5 ತಿಂಗಳ ಸ್ಕೆಚ್‌, ಚಾಕು ಇರಿತ, ಸುಟ್ಟ ಕಾರಿನಲ್ಲಿ ಶವಗಳು : ಕುಟುಂಸ್ಥರ ಭೀಕರ ಹತ್ಯಾಕಾಂಡಕ್ಕೆ ಅಪ್ರಾಪ್ತನೇ ಮಾಸ್ಟರ್ ಮೈಂಡ್ !

ಜೈಪುರ: ಕೌಟುಂಬಿಕ ಕಲಹ, ಆಸ್ತಿ ವಿವಾದದ ಆರೋಪ, ತಿಂಗಳುಗಟ್ಟಲೆ ನಡೆಸಿದ ಮಾಸ್ಟರ್ ಪ್ಲಾನ್ ಮತ್ತು ಅಪರಾಧ ಜಗತ್ತಿನ ವೆಬ್ ಸೀರೀಸ್‌ಗಳ ಮೇಲಿದ್ದ ಅತಿಯಾದ ವ್ಯಾಮೋಹದಿಂದ ಅಪರಾಧದ ಗೀಳು ! ಅಜ್ಮೀರ್‌ನ ಮಾಜಿ ಸರಪಂಚ ರಾಮ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ, ತಾಯಿ ಮತ್ತು ಸೋದರ ಸೊಸೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊರಹಾಕಿರುವ ಆಘಾತಕಾರಿ ಸತ್ಯಗಳಿವು.
ಮೊದಲಿಗೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಅಪಘಾತ ಎಂದು ಭಾವಿಸಲಾಗಿದ್ದ ಈ ಘಟನೆಯು, ಇದೀಗ ರಾಜಸ್ಥಾನದ ಅತ್ಯಂತ ಭಯಾನಕ ಮತ್ತು ರಕ್ತಸಿಕ್ತ ಕೊಲೆಯಾಗಿ ಮಾರ್ಪಟ್ಟಿದೆ. ರಾಮ ಸಿಂಗ್ ಚೌಧರಿಯವರ 17 ವರ್ಷದ ಅಪ್ರಾಪ್ತ ಮಗನ ವಿಚಿತ್ರ ನಡವಳಿಕೆಯೇ ಪೊಲೀಸರಿಗೆ ಈ ಹತ್ಯಾ ಪ್ರಕರಣದ ಮೊದಲ ಸುಳಿವು ನೀಡಿದೆ.

ಪತ್ತೆಯಾದ ಸುಟ್ಟ ದೇಹಗಳು: ಪೊಲೀಸರ ಅನುಮಾನಕ್ಕೆ ಕಾರಣವಾದ ಬಾಲಕನ ನಡವಳಿಕೆ
ಮಾಜಿ ಸರಪಂಚ ರಾಮ ಸಿಂಗ್, ಅವರ ಎರಡನೇ ಪತ್ನಿ ಸುಗ್ಯಾನ್, ತಾಯಿ ಪುಸಿ ದೇವಿ ಮತ್ತು ಸೋದರ ಸೊಸೆ ಮಹಿಮಾ ಅವರ ಮೃತದೇಹಗಳು ಸುಟ್ಟು ಕರಕಲಾಗಿದ್ದ ಕಾರಿನೊಳಗೆ ಪತ್ತೆಯಾಗಿದ್ದವು. ಕುಟುಂಬಸ್ಥರೆಲ್ಲರೂ ದುಃಖದ ಸಾಗರದಲ್ಲಿ ಮುಳುಗಿದ್ದಾಗ, 17 ವರ್ಷದ ಅಪ್ರಾಪ್ತ ಮಗ ಮಾತ್ರ ಯಾವುದೇ ಭಾವುಕತೆ ಇಲ್ಲದೆ ಅಸಹಜವಾಗಿ ಶಾಂತನಾಗಿದ್ದುದನ್ನು ತನಿಖಾಧಿಕಾರಿಗಳು ಗಮನಿಸಿದರು.
ಒಂದೆಡೆ ಆತನ ಹೆತ್ತ ತಾಯಿ (ರಾಮ ಸಿಂಗ್ ಅವರ ಮೊದಲ ಪತ್ನಿ) ಕಣ್ಣೀರಿಡುತ್ತಿದ್ದರೆ, ಈ ಮಗ ಮಾತ್ರ ಅವಳ ಪಕ್ಕದಲ್ಲಿ ಆರಾಮವಾಗಿ ಕುಳಿತು, ಅವಳನ್ನು ಸಮಾಧಾನಪಡಿಸುತ್ತಾ ಟೀ ಕುಡಿಯುತ್ತಿದ್ದ. ಈತನ ಈ ವಿಚಿತ್ರ ನಡವಳಿಕೆಯನ್ನು ಕಂಡು ಅನುಮಾನಗೊಂಡ ಪೊಲೀಸರು, ಆತನ ಮೇಲೆ ತೀವ್ರ ನಿಗಾ ಇರಿಸಲು ಪ್ರಾರಂಭಿಸಿದರು.
ಪ್ರಾರಂಭದಲ್ಲಿ, ರಾಮ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಒಳಗಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಪೊಲೀಸರಿಗೆ ಬಿಂಬಿಸಿದ್ದರು. ಆದರೆ, ತನಿಖೆ ಮುಂದುವರಿದಂತೆ ಪೊಲೀಸರಿಗೆ ಹಲವು ವಿರೋಧಾಭಾಸಗಳು ಕಂಡುಬಂದವು.

ಅಪಘಾತದ ಕಥೆ ಸುಳ್ಳಾಗಿಸಿದ್ದು ಆ ಎರಡು ಪ್ರಮುಖ ಸುಳಿವುಗಳು!
ಪೊಲೀಸರು ತಪಾಸಣೆ ನಡೆಸಿದಾಗ ಸುಟ್ಟುಹೋದ ವಾಹನದ ಮುಂಭಾಗದ ಸೀಟುಗಳಲ್ಲಿ ಯಾರೊಬ್ಬರೂ ಇರಲಿಲ್ಲ ಎಂಬುದು ಬೆಳಕಿಗೆ ಬಂತು. ಜೊತೆಗೆ, ಮೃತರಲ್ಲಿ ಒಬ್ಬರಾದ ಸುಗ್ಯಾನ್ ಅವರ ದೇಹದ ಮೇಲೆ ಬೆಂಕಿ ತಗಲುವ ಮುನ್ನವೇ ಇರಿತದ ಗಾಯಗಳಾಗಿರುವುದು ಪತ್ತೆಯಾಯಿತು.
ಹಂತಕನ ಪ್ಲಾನ್‌ ಅನ್ನು ಎರಡು ತಪ್ಪುಗಳು ತಲೆಕೆಳಗು ಮಾಡಿದವು. ಮೊದಲನೆಯದ್ದು, ಮೃತದೇಹಗಳೆಲ್ಲವೂ ವಾಹನದ ಹಿಂಭಾಗದ ಸೀಟಿನಲ್ಲಿ ಮಾತ್ರ ಪತ್ತೆಯಾಗಿದ್ದವು. ಮುಂಭಾಗದ ಸೀಟಿನಲ್ಲಿ ಯಾರೂ ಇರಲಿಲ್ಲ. ಎರಡನೆಯದ್ದು, ವಾಹನಕ್ಕೆ ಬೆಂಕಿ ಹಚ್ಚುವ ಮುನ್ನವೇ ಮೃತರಲ್ಲಿ ಒಬ್ಬರಿಗೆ ಚಾಕುವಿನಿಂದ ಇರಿಯಲಾಗಿತ್ತು.
ಈ ಸುಳಿವುಗಳು ಸಿಗುತ್ತಿದ್ದಂತೆ ಪ್ರಕರಣವು ಅಪಘಾತದ ಹಾದಿಯಿಂದ ತಿರುಗಿ ವ್ಯವಸ್ಥಿತ ಕೊಲೆಯಾಗಿ ರೂಪಾಂತರಗೊಂಡಿತು. ತದನಂತರ ನಡೆದ ತೀವ್ರ ವಿಚಾರಣೆಯ ವೇಳೆ ಆರೋಪಿ ಮಗ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

ಎರಡನೇ ಮದುವೆ ಮತ್ತು ತಾರತಮ್ಯ: ದ್ವೇಷದ ಜ್ವಾಲೆ
ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ (SP) ಹರ್ಷವರ್ಧನ್ ಅವರು, ರಾಮ ಸಿಂಗ್ ಚೌಧರಿ ಅವರ ಎರಡನೇ ಮದುವೆಯ ನಂತರ ಕುಟುಂಬದಲ್ಲಿ ತೀವ್ರ ಬಿರುಕು ಮೂಡಿತ್ತು. ತಂದೆಯು ತಮ್ಮ ತಾಯಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಕಂಡು ಮೊದಲನೇ ಪತ್ನಿ ಮಕ್ಕಳು ಆತನ ಮೇಲೆ ತೀವ್ರ ದ್ವೇಷ ಮತ್ತು ಆಕ್ರೋಶವನ್ನು ಬೆಳೆಸಿಕೊಂಡಿದ್ದರು ಎಂದು ಕೆಲ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮನೆಯಲ್ಲಿ ತನಗೆ ಮುಕ್ತ ಸ್ವಾತಂತ್ರ್ಯವಿಲ್ಲದೆ ನಿರ್ಬಂಧ ಹೇರಲಾಗುತ್ತಿದೆ ಎಂದು ಬಾಲಕ ತೀವ್ರವಾಗಿ ನೊಂದಿದ್ದ. ಈ ಕೌಟುಂಬಿಕ ಉದ್ವಿಗ್ನತೆ ವರ್ಷಗಳಿಂದ ಆತನಲ್ಲಿ ಮನೆಮಾಡಿತ್ತು.
ಈ ಕುಟುಂಬದ ಜೀವನಶೈಲಿಯೂ ವಿಚಿತ್ರವಾಗಿತ್ತು. ಅಜ್ಮೀರ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಶ್ರೀರಾಮಪುರ ಗ್ರಾಮದ ನಿರ್ಜನ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ರಾಮ ಸಿಂಗ್ ಚೌಧರಿ ಅವರು ತಮ್ಮ ಇಬ್ಬರು ಪತ್ನಿಯರು, ತಾಯಿ ಮತ್ತು ಸೋದರ ಸೊಸೆಯೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರು. ಈ ಭೀಕರ ಹತ್ಯಾಕಾಂಡಕ್ಕೆ ಆ ಅಪ್ರಾಪ್ತ ಮಗ ಕಳೆದ ಐದು ತಿಂಗಳುಗಳಿಂದ ಸ್ಕೆಚ್ ಹಾಕುತ್ತಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ತಿಳಿದುಬಂದಿದೆ.

ಕ್ರೈಮ್ ಸೀರೀಸ್ ನೋಡಿ ಹತ್ಯೆಗೆ ಸ್ಕೆಚ್!
ಆರೋಪಿ ಬಾಲಕ ನಿರಂತರವಾಗಿ ಕ್ರೈಮ್ ಆಧಾರಿತ ವೆಬ್ ಸೀರೀಸ್‌ಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಹಾಗೂ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಆನ್‌ಲೈನ್ ಗೇಮ್‌ಗಳನ್ನು ಆಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡಿದ ನಂತರ ಸಾಕ್ಷ್ಯಗಳನ್ನು ಹೇಗೆ ನಾಶಪಡಿಸಬೇಕು, ಪೊಲೀಸರ ತನಿಖಾ ವಿಧಾನಗಳು ಹೇಗಿರುತ್ತವೆ ಮತ್ತು ಅಪರಾಧದ ಸ್ಥಳವನ್ನು ಹೇಗೆ ಅಳಿಸಿಹಾಕಬೇಕು ಎಂಬುದನ್ನು ಆತ ಇವುಗಳ ಮೂಲಕ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದ ಎಂದು ಆರೋಪಿಸಲಾಗಿದೆ.
ಘಟನೆ ನಡೆದ ರಾತ್ರಿ, ರಾಮ ಸಿಂಗ್ ಮತ್ತು ಅವರ ಎರಡನೇ ಪತ್ನಿ ಸುಗ್ಯಾನ್ ಮದ್ಯ (ಬಿಯರ್) ಸೇವಿಸಿ ಮಲಗಿದ್ದರು. ಆದರೆ, ಆರೋಪಿ ಬಾಲಕ ಮಾತ್ರ ಇಡೀ ರಾತ್ರಿ ನಿದ್ರಿಸದೆ ಮುಂಜಾನೆ 4 ಗಂಟೆಯವರೆಗೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಕುಳಿತಿದ್ದ.
ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಅಪ್ರಾಪ್ತ ಮಗ ರಾಮ ಸಿಂಗ್ ಅವರ ಕೋಣೆಗೆ ನುಗ್ಗಿದ್ದಾನೆ. ತನಿಖೆಯ ಪ್ರಕಾರ, ಆತ ತನ್ನ ತಂದೆಯ ಕಿವಿಯ ಹತ್ತಿರ ಚಾಕುವಿನಿಂದ ಬಲವಾಗಿ ಇರಿದಿದ್ದಾನೆ. ಈ ಮಾರಣಾಂತಿಕ ಗಾಯದಿಂದಾಗಿ ರಾಮ ಸಿಂಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ನಂಬಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

ಆದರೆ, ಬಾಲಕ ಅಂದುಕೊಂಡಂತೆ ಅಲ್ಲಿ ಎಲ್ಲವೂ ಸುಲಭವಾಗಿ ನಡೆಯಲಿಲ್ಲ. ಪಕ್ಕದಲ್ಲೇ ಮಲಗಿದ್ದ ಎರಡನೇ ಪತ್ನಿ ಸುಗ್ಯಾನ್ ತಕ್ಷಣ ಎಚ್ಚರಗೊಂಡು, ಆತನನ್ನು ತಡೆಯಲು ಯತ್ನಿಸಿ ಜೋರಾಗಿ ಕಿರುಚಾಡಿದ್ದಾಳೆ. ಈ ಗದ್ದಲವನ್ನು ಕೇಳಿ ಪಕ್ಕದ ಕೋಣೆಯಲ್ಲಿದ್ದ ತಾಯಿ ಪುಸಿ ದೇವಿ ಮತ್ತು ಸೋದರ ಸೊಸೆ ಮಹಿಮಾ ಅಲ್ಲಿಗೆ ಓಡಿ ಬಂದಿದ್ದಾರೆ. ವಿಷಯ ಕೈ ಮೀರುತ್ತಿರುವುದನ್ನು ಕಂಡು, ಅಲ್ಲಿಗೆ ಧಾವಿಸಿದ ಅಪ್ರಾಪ್ತನ ತಾಯಿ (ರಾಮ ಸಿಂಗ್ ಅವರ ಮೊದಲ ಪತ್ನಿ) ಮತ್ತು ಆತನ ಸೋದರಿ ಇಬ್ಬರೂ ಸೇರಿ ಸುಗ್ಯಾನ್, ಪುಸಿ ದೇವಿ ಮತ್ತು ಮಹಿಮಾ ಅವರನ್ನು ಕೊಲ್ಲಲು ಬಾಲಕನಿಗೆ ಸಾಥ್ ನೀಡಿದ್ದಾರೆ !

ಆಸ್ತಿ ವಿವಾದ ಮತ್ತು ಹತ್ಯೆಯ ಅಂತಿಮ ಹಂತ
ಕುಟುಂಬದ ಹಣಕಾಸಿನ ವ್ಯವಹಾರಗಳು, ಜಮೀನು ವಹಿವಾಟು ಹಾಗೂ ಬ್ಯಾಂಕ್ ಖಾತೆಗಳನ್ನು ರಾಮ ಸಿಂಗ್ ಅವರ ಸೋದರ ಸೊಸೆ ಮಹಿಮಾ ನೋಡಿಕೊಳ್ಳುತ್ತಿದ್ದಳು. ಇದು ಕುಟುಂಬದಲ್ಲಿ ದೀರ್ಘಕಾಲದ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಿಮಾ ಮತ್ತು ಸುಗ್ಯಾನ್ ಇಬ್ಬರೂ ಸೇರಿ ರಾಮ ಸಿಂಗ್ ಅವರ ಆಸ್ತಿ ಮತ್ತು ಉತ್ತರಾಧಿಕಾರದ ವಿಷಯದಲ್ಲಿ ತಮಗೆ ಅನ್ಯಾಯ ಮಾಡಬಹುದು ಎಂಬ ಭೀತಿ ಮೊದಲ ಪತ್ನಿ ಮತ್ತು ಆಕೆಯ ಮಕ್ಕಳಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.
ನಾಲ್ವರನ್ನು ಭೀಕರವಾಗಿ ಕೊಂದ ನಂತರ, ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಶವಗಳನ್ನು ವಾಹನದೊಳಗೆ ಹಾಕಿ, ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ಬೆಂಕಿಯ ಜ್ವಾಲೆಯಲ್ಲಿ ಕೊಲೆಯ ಎಲ್ಲಾ ಸಾಕ್ಷ್ಯಗಳು ನಾಶವಾಗುತ್ತವೆ ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಆದರೆ, ವಾಹನದ ಹಿಂಬದಿಯ ಸೀಟಿನಲ್ಲಿ ಹೆಣಗಳಿರುವುದು, ಸುಗ್ಯಾನ್ ದೇಹದ ಮೇಲಿದ್ದ ಇರಿತದ ಗಾಯಗಳು ಮತ್ತು ಕೊಲೆಯ ನಂತರವೂ ಆರೋಪಿ ಬಾಲಕ ಯಾವುದೇ ಆತಂಕವಿಲ್ಲದೆ ತೋರಿದ ಅತಿಯಾದ ‘ಶಾಂತ ನಡವಳಿಕೆ’ ಪೊಲೀಸರ ತನಿಖೆಗೆ ದೊಡ್ಡ ಸುಳಿವನ್ನು ನೀಡಿತು. ಸದ್ಯ ಇಡೀ ರಾಜ್ಯವನ್ನೇ ನಡುಗಿಸಿದ ಈ ಹತ್ಯಾಕಾಂಡದ ರಹಸ್ಯವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement