ಶಿರಸಿ: ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ತವರೂರಾದ ಮಲೆನಾಡಿನಲ್ಲಿ ಪ್ರಕೃತಿ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ಸಾಗುತ್ತಾ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿರಸಿ ಸುತ್ತಮುತ್ತಲಿನ ಅನೇಕ ಕಡೆ ಜೇನುನೊಣಗಳ ಸಾಮೂಹಿಕ ಸಾವಿನ ಘಟನೆಗಳು ಕೃಷಿ ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಮತೋಲನ ಬಿಗಡಾಯಿಸುತ್ತಿರುವುದಕ್ಕೆ ಮುನ್ಸೂಚನೆಯಂತೆ ಕಂಡುಬರುತ್ತಿದೆ.
ಅಡಕೆ ಮುಗುಳು (ಹೂಗೊಂಚಲು) ಉದುರದಂತೆ ತಡೆಯಲು ಮತ್ತು ಕೃಷಿಗೆ ಎದುರಾಗುವ ವಿವಿಧ ಕೀಟಗಳ ಬಾಧೆಯನ್ನು ನಿಯಂತ್ರಿಸಲು ರೈತರು ಅವಿಜ್ಞಾನಿಕವಾಗಿ ಸಿಂಪಡಿಸುತ್ತಿರುವ ತೀವ್ರ ರಾಸಾಯನಿಕಗಳು, ಪ್ರಕೃತಿಯ ಅತ್ಯುತ್ತಮ ಪರಾಗಸ್ಪರ್ಶಕಗಳಾದ ಜೇನುನೊಣಗಳ ಪಾಲಿಗೆ ಯಮನಾಗಿ ಪರಿಣಮಿಸಿವೆ.
ಇತ್ತೀಚಿನ ಘಟನೆಯೊಂದರಲ್ಲಿ ಶಿರಸಿ ತಾಲೂಕಿನ ಬನವಾಸಿ ರಸ್ತೆಗೆ ಹೊಂದಿಕೊಂಡಿರುವ ವಡ್ಡಿನಕೊಪ್ಪದಲ್ಲಿ ಜೇನು ಸಾಕಣೆ ಮಾಡಿದ ರೈತರೊಬ್ಬರು ಪಕ್ಕದ ಅಡಕೆ ತೋಟದಲ್ಲಿ ಸಿಂಪಡಿಸಿದ ರಾಸಾಯನಿಕದಿಂದ ತಾವು ಸಾಕಿದ್ದ ಜೇನು ಸಂತತಿಯನ್ನೇ ಕಳೆದುಕೊಂಡಿದ್ದಾರೆ. ಅವರು ಸಾಕಿದ್ದ 15ಕ್ಕೂ ಹೆಚ್ಚು ಜೇನುಪೆಟ್ಟಿಗೆಗಳಲ್ಲಿನ ಜೇನುಹುಳಗಳು ಅಡಕೆ ಮುಗುಳು ಉದುರುವುದನ್ನು ತಡೆಯಲು ಸಿಂಪಡಿಸಿದ ರಾಸಾಯನಿಕದಿಂದ ಸಾಮೂಹಿಕವಾಗಿ ನಾಶವಾಗಿವೆ ಎಂಬ ಆರೋಪ ಕೇಳಿಬಂದಿದೆ. ಅಡಕೆ ಹೂಗಳಿಂದ ಮಕರಂದ ಸಂಗ್ರಹಿಸಲು ತೆರಳಿದ್ದ ಈ ಜೇನು ಹುಳುಗಳು ಅದಕ್ಕೆ ರಾಸಾಯನಿಕ ಸೇರಿಕೊಂಡಿದ್ದರಿಂದ ಅದೇ ಮಕರಂದ ವಿಷವಾಗಿ ಪರಿಣಮಿಸಿ ಜೇನು ಗೂಡಿಗೆ ಗೂಡೇ ಸತ್ತುಬಿದ್ದಿವೆ.
ಅಡಕೆ ಮರಗಳಲ್ಲಿ ಹೂ ಬಿಡುವ ಮತ್ತು ಮುಗುಳು ಮೂಡುವ ಅವಧಿಯಲ್ಲಿ ಅದು ಉದುರದಂತೆ ತಡೆಯಲು ಸಿಂಪಡಿಸುವ ತೀವ್ರ ಪ್ರಮಾಣದ ರಾಸಾಯನಿಕಗಳು ಜೇನುನೊಣಗಳ ಸಂತತಿಯನ್ನೇ ನಾಶ ಮಾಡುತ್ತಿದೆ. ಯಾಕೆಂದರೆ ಇದೇ ಅವಧಿಯಲ್ಲಿ ಜೇನುನೊಣಗಳು ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಲು ಅಡಕೆ ಹೂಗೊಂಚಲುಗಳಿಗೆ ಭೇಟಿ ನೀಡುತ್ತವೆ. ರಾಸಾಯನಿಕ ಮಿಶ್ರಿತ ಹೂವುಗಳ ಸಂಪರ್ಕಕ್ಕೆ ಬರುವ ಜೇನುನೊಣಗಳು ತಕ್ಷಣವೇ ಮೃತಪಡುತ್ತವೆ. ಸಿಂಪಡಿಸುವ ಕೆಲವಷ್ಟು ರಾಸಾಯನಿಕಗಳಿಂದ ಜೇನುಹುಳುಗಳು ತಕ್ಷಣವೇ ಸತ್ತರೆ, ಕೆಲವಷ್ಟಯ ರಾಸಾಯನಿಕಗಳು ಜೇನುನೊಣಗಳ ನರಮಂಡಲದ ಮೇಲೆ (Neurotoxicity) ತೀವ್ರ ಪರಿಣಾಮ ಬೀರುತ್ತವೆ. ಇದರಿಂದಾಗಿ ದಾರಿತಪ್ಪುವ ಜೇನುನೊಣಗಳಿಗೆ ತಮ್ಮ ಗೂಡಿಗೆ ಮರಳಲು ಸಾಧ್ಯವಾಗದೆ ಅರ್ಧ ಹಾದಿಯಲ್ಲೇ ಸಾಯುತ್ತವೆ. ಒಂದು ವೇಳೆ ವಿಷದ ಅಂಶ ಹೊತ್ತ ಜೇನುನೊಣ ಗೂಡಿಗೆ ಮರಳಿದರೂ, ಇಡೀ ಜೇನು ಸಂಕುಲವೇ (Colony Collapse Disorder) ನಾಶವಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಹಲವಾರು ಜೇನು ಸಾಕಣೆದಾರರು.
ಜೀವ ರಾಶಿಗಳ ಉಳಿವಿಗೆ ಜೇನುನೊಣಗಳು ಬೇಕು…
ಅವು ಜೀವರಾಶಿಯ ಉಳಿವಿಗಾಗಿ ಕೆಲಸ ಮಾಡುವ ನೈಸರ್ಗಿಕ ಕಾರ್ಮಿಕರು. ಅಡಕೆ, ಕಾಳುಮೆಣಸು, ಏಲಕ್ಕಿ, ಕೋಕೋ ಸೇರಿದಂತೆ ನೂರಾರು ಗಿಡ-ಮರಗಳ ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಜೇನುನೊಣಗಳ ಪಾತ್ರ ಬಹಳ ದೊಡ್ಡದು. ಹೀಗಾಗಿ ಜೇನುನೊಣಗಳ ಸಾವು ಅದು ಕೇವಲ ಜೇನು ಸಾಕಾಣಿಕೆದಾರರಿಗೆ ಆಗುವ ನಷ್ಟ ಮಾತ್ರವಲ್ಲ, ಅದು ಒಟ್ಟಾರೆ ಕೃಷಿ ಇಳುವರಿಯ ಕುಸಿತಕ್ಕೂ ಕಾರಣವಾಗುತ್ತವೆ. ಅಡಕೆ ತೋಟದ ಸುತ್ತಮುತ್ತ ಜೇನು ಪೆಟ್ಟಿಗೆಗಳಿದ್ದರೆ ಇದು ಮಕರಂದಕ್ಕಾಗಿ ಬಂದು ಪರಾಗಸ್ಪರ್ಷ ಕ್ರಿಯೆಗೆ ಸಹಕರಿಸುತ್ತವೆ. ಇದರಿಂದ ಅಡಕೆ ಕಾಯಿಗಳು ಹಿಡಿಯುವ ಹೆಚ್ಚುತ್ತದೆ. ಹೀಗಾಗಿ ರೈತ ತನ್ನ ತೋಟಕ್ಕೆ ರಾಸಾಯನಿಕ ಸಿಂಪಡಿಸಿದರೆ ಮಕರಂದಕ್ಕೆ ಬರುವ ಜೇನು ನೊಣಗಳು ಸತ್ತರೆ ಅದರ ನೇರ ಪರಿಣಾಮ ಅಡಕೆಗೆ ಔಷಧ ಸಿಂಪಡಿಸಿದ ಬೆಳೆಗಾರನ ತೋಟದ ಮೇಲೂ ಆಗುತ್ತದೆ. ಏಕೆಂದರೆ ಸೂಕ್ತ ಪರಾಗಸ್ಪರ್ಶವಾಗದಿದ್ದರೆ ಕಾಯಿ ಕಚ್ಚುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.
ಅಡಕೆ ಬೆಳೆಯನ್ನು ರಕ್ಷಿಸುವುದು ಮುಖ್ಯ. ಇದರ ಜೊತೆಗೆ ಜೇನುನೊಣಗಳನ್ನು ಉಳಿಸುವುದು ಅಷ್ಟೇ ಅತ್ಯಾವಶ್ಯಕ. ಇದಕ್ಕಾಗಿ ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಜೈವಿಕ ಕೀಟನಾಶಕಗಳನ್ನು ಬಳಸಬಹುದಾಗಿದೆ. ಒಂದು ವೇಳೆ ಸಿಂಪಡಿಸಲೇಬೇಕು ಎಂದಿದ್ದರೆ ಅಡಕೆ ಬೆಳೆಗಾರರು ತೋಟಕ್ಕೆ ಔಷಧ ಸಿಂಪಡಿಸುವ 24 ರಿಂದ 48 ಗಂಟೆಗಳ ಮುಂಚಿತವಾಗಿ ತಮ್ಮ ಸುತ್ತಮುತ್ತಲಿನ ಜೇನು ಸಾಕಾಣಿಕೆದಾರರಿಗೆ ಮಾಹಿತಿ ನೀಡಬೇಕು. ಇದರಿಂದ ಅವರು ಜೇನುಪೆಟ್ಟಿಗೆಗಳ ದ್ವಾರವನ್ನು ತಾತ್ಕಾಲಿಕವಾಗಿ ಮುಚ್ಚಿ ಜೇನುಗಳನ್ನು ರಕ್ಷಿಸಿಕೊಳ್ಳಬಹುದು. ಅಲ್ಲದೆ, ಜೇನುನೊಣಗಳಿಗೆ ಕಡಿಮೆ ಹಾನಿಕಾರಕವಾಗಿರುವ (Green label) ಕೀಟನಾಶಕಗಳನ್ನು ಮಾತ್ರ ನಿಯಮಿತ ಪ್ರಮಾಣದಲ್ಲಿ ಬಳಸಬೇಕು.
ಅಡಕೆ ಕೃಷಿ ಮತ್ತು ಜೇನು ಸಾಕಾಣಿಕೆ ಪರಸ್ಪರ ವಿರೋಧಿಗಳಲ್ಲ, ಬದಲಿಗೆ ಸಹಬಾಳ್ವೆಯ ಸಂಕೇತಗಳು. ತೋಟಗಾರಿಕಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು (KVK) ಮತ್ತು ಸ್ಥಳೀಯ ಗ್ರಾಮ ಪಂಚಾಯತಗಳು ಈ ನಿಟ್ಟಿನಲ್ಲಿ ರೈತರಲ್ಲಿ ವೈಜ್ಞಾನಿಕ ಸಿಂಪಡಣೆಯ ಕುರಿತು ಜಾಗೃತಿ ಮೂಡಿಸಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ