
ಕೋಲ್ಕತ್ತಾ : ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಗುರುವಾರ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ಬೆನ್ನಲ್ಲೇ ಅವರ ಸೋದರಳಿಯ ಹಾಗೂ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೂ ಮತ್ತೊಂದು ಸಿಐಡಿ ತಂಡ ಏಕಕಾಲದಲ್ಲಿ ದಾಳಿ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ಮಂಗಳವಾರ ಅಪರಾಹ್ನ ಸ್ಥಳೀಯ ಪೊಲೀಸರು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯ ಭಾರಿ ಬಂದೋಬಸ್ತ್‌ನೊಂದಿಗೆ ಸಿಐಡಿ ಅಧಿಕಾರಿಗಳ ತಂಡವು ಕೋಲ್ಕತಾದ 30ಬಿ ಹರೀಶ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಆಗಮಿಸಿತು. ಈ ಆವರಣವೇ ಟಿಎಂಸಿ ಪಕ್ಷದ ಕೇಂದ್ರ ಕಚೇರಿಯೂ ಆಗಿದೆ. ಆರಂಭದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಹಿರಿಯ ನಾಯಕರು ಹಾಗೂ ಸಿಐಡಿ ಅಧಿಕಾರಿಗಳ ನಡುವೆ ಸಣ್ಣ ವಾಗ್ವಾದ ಹಾಗೂ ಹೈಡ್ರಾಮಾ ನಡೆಯಿತು. ಅಂತಿಮವಾಗಿ ಆವರಣದೊಳಗೆ ಪ್ರವೇಶಿಸಿದ ಸಿಐಡಿ ಅಧಿಕಾರಿಗಳು, ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪಾಸಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದರು ಎಂದು ವರದಿಯಾಗಿದೆ.
ಪ್ರಸ್ತುತ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ ಬ್ಯಾನರ್ಜಿ ಇಬ್ಬರೂ ‘ಇಂಡಿಯಾ’ (INDIA) ಒಕ್ಕೂಟದ ಸಭೆಗಳಲ್ಲಿ ಭಾಗವಹಿಸಲು ದೆಹಲಿಯಲ್ಲಿದ್ದಾರೆ.

ಪ್ರಕರಣಕ್ಕೆ ತಿರುವು ನೀಡಿದ ಅಭಿಷೇಕ ಹೇಳಿಕೆ:
ನಕಲಿ ಸಹಿ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ನೋಟಿಸ್‌ಗಳಿಗೆ ಆರೋಗ್ಯದ ಕಾರಣ ಹಾಗೂ ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವುದನ್ನು ಉಲ್ಲೇಖಿಸಿ ಅಭಿಷೇಕ ಬ್ಯಾನರ್ಜಿ ಗೈರಾಗಿದ್ದರು. ಇದರಿಂದಾಗಿ ಸಿಐಡಿ ಮಂಗಳವಾರ ಸಂಜೆ 5 ಗಂಟೆಯೊಳಗೆ ಹಾಜರಾಗುವಂತೆ ಅವರಿಗೆ ಮೂರನೇ ಬಾರಿ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿತ್ತು.
ಈ ನಡುವೆ ಅಭಿಷೇಕ ಬ್ಯಾನರ್ಜಿ ಅವರು ಸಿಐಡಿಗೆ ಸಲ್ಲಿಸಿದ್ದ ಲಿಖಿತ ಪ್ರತಿಕ್ರಿಯೆಯೇ ಈ ದಾಳಿಗೆ ಮುಖ್ಯ ಕಾರಣ ಎನ್ನಲಾಗಿದೆ. “ಶಾಸಕರ ಸಹಿಗಳನ್ನು 30ಬಿ ಹರೀಶ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು ಎಂದು ಅಭಿಷೇಕ ತಮ್ಮ ಉತ್ತರದಲ್ಲಿ ತಿಳಿಸಿದ್ದರು. ಆ ಹೇಳಿಕೆಯ ಆಧಾರದ ಮೇಲೆಯೇ ತನಿಖೆಯ ಭಾಗವಾಗಿ ಅವರು ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ.
ಏನಿದು ‘ನಕಲಿ ಸಹಿ’ ವಿವಾದ?
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಿರಿಯ ಟಿಎಂಸಿ ಶಾಸಕ ಸೋವಂದೇಬ ಚಟ್ಟೋಪಾಧ್ಯಾಯ ಅವರ ಹೆಸರನ್ನು ಮಾನ್ಯ ಮಾಡುವಂತೆ ಕೋರಿ ವಿಧಾನಸಭಾ ಸ್ಪೀಕರ್‌ಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿತ್ತು. ಸುಮಾರು 70 ಟಿಎಂಸಿ ಶಾಸಕರ ಸಹಿ ಒಳಗೊಂಡಿದ್ದ ಈ ಪತ್ರಕ್ಕೆ ಪಕ್ಷದ ಪ್ರದಾನ ಕಾರ್ಯದರ್ಶಿಯಾಗಿರುವ ಅಭಿಷೇಕ ಬ್ಯಾನರ್ಜಿ ಸಹಿ ಮಾಡಿ ಸ್ಪೀಕರ್‌ಗೆ ಹಸ್ತಾಂತರಿಸಿದ್ದರು.
ಆದರೆ, ಈ ಪ್ರಸ್ತಾವನೆ ಹಾಗೂ ಸಭೆಯ ರಿಜಿಸ್ಟರ್‌ನಲ್ಲಿರುವ ಹಲವು ಶಾಸಕರ ಸಹಿಗಳನ್ನು ನಕಲು (ಫೋರ್ಜರಿ) ಮಾಡಲಾಗಿದೆ ಎಂದು ಬಂಡಾಯ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಗಂಭೀರ ಆರೋಪ ಮಾಡಿದ್ದರು. ಈ ದೂರಿನನ್ವಯ ಎಫ್‌ಐಆರ್ ದಾಖಲಾಗಿ, ಸಿಐಡಿ ತನಿಖೆ ಆರಂಭವಾಗಿತ್ತು. ಈ ದಾಖಲೆಯನ್ನು ಎಲ್ಲಿ ಸಿದ್ಧಪಡಿಸಲಾಯಿತು? ಸಹಿಗಳನ್ನು ಎಲ್ಲಿ ಹಾಕಲಾಯಿತು? ಮತ್ತು ಸ್ಪೀಕರ್‌ಗೆ ಸಲ್ಲಿಸುವ ಮುನ್ನ ಅದರಲ್ಲಿ ಅಕ್ರಮ ಎಸಗಲಾಗಿದೆಯೇ? ಎಂಬಿತ್ಯಾದಿ ಕೋನಗಳಲ್ಲಿ ಸಿಐಡಿ ತನಿಖೆ ಚುರುಕುಗೊಳಿಸಿದೆ.
ಟಿಎಂಸಿ ಇತಿಹಾಸದಲ್ಲೇ ದೊಡ್ಡ ಒಡಕು :
ಪಕ್ಷ ಸ್ಥಾಪನೆಯಾದ ಈ 28 ವರ್ಷಗಳ ಇತಿಹಾಸದಲ್ಲೇ ತೃಣಮೂಲ ಕಾಂಗ್ರೆಸ್ ಅತ್ಯಂತ ಕಠಿಣ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹೊತ್ತಿನಲ್ಲೇ ಸಿಐಡಿಯ ಈ ಕ್ರಮ ಹೊರಬಿದ್ದಿದೆ. ವಿಧಾನಸಭಾ ಚುನಾವಣೆಯ ನಂತರ ಸೋವಂದೇಬ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಪಕ್ಷದ ನಾಯಕತ್ವ ನಿರ್ಧರಿಸಿತ್ತು. ಆದರೆ ಇದಕ್ಕೆ ಒಂದು ದೊಡ್ಡ ಶಾಸಕರ ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿ ಬಂಡಾಯವೆದ್ದಿತ್ತು. ಪಕ್ಷದ ಒಟ್ಟು 80 ಶಾಸಕರ ಪೈಕಿ 58 ಶಾಸಕರು ಹೈಕಮಾಂಡ್ ನಿರ್ಧಾರವನ್ನು ಧಿಕ್ಕರಿಸಿ, ಪಕ್ಷದಿಂದ ಉಚ್ಚಾಟಿತಗೊಂಡಿದ್ದ ಶಾಸಕ ರಿತಬ್ರತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿದಾಗ ಬಿಕ್ಕಟ್ಟು ತಾರಕಕ್ಕೇರಿತು.
ನಂತರ ತಾವುಗಳೇ ಅಸಲಿ ಶಾಸಕಾಂಗ ಪಕ್ಷ ಎಂದು ಪ್ರತಿಪಾದಿಸಿದ ಬಂಡಾಯ ಬಣ, ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿ ಸ್ಪೀಕರ್‌ನಿಂದ ಮಾನ್ಯತೆಯನ್ನೂ ಪಡೆದುಕೊಂಡಿತು. ಇದು 1998 ರಲ್ಲಿ ಟಿಎಂಸಿ ಉದಯವಾದ ನಂತರ ಪಕ್ಷದಲ್ಲಿ ಉಂಟಾದ ಮೊದಲ ಒಡಕಾಗಿದೆ.
ಈಗ ಪಕ್ಷ ಒಡೆದು ಹೋಗಿರುವ ವ ಬೆನ್ನಲ್ಲೇ, ನಕಲಿ ಸಹಿ ಹಗರಣದ ತನಿಖೆಗಾಗಿ ಸಿಐಡಿ ಅಧಿಕಾರಿಗಳು ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸ ಹಾಗೂ ಅಭಿಷೇಕ ಬ್ಯಾನರ್ಜಿ ಅವರ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ