ಯುವತಿಯ ಹೆಣಕ್ಕೆ ತಾಳಿ ಕಟ್ಟಿ ಮದುವೆಯಾದ ಯುವಕ…!

ಗಿರೀದಿಹ್ (ಜಾರ್ಖಂಡ್) : ಗಿರೀದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರೀದಿಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳ ನಿಗೂಢ ಸಾವಿನ ಪ್ರಕರಣವೊಂದು ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ತಿರುವು ಪಡೆದುಕೊಂಡಿದೆ. ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಯುವಕನೇ, ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಬಂದು, ಆಕೆಯ ಮೃತದೇಹಕ್ಕೆ ಶಾಸ್ತ್ರೋಕ್ತವಾಗಿ ಸಿಂಧೂರವಿಟ್ಟು, ಮದುವೆ ವಿಧಿವಿಧಾನಗಳನ್ನು ಪೂರೈಸಿ ತಾಳಿಕಟ್ಟಿ ಮದುವೆಯಾಗಿದ್ದಾನೆ. ನಂತರ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾನೆ !
ನಾಲ್ಕು ತಿಂಗಳ ಹಿಂದಷ್ಟೇ ಆಗಿದ್ದ ನಿಶ್ಚಿತಾರ್ಥ
ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಮನೀಶ ಮುರ್ಮು ಮತ್ತು ಮೃತ ಯುವತಿಯ ಕುಟುಂಬಸ್ಥರು ಸೇರಿ ಸುಮಾರು ನಾಲ್ಕು ತಿಂಗಳ ಹಿಂದಷ್ಟೇ ಇಬ್ಬರಿಗೂ ಮದುವೆ ನಿಶ್ಚಯಿಸಿದ್ದರು. ನಿಶ್ಚಿತಾರ್ಥ ಮುಗಿದ ನಂತರ, ಮನೀಶ್ ತನ್ನ ಭಾವಿ ಪತ್ನಿಯನ್ನು ತನ್ನ ಮನೆಗೆ ಕರೆತಂದು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದ. ಕಳೆದ ನಾಲ್ಕು ತಿಂಗಳುಗಳಿಂದ ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಂತೆ ಒಂದೇ ಸೂರಿನಡಿ ವಾಸಿಸುತ್ತಿದ್ದರು.

ಇತ್ತೀಚೆಗೆ ಯುವತಿಯ ಪೋಷಕರು ಮದುವೆ ಮಾಡುವಂತೆ ಮನೀಶ್ ಕುಟುಂಬದವರ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದರು ಎನ್ನಲಾಗಿದೆ. ಆದರೆ, ಕಳೆದ ಶುಕ್ರವಾರ ಬೆಳಗ್ಗೆ ಯುವತಿಯ ಪೋಷಕರಿಗೆ “ನಿಮ್ಮ ಮಗಳಿಗೆ ಆರೋಗ್ಯ ಸರಿಯಿಲ್ಲ” ಎಂಬ ಕರೆ ಬಂದಿದೆ. ಗಾಬರಿಗೊಂಡ ಪೋಷಕರು ತಕ್ಷಣ ಮನೀಶ್ ಮನೆಗೆ ಧಾವಿಸಿ, ಮಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ತಡವಾಗಿದ್ದು, ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಯುವತಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಮನೀಶ್ ಮದುವೆಯಿಂದ ತಪ್ಪಿಸಿಕೊಳ್ಳಲು ನನ್ನ ಮಗಳಿಗೆ ಕ್ರೂರವಾಗಿ ಥಳಿಸಿದ್ದಾನೆ ಮತ್ತು ಬಲವಂತವಾಗಿ ವಿಷ ಉಣಿಸಿದ್ದಾನೆ. ಮದುವೆಯ ನೆಪದಲ್ಲಿ ಆಕೆಯನ್ನು ಮನೆಯಲ್ಲೇ ಕೂಡಿಟ್ಟುಕೊಂಡು, ಆಕೆಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟು ಸಾಯುವಂತೆ ಮಾಡಲಾಗಿದೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಶವ ಪಡೆಯಲು ನಿರಾಕರಿಸಿದ ಎರಡೂ ಕುಟುಂಬಗಳು!
ಆಸ್ಪತ್ರೆಯ ಮಾಹಿತಿ ಮೇರೆಗೆ ಧಾವಿಸಿದ ಪೊಲೀಸರು ಯುವತಿಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದರು. ಆದರೆ, ಆ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಯುವತಿಯ ನಿಗೂಢ ಸಾವಿನಿಂದ ಕೋಪೋದ್ರಿಕ್ತಗೊಂಡ ಎರಡೂ ಕುಟುಂಬಗಳ ನಡುವೆ ಭಾರಿ ಗಲಾಟೆ ನಡೆದು, ಅಂತಿಮವಾಗಿ ಇರಡೂ ಕಡೆಯವರು ಶವವನ್ನು ಸ್ವೀಕರಿಸಲು ನಿರಾಕರಿಸಿದರು.
ಬದಲಾದ ಪರಿಸ್ಥಿತಿಯಿಂದ ಕಂಗಾಲಾದ ಪೊಲೀಸರು ಶವವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಂದು ರಾತ್ರಿಯಿಡೀ ಅಲ್ಲೇ ಇರಿಸಬೇಕಾಯಿತು. ಶನಿವಾರದ ವೇಳೆಗೆ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ ಪೊಲೀಸರು, ಭಾರಿ ಪೊಲೀಸ್ ಭದ್ರತೆಯೊಂದಿಗೆ ಶವವನ್ನು ಯುವಕ ಮನೀಶನ ಗ್ರಾಮಕ್ಕೆ ಕೊಂಡೊಯ್ದರು.

ಜೈಲಿನಿಂದ ಬಂದು ಶವಕ್ಕೆ ಸಿಂಧೂರವಿಟ್ಟ ವರ!
ಯುವತಿಯ ತಂದೆಯ ದೂರಿನ ಮೇರೆಗೆ ಪೊಲೀಸರು ಈಗಾಗಲೇ ಆರೋಪಿ ಮನೀಶ್ ಮುರ್ಮು ವಿರುದ್ಧ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದರು. ಆದರೆ, ಮನೀಶ್ ಕುಟುಂಬಸ್ಥರ ಒತ್ತಾಯ ಹಾಗೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನವಾಗಿ, ಬಂಧಿತ ಆರೋಪಿ ಮನೀಶ್‌ನನ್ನು ಪೊಲೀಸ್ ಕಾವಲಿನಲ್ಲೇ ಆತನ ಮನೆಗೆ ಕರೆತರಲಾಯಿತು.
ಅಲ್ಲಿ ನೆರೆದಿದ್ದ ನೂರಾರು ಜನರ ಸಮ್ಮುಖದಲ್ಲಿ, ಮನೀಶ್ ತೀರಿಕೊಂಡಿದ್ದ ತನ್ನ ಭಾವಿ ಪತ್ನಿಯ ಹಣೆಗೆ ಸಿಂಧೂರ ಇಟ್ಟು, ಸಾಂಪ್ರದಾಯಿಕ ಮದುವೆಯ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಆಕೆಯನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ ಸರಣಿ ವಿಧಿಗಳ ನಂತರ, ಅವಳ ಅಂತಿಮ ಸಂಸ್ಕಾರವನ್ನು ನೆರವೇರಿಸಿ ಚಿತೆಗೆ ಬೆಂಕಿ ಇಟ್ಟಿದ್ದಾನೆ.
ಸದ್ಯ ಯುವತಿಯ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ತಿಳಿಯಬೇಕಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement