ವಿಡಿಯೋ | ಆಕಾಶದಲ್ಲೇ ಡಿಕ್ಕಿ ಹೊಡೆದುಕೊಂಡ ಅಮೆರಿಕ ಯುದ್ಧ ವಿಮಾನಗಳು ; ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಮೌಂಟೇನ್ ಹೋಮ್ (ಅಮೆರಿಕ): ಅಮೆರಿಕದ ಇದಾಹೊದಲ್ಲಿ ಭಾನುವಾರ ನಡೆದ ವೈಮಾನಿಕ ಪ್ರದರ್ಶನ (ಏರ್ ಶೋ)ದ ವೇಳೆ ಅಮೆರಿಕ ನೌಕಾಪಡೆಯ ಎರಡು ಅತ್ಯಾಧುನಿಕ ಯುದ್ಧ ವಿಮಾನಗಳು ಹಾರಾಟದ ಮಧ್ಯೆಯೇ ಪರಸ್ಪರ ಢಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿ ಧ್ವಸಂಗೊಂಡಿವೆ. ಆದರೆ, ವಿಮಾನಗಳು ನೆಲಕ್ಕೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುನ್ನ ಅವುಗಳಲ್ಲಿದ್ದ ಎಲ್ಲಾ ನಾಲ್ಕು ಸಿಬ್ಬಂದಿ ಯಶಸ್ವಿಯಾಗಿ ಎಜೆಕ್ಟ್ (ಹೊರಕ್ಕೆ ಜಿಗಿಯುವಿಕೆ) ಆಗುವ ಮೂಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಪಶ್ಚಿಮ ಇದಾಹೊದ ಮೌಂಟೇನ್ ಹೋಮ್ ಏರ್ ಫೋರ್ಸ್ ನೆಲೆಯಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಪ್ರದರ್ಶನದ ವೇಳೆ ಅಮೆರಿಕ ನೌಕಾಪಡೆಯ ಎರಡು ‘EA-18G ಗ್ರೋಲರ್’ (EA-18G Growler) ಯುದ್ಧ ವಿಮಾನಗಳು ಆಗಸದಲ್ಲಿ ಪಲ್ಟಿ ಹೊಡೆಯುವ ಸಾಹಸ ಪ್ರದರ್ಶಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಭೀಕರ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ವಿಡಿಯೋದಲ್ಲಿ, ಕಸರತ್ತು ನಡೆಸುತ್ತಿದ್ದ ಎರಡು ವಿಮಾನಗಳು ಆಕಾಶದಲ್ಲೇ ಪರಸ್ಪರ ಡಿಕ್ಕಿ ಹೊಡೆಯುತ್ತವೆ. ಮರುಕ್ಷಣವೇ ವಿಮಾನಗಳು ಬೆಂಕಿಯ ಜ್ವಾಲೆಯೊಂದಿಗೆ ಕೆಳಕ್ಕೆ ಉರುಳಲಾರಂಭಿಸುತ್ತವೆ. ಆದರೆ, ನೆಲಕ್ಕೆ ಅಪ್ಪಳಿಸುವ ಕೆಲವೇ ಸೆಕೆಂಡುಗಳ ಮೊದಲು ನಾಲ್ಕು ಪ್ಯಾರಾಚೂಟ್‌ಗಳು ಆಕಾಶದಲ್ಲಿ ತೆರೆದುಕೊಳ್ಳುವುದು ಮತ್ತು ಪೈಲಟ್‌ಗಳು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕೆಳಕ್ಕೆ ಇಳಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಾಷಿಂಗ್ಟನ್ ಮೂಲದ ವಿಮಾನಗಳು
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ವಿಮಾನಗಳು ವಾಷಿಂಗ್ಟನ್ ರಾಜ್ಯದ ವಿಡ್ಬೆ ದ್ವೀಪದಲ್ಲಿ ನೆಲೆಗೊಂಡಿರುವ ‘ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕ್ವಾಡ್ರನ್ 129’ ಕ್ಕೆ ಸೇರಿದವಾಗಿವೆ. ಈ ಸ್ಕ್ವಾಡ್ರನ್ ಬಳಸುವ EA-18G ಗ್ರೋಲರ್ ವಿಮಾನಗಳು ಬೋಯಿಂಗ್ F/A-18E/F ಸೂಪರ್ ಹಾರ್ನೆಟ್ ಮಾದರಿಯ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧ ವಿಮಾನಗಳಾಗಿವೆ. ಸಾಮಾನ್ಯವಾಗಿ ಈ ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇರುತ್ತಾರೆ.
“ಎರಡೂ ಜೆಟ್‌ಗಳಲ್ಲಿದ್ದ ನಾಲ್ಕೂ ಸಿಬ್ಬಂದಿ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ” ಎಂದು ಅಮೆರಿಕ ನೌಕಾಪಡೆ ಧೃಡಪಡಿಸಿದೆ. ಯುಎಸ್ ಪೆಸಿಫಿಕ್ ಫ್ಲೀಟ್ ಅಡಿಯಲ್ಲಿನ ನೇವಲ್ ಏರ್ ಫೋರ್ಸ್ ವಕ್ತಾರೆ ಕಮಾಂಡರ್ ಅಮೆಲಿಯಾ ಉಮಾಯಮ್ ಮಾತನಾಡಿ, “ನಿಗದಿತ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಏರ್ ಶೋ ರದ್ದು, ಬೇಸ್ ಲಾಕ್‌ಡೌನ್
ಅಪಘಾತ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ಏರ್ ಬೇಸ್ ಅನ್ನು ಲಾಕ್‌ಡೌನ್ ಮಾಡಿದರು ಮತ್ತು ಪ್ರದರ್ಶನದ ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು. ವಿಮಾನಗಳು ಬಿದ್ದ ಜಾಗದಿಂದ ದಟ್ಟವಾದ ಹೊಗೆಯ ರೇಖೆಗಳು ಆಕಾಶಕ್ಕೆ ಚಿಮ್ಮುತ್ತಿರುವುದನ್ನು ವೀಕ್ಷಕರು ಆತಂಕದಿಂದ ನೋಡುತ್ತ ನಿಂತಿದ್ದರು.
ಆಧುನಿಕ ಮಿಲಿಟರಿ ವಿಮಾನಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅಮೆರಿಕದ ಅತ್ಯಂತ ಪ್ರಸಿದ್ಧ ವೈಮಾನಿಕ ಪ್ರದರ್ಶನ ತಂಡವಾದ ‘ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಥಂಡರ್‌ಬರ್ಡ್ಸ್’ ಕೂಡ ಭಾಗವಹಿಸಿತ್ತು.
ಹವಾಮಾನ ಹೇಗಿತ್ತು?:
ಅಪಘಾತದ ಸಮಯದಲ್ಲಿ ಹವಾಮಾನವು ಬಹುತೇಕ ಪೂರಕವಾಗಿತ್ತು ಮತ್ತು ಗೋಚರತೆ (Visibility) ಉತ್ತಮವಾಗಿತ್ತು ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಅಪಘಾತದ ಆಸುಪಾಸು ಗಂಟೆಗೆ ಸುಮಾರು 47 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು ಎಂದು ವರದಿಯಾಗಿದೆ.
ಇದು ಯುಎಸ್ ನೌಕಾಪಡೆಯ ಪ್ರಮುಖ ಎಲೆಕ್ಟ್ರಾನಿಕ್ ಯುದ್ಧ ವಿಮಾನವಾಗಿದ್ದು, ಯುದ್ಧದ ಸಮಯದಲ್ಲಿ ಶತ್ರುಗಳ ರಾಡಾರ್ ಮತ್ತು ಸಂವಹನ ವ್ಯವಸ್ಥೆಗಳನ್ನು ಜಾಮ್ ಮಾಡಲು (ನಿಷ್ಕ್ರಿಯಗೊಳಿಸಲು) ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement