ವಿಡಿಯೋ | ಅಹಮದಾಬಾದ್ : ವಿಮಾನದ ಸ್ಪೀಕರ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ₹4.26 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ ಪತ್ತೆ

ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದುಬೈನಿಂದ ಬಂದ ಇಂಡಿಗೋ ವಿಮಾನದಲ್ಲಿ ಸ್ಪೀಕರ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 4.26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಆಗಮಿಸಿದ ಇಂಡಿಗೋ ಸಂಸ್ಥೆಯ ‘6E-1478’ ವಿಮಾನದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ವಿಮಾನದ ಇಂಜಿನಿಯರ್‌ಗಳು ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಿಮಾನದ ಮುಂಭಾಗದ ಶೌಚಾಲಯದಲ್ಲಿದ್ದ ಸ್ಪೀಕರ್ ಬಾಕ್ಸ್‌ನ ಕೆಳಗೆ ಕಪ್ಪು ಪ್ಲಾಸ್ಟಿಕ್ ಟೇಪ್‌ನಿಂದ ಸುತ್ತಿ ಬಚ್ಚಿಡಲಾಗಿದ್ದ ಎರಡು ಪಾಕೆಟ್‌ಗಳು ಪತ್ತೆಯಾಗಿವೆ. ಅವುಗಳನ್ನು ಬಿಚ್ಚಿ ಪರಿಶೀಲಿಸಿದಾಗ 999 ಶುದ್ಧತೆಯ (24 ಕ್ಯಾರೆಟ್) 24 ವಿದೇಶಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ. ಜಪ್ತಿ ಮಾಡಲಾದ ಒಟ್ಟು 2,799.3 ಗ್ರಾಂ ತೂಕದ ಈ ಚಿನ್ನದ ಬಿಸ್ಕತ್‌ಗಳ ಮೌಲ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ಅಂದಾಜು ₹4.27 ಕೋಟಿ ಎಂದು ಅಂದಾಜಿಸಲಾಗಿದೆ.

ಮೂಲ ಮಾಹಿತಿಯ ಸ್ವರೂಪವನ್ನು ಆಧರಿಸಿ, ಅಧಿಕಾರಿಗಳು ವಿಮಾನದ ಒಳಗಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ವ್ಯಾಪಕವಾದ ಹುಡುಕಾಟವನ್ನು ನಡೆಸಿದರು. ಈ ಜಾಗಗಳು ಸಾಮಾನ್ಯವಾಗಿ ಪ್ರಯಾಣಿಕರಿಗೆ ಪ್ರವೇಶಿಸಲು ಸಾಧ್ಯವಿಲ್ಲದ ಮತ್ತು ದಿನನಿತ್ಯದ ಸಾಮಾನ್ಯ ತಪಾಸಣೆಯ ಸಮಯದಲ್ಲಿ ಸುಲಭವಾಗಿ ಕಣ್ಣಿಗೆ ಕಾಣಿಸದಂತಹ ಹಾಗೂ ಯಾರೂ ಊಹಿಸದ ವಿಮಾನದ ಸ್ಪೀಕರ್‌ ಬಾಕ್ಸ್‌ನಲ್ಲಿ ಅಡಗಿಸಿಟ್ಟು ತರಲಾಗಿತ್ತು.
ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಚಿನ್ನವನ್ನು ಅಡಗಿಸಿಟ್ಟಿದ್ದ ವಿಧಾನವನ್ನು ಗಮನಿಸಿದರೆ, ಭಾರತಕ್ಕೆ ಅಕ್ರಮವಾಗಿ ಸಾಗಿಸುವ ಉದ್ದೇಶದಿಂದಲೇ ಅಪರಿಚಿತ ವ್ಯಕ್ತಿಯೊಬ್ಬ ಇದನ್ನು ಬಚ್ಚಿಟ್ಟಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಆದರೆ, ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಾಗಲಿ ಅಥವಾ ಸಿಬ್ಬಂದಿಯಾಗಲಿ ಈ ಚಿನ್ನ ತಮ್ಮದೆಂದು ಒಪ್ಪಿಕೊಳ್ಳಲು ಮುಂದೆ ಬಾರದ ಕಾರಣ, ಇದನ್ನು ‘ಕ್ಲೈಮ್ ಮಾಡದ ಸ್ವತ್ತು’ ಎಂದು ಪರಿಗಣಿಸಿ ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ. ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

ಕೆಲವೇ ವಾರಗಳ ಹಿಂದೆಯಷ್ಟೇ ಇದೇ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದಿದ್ದ ಇಬ್ಬರು ಪ್ರಯಾಣಿಕರನ್ನು ತಡೆದು, ಅವರ ಬಳಿಯಿದ್ದ 1.13 ಲಕ್ಷಕ್ಕೂ ಹೆಚ್ಚು ವಿದೇಶಿ ಮೂಲದ ಸಿಗರೇಟ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದರು.
ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದಿದ್ದ ಆ ಪ್ರಯಾಣಿಕರ ತಪಾಸಣೆ ನಡೆಸಿದ ಲಗೇಜ್‌ನ ಎಕ್ಸ್-ರೇ ಚಿತ್ರಗಳಲ್ಲಿ ಸಂಶಯಾಸ್ಪದ ದೃಶ್ಯಗಳು ಕಂಡುಬಂದ ಹಿನ್ನೆಲೆಯಲ್ಲಿ, ಅವರನ್ನು ಆಗಮನದ ಹಾಲ್‌ನಲ್ಲಿ (Arrival Hall) ತಡೆದು ಪರಿಶೀಲನೆಗೆ ಒಳಪಡಿಸಲಾಗಿತ್ತು.
ಇದರಲ್ಲಿ ‘ಮೊಂಡ್’ (Mond) ಬ್ರ್ಯಾಂಡ್‌ನ 56,000 ಸಿಗರೇಟ್‌ಗಳಿದ್ದ 280 ಬಾಕ್ಸ್‌ಗಳು ಹಾಗೂ ‘ಗುಡಾಂಗ್ ಗರಂ’ (Gudang Garam) ಬ್ರ್ಯಾಂಡ್‌ನ 57,200 ಸಿಗರೇಟ್‌ಗಳಿದ್ದ 286 ಬಾಕ್ಸ್‌ಗಳು ಸೇರಿದ್ದವು. ಅಂದು ಕೂಡ ಕಸ್ಟಮ್ಸ್ ಕಾಯ್ದೆ 1962 ರ ಅಡಿಯಲ್ಲಿ ಆ ಸಂಪೂರ್ಣ ಸಿಗರೇಟ್ ಜಪ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಬೆನ್ನಲ್ಲೇ ಕೋಟ್ಯಂತರ ಮೌಲ್ಯದ ಚಿನ್ನ ಸಿಕ್ಕಿಬಿದ್ದಿರುವುದು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆದಾರರ ನೆಟ್‌ವರ್ಕ್ ಎಷ್ಟು ಸಕ್ರಿಯವಾಗಿದೆ ಎಂಬುದನ್ನು ತೋರಿಸುತ್ತಿದ್ದು, ತನಿಖೆ ಚುರುಕುಗೊಂಡಿದೆ.

ಪ್ರಮುಖ ಸುದ್ದಿ :-   ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement