತಂದಿದೆ. 1996ರ ಲೋಕಸಭಾ ಚುನಾವಣೆಯಲ್ಲಿ 161 ಸ್ಥಾನ ಗೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. ಅಂದಿನ ರಾಷ್ಟ್ರಪತಿ ಶಂಕರದಯಾಳ ಶರ್ಮಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಶಿವಸೇನೆಯ ಬೆಂಬಲದೊಂದಿಗೆ ಬಿಜೆಪಿಗೆ 194 ಸದಸ್ಯರ ಬಲವಿತ್ತು. ಟಿಡಿಪಿ, ಡಿಎಂಕೆಯಂತಹ ಪಕ್ಷಗಳು ಬೆಂಬಲ ನೀಡಬಹುದೆಂದು ವಾಜಪೇಯಿ ನಿರೀಕ್ಷಿಸಿದ್ದರು. ಆದರೆ ‘ಜಾತ್ಯತೀತತೆ’ಯ ಕಾರಣ ನೀಡಿ ಆ ಪಕ್ಷಗಳು ದೂರ ಉಳಿದವು. ಸಂಖ್ಯಾಬಲದ ಕೊರತೆಯಿಂದಾಗಿ ಕೇವಲ 13 ದಿನಗಳಲ್ಲಿ ವಾಜಪೇಯಿ ರಾಜೀನಾಮೆ ನೀಡಬೇಕಾಯಿತು.
ಇದಾದ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ಸೇರಿ ‘ಯುನೈಟೆಡ್ ಫ್ರಂಟ್’ ಮೈತ್ರಿಕೂಟ ರಚಿಸಿದವು. 140 ಸ್ಥಾನ ಹೊಂದಿದ್ದ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಿತು. ಪರಿಣಾಮವಾಗಿ, ಜೂನ್ 1, 1996 ರಂದು ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಮಹಾಜನ ಮಾರ್ಮಿಕ ಭಾಷಣ
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿ ಮತ್ತು ಪ್ರಧಾನಿ ದೇವೇಗೌಡರ ನಡುವೆ ಶೀತಲ ಸಮರ ತೀವ್ರಗೊಂಡಿತ್ತು. ಹಳೆಯ ಭ್ರಷ್ಟಾಚಾರದ ತನಿಖೆಗಳ ವಿಷಯದಲ್ಲಿ ಗೌಡರು ಸೊಪ್ಪು ಹಾಕದಿದ್ದಾಗ, ಮಾರ್ಚ್ 30, 1997 ರಂದು ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯಿತು. ಏಪ್ರಿಲ್ 11 ರಂದು ನಡೆದ ವಿಶ್ವಾಸ ಮತಯಾಚನೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ ಮಹಾಜನ್ ಅವರು ತಮ್ಮ ಭಾಷಣದಲ್ಲಿ ಅಂದಿನ ಪರಿಸ್ಥಿತಿಯನ್ನು ವಿಡಂಬನೆ ಮಾಡುವ ಮೂಲಕ ಇಡೀ ಸದನ ನಗುವಿನಲ್ಲಿ ತೇಲುವಂತೆ ಮಾಡಿದ್ದರು.
ಮಹಾಜನ್ ಅವರು ಚೀನಾ ಪ್ರವಾಸದ ವೇಳೆ ಅಲ್ಲಿನ ಪ್ರತಿನಿಧಿಗಳಿಗೆ ಭಾರತೀಯ ಪ್ರಜಾಪ್ರಭುತ್ವವನ್ನು ವಿವರಿಸಿದ ರೀತಿಯನ್ನು ಮೆಲುಕು ಹಾಕುತ್ತಾ ಅಂದಿನ ಪರಿಸ್ಥಿತಿಯನ್ನು ವಿಡಂಬನೆ ಮಾಡಿದ್ದರು.
“ನಾನು ಪ್ರಮೋದ್ ಮಹಾಜನ್, ಅತಿ ದೊಡ್ಡ ಪಕ್ಷಕ್ಕೆ ಸೇರಿದವನು ಆದರೆ ವಿರೋಧ ಪಕ್ಷದಲ್ಲಿದ್ದೇನೆ. ಶ್ರೀಬಲ್ಲವ್ ಪಾಣಿಗ್ರಾಹಿ ಅವರು ಎರಡನೇ ದೊಡ್ಡ ಪಕ್ಷಕ್ಕೆ (ಕಾಂಗ್ರೆಸ್) ಸೇರಿದವರು, ಅವರು ಹೊರಗಿನಿಂದ ಬೆಂಬಲ ನೀಡುತ್ತಿದ್ದಾರೆ. ಎಂ.ಎ. ಬೇಬಿ ಅವರು ಮೂರನೇ ದೊಡ್ಡ ಪಕ್ಷದವರು (ಎಡಪಕ್ಷ), ಅವರು ಮೈತ್ರಿಯಲ್ಲಿದ್ದಾರೆ ಆದರೆ ಸರ್ಕಾರದಲ್ಲಿಲ್ಲ. ಮತ್ತು ರಮಾಕಾಂತ್ ಖಲಪ್ ಅವರು ತಮ್ಮ ಪಕ್ಷದಿಂದ ಆರಿಸಿ ಬಂದ ಏಕೈಕ ಸದಸ್ಯರು, ಆದರೆ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ ಎಂದು ಚೀನಾ ಪ್ರತಿನಿಧಿಗಳಿಗೆ ಹೇಳಿದ್ದನ್ನು ಲೋಕಸಭೆಯ ತಮ್ಮ ಭಾಷಣದಲ್ಲಿ ನೆನಪಿಸಿಕೊಂಡಿದ್ದರು.
ಈ “ವಿಚಿತ್ರ ವಿಪರ್ಯಾಸ”ವನ್ನು ಮಹಾಜನ್ ಅವರು ಮದುವೆಯ ಉದಾಹರಣೆಯೊಂದಿಗೆ ವಿವರಿಸುತ್ತಾ, “ಇಲ್ಲಿ ವರ (ದೇವೇಗೌಡ) ಮತ್ತು ವಧುವಿನ ತಂದೆ (ಸೀತಾರಾಮ ಕೇಸರಿ) ಮೊದಲ ದಿನದಿಂದಲೇ ಕಿತ್ತಾಡುತ್ತಿದ್ದಾರೆ. ಮಧುಚಂದ್ರ ಇನ್ನೂ ಆರಂಭವಾಗಿಲ್ಲ, ಆದರೆ ವಿಚ್ಛೇದನದ ಸಿದ್ಧತೆ ನಡೆದಿದೆ!” ಎಂದು ಕುಟುಕಿದ್ದರು. ಅಲ್ಲದೆ, ದೇಶದ ಸ್ಥಿತಿಗಿಂತ ಪ್ರಧಾನಿಯವರ ‘ನಿದ್ರೆ’ಯ ಬಗ್ಗೆಯೂ ಮಾರ್ಮಿಕವಾಗಿ ಟೀಕಿಸಿದ್ದರು.
ಇತಿಹಾಸದ ಪುನರಾವರ್ತನೆ
ಗೌಡರ ನಂತರ ಗುಜ್ರಾಲ್ ಪ್ರಧಾನಿಯಾದರೂ ಅವರೂ ಪತನಗೊಂಡರು. ಬಳಿಕ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದರೂ ಜಯಲಲಿತಾ ಬೆಂಬಲ ವಾಪಸ್ ಪಡೆದಾಗ ಅದು ಪತನವಾಗಿತ್ತು. ನಂತರ 1999ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು ಎಂಬುದು ಬೇರೆ ಮಾತು. ನಂತರ 2004ರಿಂದ 2014 ರ ವರೆಗೆ ಯುಪಿಎ ಮೈತ್ರಿಕೂಟ ನಡೆಸಿತ್ತು. 2014 ಮತ್ತು 2019 ರಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿದ್ದರೂ, 2024 ರ ಹೊತ್ತಿಗೆ ಮತ್ತೆ ಮೈತ್ರಿಕೂಟದ ಅನಿವಾರ್ಯತೆಗೆ ಸಿಲುಕಿದೆ.
ಇಂದು ತಮಿಳುನಾಡಿನಲ್ಲಿ ಎದುರಾಗಿರುವ ಅತಂತ್ರ ಸ್ಥಿತಿ ಮತ್ತು ಸಣ್ಣ ಪಕ್ಷಗಳ ‘ರಾಜಕೀಯ ಕಿಂಗ್‌ಮೇಕರ್’ ಆಟವು, 1997ರಲ್ಲಿ ಮಹಾಜನ್ ಅಂದು ಹೇಳಿದ “ಹೊರಗಿನ ಬೆಂಬಲವೆಂದರೆ ಏಣಿ ಏರಿದ ಮೇಲೆ ಅದನ್ನು ಎಳೆದುಕೊಂಡಂತೆ” ಎನ್ನುವ ಮಾತುಗಳನ್ನು ನೆನಪಿಸುತ್ತಿದೆ. ರಾಜಕೀಯ ಸಿದ್ಧಾಂತಗಳಿಗಿಂತ ಅಧಿಕಾರವೇ ಮುಖ್ಯವಾಗುತ್ತಿರುವ ಈ ಸಂದರ್ಭದಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ