ಎಐ(AI) ಬಳಕೆ ಹೆಚ್ಚಳ ; ಭಾರತದಲ್ಲಿನ ಎಲ್ಲ ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕದ ‘ಓಪನ್‌ಡೋರ್’ ಕಂಪನಿ !

ನವದೆಹಲಿ: ಕೃತಕ ಬುದ್ಧಿಮತ್ತೆ ಜಾಗತಿಕ ಕಾರ್ಯಾಚರಣೆಗಳನ್ನು ಹೇಗೆ ಮರುರೂಪಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುವ ಒಂದು ಕ್ರಮದಲ್ಲಿ, ಅಮೆರಿಕದ ರಿಯಲ್ ಎಸ್ಟೇಟ್ ತಂತ್ರಜ್ಞಾನ ಕಂಪನಿ ಓಪನ್‌ಡೋರ್ ಭಾರತ ಮೂಲದ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ, ಇದು ಸುಮಾರು 250 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.
ತನ್ನ ವ್ಯವಹಾರದ ಸ್ಥಿತ್ಯಂತರ ಕಾರ್ಯತಂತ್ರದ (business transformation strategy) ಭಾಗವಾಗಿ, ಕಂಪನಿಯ ಕಾರ್ಯಾಚರಣೆಯನ್ನು ಅಮೆರಿಕಾದಲ್ಲಿರುವ ತನ್ನ ಗ್ರಾಹಕರಿಗೆ ಹತ್ತಿರವಾಗಿ ಸ್ಥಳಾಂತರಿಸಲು ಕಂಪನಿ ನಿರ್ಧರಿಸಿದೆ ಎಂದು ಓಪನ್‌ಡೋರ್ ಸಿಇಒ ಕಾಜ್ ನೆಜಾಟಿಯನ್ ತಿಳಿಸಿದ್ದಾರೆ.
ಉದ್ಯೋಗಿಗಳೊಂದಿಗೆ ಹಂಚಿಕೊಂಡ ಹಾಗೂ ನಂತರ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರಕಟಣೆಯಲ್ಲಿ ನೆಜಾಟಿಯನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದಲೇ ಕೆಲವು ಪ್ರಮುಖ ಹುದ್ದೆಗಳನ್ನು ಅಮೆರಿಕಕ್ಕೆ ಮರು-ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕಂಪನಿ ಆರಂಭಿಸಿತ್ತು. ಈಗಿನ ನಿರ್ಧಾರದೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಭಾರತದಲ್ಲಿನ ಓಪನ್‌ಡೋರ್ ಕಾರ್ಯಾಚರಣೆಗೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

ನಿರ್ಧಾರಕ್ಕೆ ಕಾರಣಗಳೇನು?
ಓಪನ್‌ಡೋರ್‌ನ ಗ್ರಾಹಕರು ಅಮೆರಿಕಾದಲ್ಲಿದ್ದಾರೆ. ಹೀಗಾಗಿ ಅವರಿಗೆ ಬೆಂಬಲ ನೀಡುವ ಕಾರ್ಯಾಚರಣೆಯ ಕೆಲಸಗಳು ಆ ಗ್ರಾಹಕರಿಗೆ ಹತ್ತಿರದಲ್ಲೇ ನಡೆದರೆ ಹೆಚ್ಚು ಸೂಕ್ತ ಎಂಬುದು ಕಂಪನಿಯ ಆಲೋಚಿಸಿದೆ.
ಅಲ್ಲದೆ, ವಿವಿಧ ಸಿಸ್ಟಮ್‌ಗಳಲ್ಲಿನ ಮ್ಯಾನುವಲ್ ವರ್ಕ್‌ಫ್ಲೋಗಳನ್ನು (ಕೈಯಾರೆ ಮಾಡುವ ಕೆಲಸಗಳು) ನಿರ್ವಹಿಸಲು ಕಂಪನಿಯು ಈ ಹಿಂದೆ ಭಾರತದಲ್ಲಿ ದೊಡ್ಡ ತಂಡವನ್ನು ರಚಿಸಿತ್ತು. ಆದರೆ, ತಂತ್ರಜ್ಞಾನದಲ್ಲಿನ ಸುಧಾರಣೆಗಳು ಮತ್ತು ಅಮೆರಿಕಾದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂಡಗಳು ಚಾಲ್ತಿಯಲ್ಲಿ ಬಂದಿದ್ದರಿಂದ ಈ ಕೆಲಸಗಳನ್ನು ಅಮೆರಿಕದ ಹೊರಗೆ ಉಳಿಸಿಕೊಳ್ಳುವ ಅಗತ್ಯತೆ ಕಡಿಮೆಯಾಗಿದೆ ಎಂದು ಸಿಇಒ ವಿವರಿಸಿದ್ದಾರೆ.
ಉದ್ಯೋಗಿಗಳ ಕಾರ್ಯಕ್ಷಮತೆಗೆ ಪ್ರಶಂಸೆ
“ಈ ನಿರ್ಧಾರಕ್ಕೂ ಭಾರತದ ತಂಡದ ಕಾರ್ಯಕ್ಷಮತೆಗೂ ಯಾವುದೇ ಸಂಬಂಧವಿಲ್ಲ. ಭಾರತದ ಉದ್ಯೋಗಿಗಳು ಅತ್ಯಂತ ಪ್ರತಿಭಾವಂತ ವೃತ್ತಿಪರರಾಗಿದ್ದು, ಕಂಪನಿಗೆ ಅವರ ಕೊಡುಗೆ ಅಪಾರವಾಗಿದೆ. ಅವರು ಇತರ ಸಂಸ್ಥೆಗಳಿಗೆ ಅತ್ಯಮೂಲ್ಯ ಆಸ್ತಿಯಾಗಲಿದ್ದಾರೆ” ಎಂದು ಕಾಜ್ ನೆಜಾಟಿಯನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ವ್ಯಾಪಕ ಸಂಪರ್ಕ ಬಳಸಿ ಯುದ್ಧದ ಹಾದಿಯಲ್ಲಿರುವ ದೇಶಗಳನ್ನು ಸಂವಾದಕ್ಕೆ ಕರೆತನ್ನಿ : ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಮನವಿ

ಉದ್ಯೋಗಿಗಳಿಗೆ ಪರಿಹಾರ
ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಕಂಪನಿಯು ಪರಿಹಾರ ಪ್ಯಾಕೇಜ್‌ಗಳು (severance packages), ಔಟ್‌ಪ್ಲೇಸ್‌ಮೆಂಟ್ ಸೇವೆಗಳು (ಬೇರೆ ಕಡೆ ಕೆಲಸ ಹುಡುಕಲು ಸಹಾಯ) ಮತ್ತು ಇತರ ಅಗತ್ಯ ಸಂಪನ್ಮೂಲಗಳು ಸೇರಿದಂತೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಕಂಪನಿ ಹೇಳಿದೆ. ಇನ್ನು, ಪ್ರಮುಖ ಕೆಲಸಗಳ ಸುಗಮ ಹಸ್ತಾಂತರಕ್ಕಾಗಿ (transition) ಕೆಲವೇ ಕೆಲವು ಸಿಬ್ಬಂದಿ ತಾತ್ಕಾಲಿಕವಾಗಿ ಮುಂದುವರಿಯಲಿದ್ದಾರೆ.
ಉದ್ಯೋಗಿಗಳ ಕಡಿತದ ಹೊರತಾಗಿಯೂ ಓಪನ್‌ಡೋರ್ ಸದೃಢ ಸ್ಥಿತಿಯಲ್ಲಿದೆ ಮತ್ತು ಕಂಪನಿಯ ಒಟ್ಟಾರೆ ವ್ಯವಹಾರ ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನೆಜಾಟಿಯನ್ ಸ್ಪಷ್ಟಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾರ್ಯಾಚರಣೆಗಳನ್ನು ಸರಳಗೊಳಿಸುವುದು, ಏಕೀಕೃತ ಪ್ಲಾಟ್‌ಫಾರ್ಮ್ ನಿರ್ಮಿಸುವುದು ಮತ್ತು ಮಾನವ ಕೆಲಸದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಕಂಪನಿಯ ಮುಖ್ಯ ಗುರಿಯಾಗಿದೆ. ಇದರೊಂದಿಗೆ ಅಮೆರಿಕಾದಲ್ಲಿನ ಮನೆಮಾಲೀಕರಿಗೆ ಉತ್ತಮ ಸೇವೆ ನೀಡುವುದರ ಕಡೆಗೆ ಕಂಪನಿ ಗಮನ ಹರಿಸಲಿದೆ ಎಂದು ಕಾಜ್‌ ನೆಜಾಟಿಯನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement