
ಅಮೆರಿಕದ ಲೂಸಿಯಾನದಲ್ಲಿ ನಡೆದ ಪೊಲೀಸರು ವ್ಯಕ್ತಿಯೊಬ್ಬನನ್ನು ಬೆನ್ನಟ್ಟಿದ ಸಾಧಾರಣ ಘಟನೆಯು ಪ್ರಕೃತಿಯ ಅನಿರೀಕ್ಷಿತ ಟ್ವಿಸ್ಟ್ನಿಂದಾಗಿ ಭಾರಿ ಸುದ್ದಿಯಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಜೌಗು ಪ್ರದೇಶಕ್ಕೆ (ಸ್ವಾಂಪ್) ಧುಮುಕಿದಾಗ, ಅಲ್ಲಿನ ಮೊಸಳೆಯೊಂದು ಆತನ ಮೇಲೆ ದಾಳಿ ಮಾಡಿದ ವಿಲಕ್ಷಣ ಘಟನೆ ನಡೆದಿದೆ.
ಕಳೆದ ಭಾನುವಾರ ಲೂಸಿಯಾನದ ಇಂಟರ್ಸ್ಟೇಟ್-10 ಹೆದ್ದಾರಿಯಲ್ಲಿ ಟೊಯೋಟಾ ಕಾರೊಂದನ್ನು ಅತ್ಯಂತ ಬೇಜವಾಬ್ದಾರಿಯಿಂದ ಚಲಾಯಿಸಲಾಗುತ್ತಿದೆ ಎಂಬ ದೂರು ಲೂಸಿಯಾನ ಸ್ಟೇಟ್ ಪೊಲೀಸರಿಗೆ ಬಂದಿತ್ತು. ಆ ಕಾರನ್ನು ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಆ ಕಾರು ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು, ಟೈರ್ ಸ್ಫೋಟಗೊಂಡಿದೆ. ಅಂತಿಮವಾಗಿ ಇಂಟರ್ಸ್ಟೇಟ್-310 ಹೆದ್ದಾರಿಯಲ್ಲಿ ಅಧಿಕಾರಿಗಳು ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಕಾರು ನಿಲ್ಲುತ್ತಿದ್ದಂತೆ, ಅದರೊಳಗಿದ್ದ 40 ವರ್ಷದ ವಿಕ್ಟರ್ ರಿವಾಸ್ ಎಂಬಾತ ಹೆದ್ದಾರಿಯ ಮೇಲ್ಸೇತುವೆಯಿಂದ ಕೆಳಗೆ ಜಿಗಿದು, ಹತ್ತಿರದಲ್ಲೇ ಇದ್ದ ನೀರು ತುಂಬಿದ್ದ ಜವುಳು ಪ್ರದೇಶದೊಳಗೆ ಓಡಿ ಕಣ್ಮರೆಯಾಗಿದ್ದಾನೆ.

ಕೂಡಲೇ ಲೂಸಿಯಾನ ಸ್ಟೇಟ್ ಟ್ರೂಪರ್ಸ್ ಮತ್ತು ಸೇಂಟ್ ಚಾರ್ಲ್ಸ್ ಪ್ಯಾರಿಷ್ ಶೆರಿಫ್ ಕಚೇರಿಯ ಅಧಿಕಾರಿಗಳು ಜಂಟಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ವಲ್ಪ ಸಮಯದ ನಂತರ ರಿವಾಸ್ ಹೆದ್ದಾರಿಯೊಂದರ ಬಳಿ ನಡೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಆದರೆ, ಪೊಲೀಸರು ಆತನನ್ನು ಬಂಧಿಸಲು ಹತ್ತಿರ ಬರುತ್ತಿದ್ದಂತೆ, ಆತ ಮತ್ತೆ ತಪ್ಪಿಸಿಕೊಳ್ಳಲು ಜವುಳು ಪ್ರದೇಶದ ನೀರಿಗೆ ಧುಮುಕಿದ್ದಾನೆ.
ದಾಳಿ ಮಾಡಿದ ‘ಖಾಕಿ’ ಮೊಸಳೆ!
ಆರೋಪಿ ನೀರಿಗೆ ಧುಮುಕುತ್ತಿದ್ದಂತೆ ಇಡೀ ಘಟನೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ, ನೀರಿನಲ್ಲಿದ್ದ ಬೃಹತ್ ಮೊಸಳೆಯೊಂದು ಅತ್ಯಂತ ವೇಗವಾಗಿ ಈಜುತ್ತಾ ಬಂದು ರಿವಾಸ್ ಮೇಲೆ ದಾಳಿ ಮಾಡಿದೆ. ಈ ಭೀಕರ ದಾಳಿಯಿಂದಾಗಿ ರಿವಾಸ್ನ ಎರಡೂ ಕೈಗಳಿಗೆ ತೀವ್ರ ಗಾಯಗಳಾಗಿವೆ.
“ಮೊಸಳೆ ದಾಳಿ ಮಾಡಿದ ನಂತರವೂ ರಿವಾಸ್ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಾಗೂ ಮತ್ತೆ ಕಾಡಿನ ಕಡೆಗೆ ಓಡಿದ. ಆತ ಮರಗಳ ಮರೆಯಿಂದ ಹೊರಬರುವವರೆಗೆ ನಾವು ಕಾಯಬೇಕಾಯಿತು ಮತ್ತು ನಂತರ ಆತನನ್ನು ಬಂಧಿಸಿದೆವು” ಎಂದು ಲೂಸಿಯಾನ ಸ್ಟೇಟ್ ಪೊಲೀಸ್ ವಕ್ತಾರ ಕೈಲ್ ವ್ಯಾಗ್ನರ್ ಹೇಳಿದ್ದಾರೆ.
ಡ್ರೋನ್ ತಂತ್ರಜ್ಞಾನದಿಂದ ಬಂಧನ
ಮೊಸಳೆ ಕಚ್ಚಿದರೂ ಛಲ ಬಿಡದೆ ಓಡುತ್ತಿದ್ದ ಆರೋಪಿಯನ್ನು ಕೊನೆಗೆ ಪೊಲೀಸರು ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ.
ಸದ್ಯ ರಿವಾಸ್ ಮೇಲೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು (DWI), ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು/ಪ್ರತಿರೋಧ ಒಡ್ಡುವುದು, ಹಿಟ್ ಅಂಡ್ ರನ್ (ಅಪಘಾತ ಮಾಡಿ ಪರಾರಿಯಾಗುವುದು) ಹಾಗೂ ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡುವುದು ಇದರಡಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ‘ಡೆಪ್ಯುಟಿ ಅಲ್ ಇ. ಗೇಟರ್’
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಲೂಸಿಯಾನ ಸ್ಟೇಟ್ ಪೊಲೀಸ್ ಧನ್ಯವಾದ ಅರ್ಪಿಸಿದೆ. ಆದರೆ ಇಂಟರ್ನೆಟ್ನಲ್ಲಿ ಮಾತ್ರ ಪೊಲೀಸರಿಗಿಂತ ಹೆಚ್ಚಾಗಿ ಮೊಸಳೆಯೇ ಹೀರೊ ಆಗಿದೆ!
ಸೇಂಟ್ ಚಾರ್ಲ್ಸ್ ಪ್ಯಾರಿಷ್ ಶೆರಿಫ್ ಕಚೇರಿಯು ಈ ಹಾಸ್ಯಕ್ಕೆ ಧ್ವನಿಗೂಡಿಸಿದ್ದು, AI ತಂತ್ರಜ್ಞಾನದ ಮೂಲಕ ರಚಿಸಲಾದ ವಿಶಿಷ್ಟ ಚಿತ್ರವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಮೊಸಳೆಯೊಂದು ಪೊಲೀಸ್ ಸಮಸ್ತ್ರ ಧರಿಸಿ, “ಅಲ್ ಇ. ಗೇಟರ್” (Al E. Gator) ಎಂಬ ಹೆಸರಿನಲ್ಲಿ “ವರ್ಷದ ಅತ್ಯುತ್ತಮ ಡೆಪ್ಯುಟಿ” (Deputy of the Year) ಪ್ರಶಸ್ತಿ ಫಲಕವನ್ನು ಸ್ವೀಕರಿಸುತ್ತಿರುವಂತೆ ತೋರಿಸಲಾಗಿದೆ.
ತಮ್ಮ ಪೋಸ್ಟ್ನಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಶೆರಿಫ್ ಕಚೇರಿ, “ನೆನಪಿಡಿ: ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಬೇಡಿ ಮತ್ತು ಖಂಡಿತವಾಗಿಯೂ ಲೂಸಿಯಾನದ ಜೌಗು ಪ್ರದೇಶಗಳಲ್ಲಿ ಅಡಗಿಕೊಳ್ಳಬೇಡಿ. ಏಕೆಂದರೆ ಇಲ್ಲಿನ ವನ್ಯಜೀವಿಗಳೂ ಕೂಡ ಕಾನೂನು ಪಾಲನೆಯಲ್ಲಿ ಪೊಲೀಸರೊಂದಿಗೆ ಸಹಕರಿಸರಬಹುದು!” ಎಂದು ತಮಾಷೆಯಾಗಿ ಬರೆದುಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ