ವಿಡಿಯೋ | ಅಸ್ತಿತ್ವದಲ್ಲೇ ಇಲ್ಲದ ಭಾರತದ ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದಾಗಿ ಬಡಾಯಿ ಕೊಚ್ಚಿಕೊಂಡ ಪಾಕ್ ಸೇನಾಧಿಕಾರಿ…!

ಕಳೆದ ವರ್ಷ ನಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿತ್ತು. ಭಾರತದ ‘ಆಪರೇಷನ್ ಸಿಂಧೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ನಗರಗಳು ಮತ್ತು ರಕ್ಷಣಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.
ಪಾಕಿಸ್ತಾನದ ‘ಆಪರೇಷನ್ ಬುನ್ಯಾನ್ ಉಲ್ ಮರ್ಸೂಸ್’ ಹೆಸರಿನ ಸೇನಾ ಕಾರ್ಯಾಚರಣೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಭಾರತೀಯ ವಾಯುಪ್ರದೇಶದ ಮೇಲೆ ಹಲವು ಬಾರಿ ವಾಯು ದಾಳಿಗೆ ಮುಂದಾಗಿತ್ತು. 2025ರ ಮೇ 10 ರಂದು ನಡೆದ ಈ ಗಡಿ ಆಚೆಯ ದಾಳಿಯ ಸಮಯದಲ್ಲಿ ಪಾಕಿಸ್ತಾನಿ ಮಿಲಿಟರಿಯು ‘ಫತಾಹ್-1’ (Fatah-1) ಗೈಡೆಡ್ ಫಿರಂಗಿ ರಾಕೆಟ್ ಅನ್ನು ಬಳಸಿತ್ತು. ಆದರೆ, ಹರಿಯಾಣದ ಸಿರ್ಸಾ ಮೇಲೆ ಹಾರುತ್ತಿದ್ದ ಆ ರಾಕೆಟ್ ಅನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದು, ಮಧ್ಯದಲ್ಲೇ ಹೊಡೆದು ಉರುಳಿಸಿತ್ತು.

ಅಸ್ತಿತ್ವದಲ್ಲೇ ಇಲ್ಲದ ವಾಯುನೆಲೆಗಳ ಮೇಲೆ ದಾಳಿ!
ಪ್ರಸ್ತುತ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಅವರು, “ಮೇ 10 ರಂದು ನಮ್ಮ ಕ್ಷಿಪಣಿ ದಾಳಿಗಳು ಭಾರತದ ಎರಡು ವಾಯುನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿವೆ” ಎಂದುಬಡಾಯಿ ಕೊಚ್ಚಿಕೊಂಡಿದ್ದಾರೆ. ಆದರೆ ಹಾಸ್ಯಾಸ್ಪದ ಸಂಗತಿಯೆಂದರೆ, ಅವರು ಉಲ್ಲೇಖಿಸಿದ ವಾಯುನೆಲೆಗಳು ಭಾರತದಲ್ಲಿ ಎಲ್ಲಿಯೂ ಇಲ್ಲ!
“ನಮಗೆ ರಾಜೌರಿ ವಾಯುನೆಲೆ ಮತ್ತು ಮಾಮುನ್ ವಾಯುನೆಲೆ ಎಂಬ ಎರಡು ಗುರಿಗಳನ್ನು ನೀಡಲಾಗಿತ್ತು, ನಾವು ಅವುಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದ್ದೇವೆ,” ಎಂದು ಆ ಅಧಿಕಾರಿ ಸಂದರ್ಶನದಲ್ಲಿ ಹೇಳಿದ್ದಾರೆ. ವಾಸ್ತವ ಏನೆಂದರೆ, ರಾಜೌರಿ ಎಂಬುದು ಜಮ್ಮು ಮತ್ತು ಕಾಶ್ಮೀರದ ಒಂದು ಜಿಲ್ಲೆಯಾಗಿದೆಯೇ ಹೊರತು ಅಲ್ಲಿ ಯಾವುದೇ ವಾಯುಪಡೆಯ ನೆಲೆ (Air Force base) ಇಲ್ಲ. ಇನ್ನು ಮಾಮುನ್ ಎಂಬುದು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ಸೇನೆಯ ಮಿಲಿಟರಿ ಕಂಟೋನ್ಮೆಂಟ್ ಆಗಿದೆಯೇ ಹೊರತು ಅದು ವಾಯುನೆಲೆಯಲ್ಲವೇ ಅಲ್ಲ!
ಕ್ಯಾಪ್ಟನ್ ಮುನೀಬ್ ಜಮಾಲ್ ಎಂದು ಗುರುತಿಸಲಾದ ಈ ಮಿಲಿಟರಿ ಅಧಿಕಾರಿ, “ಕ್ಷಿಪಣಿ ಉಡಾವಣೆಯ ಸಿದ್ಧತೆಯ ಸಮಯದಲ್ಲಿ ನಾಗರಿಕರ ಉಪಸ್ಥಿತಿಯು ಕಾರ್ಯಾಚರಣೆಯ ಸಂದರ್ಭದಲ್ಲಿ ನಮಗೆ ಧೈರ್ಯ ತುಂಬುವ ಅಂಶವಾಗಿ ಕೆಲಸ ಮಾಡಿತು” ಎಂದೂ ಹೇಳಿಕೊಂಡಿದ್ದಾರೆ.

ನೆಟ್ಟಿಗರಿಂದ ಭಾರಿ ಟ್ರೋಲ್
ಈ ವಿಡಿಯೋ ತುಣುಕು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಪಾಕ್ ಅಧಿಕಾರಿಯ ಅಜ್ಞಾನವನ್ನು ನೋಡಿ ಲೇವಡಿ ಮಾಡುತ್ತಿದ್ದಾರೆ. ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, “ಕಲ್ಪನಾ ಲೋಕದ ‘ರಾಜೌರಿ ಮತ್ತು ಮಾಮುನ್ ವಾಯುನೆಲೆ’ಗಳನ್ನು ಹುಡುಕಲು ಪುರಾತತ್ವಶಾಸ್ತ್ರಜ್ಞರು, ಕಾರ್ಟೋಗ್ರಾಫರ್‌ಗಳು, ಗೂಗಲ್ ಮ್ಯಾಪ್ಸ್ ಮತ್ತು ಭಾರತೀಯ ವಾಯುಪಡೆ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ!” ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಫತಾಹ್-1 ಕ್ಷಿಪಣಿಯು ರಾಜೌರಿ ಮತ್ತು ಮಾಮುನ್ ವಾಯುನೆಲೆಗಳ ಮೇಲೆ ಎಷ್ಟು ಭೀಕರವಾಗಿ ದಾಳಿ ಮಾಡಿದೆ ಎಂದರೆ, ಅವು ಈಗ ಅಸ್ತಿತ್ವದಲ್ಲೇ ಇಲ್ಲದಂತಾಗಿವೆ! ಮುಂದಿನ ಟಾರ್ಗೆಟ್ ಅಟ್ಲಾಂಟಿಸ್ ದ್ವೀಪನಾ?” ಎಂದು ವ್ಯಂಗವಾಗಿ ಪೋಸ್ಟ್ ಮಾಡಿದ್ದಾರೆ.
ಪತ್ತೆಯಾದ ಪಾಕಿಸ್ತಾನದ ಕ್ಷಿಪಣಿ ಅವಶೇಷಗಳು
ಪಾಕಿಸ್ತಾನದ ಈ ವಿಫಲ ದಾಳಿಯ ಕ್ಷಿಪಣಿ ಅವಶೇಷಗಳು ಭಾರತದ ಹಲವು ಅನಿರೀಕ್ಷಿತ ಸ್ಥಳಗಳಲ್ಲಿ ಪತ್ತೆಯಾಗಿವೆ. ಹರಿಯಾಣದ ಸಿರ್ಸಾ, ರಾಜಸ್ಥಾನದ ಬಾರ್ಮರ್ ಮತ್ತು ಪಂಜಾಬ್‌ನ ಜಲಂಧರ್‌ನ ಕೃಷಿ ಗದ್ದೆಗಳಲ್ಲಿ ಈ ಅವಶೇಷಗಳು ಬಿದ್ದಿದ್ದವು. ಇದಲ್ಲದೆ, 2025ರ ಸೆಪ್ಟೆಂಬರ್‌ನಲ್ಲಿ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಿಂದಲೂ ಫತಾಹ್-1 ಕ್ಷಿಪಣಿಗೆ ಸೇರಿದ್ದೆಂದು ಶಂಕಿಸಲಾದ ಅವಶೇಷಗಳನ್ನು ಹೊರತೆಗೆಯಲಾಗಿತ್ತು.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement