
ಲಂಡನ್ : ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಬ್ರಿಟನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು (ಸೋಷಿಯಲ್ ಮೀಡಿಯಾ) ಬಳಸುವುದನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸುವುದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ. ಈಗ ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ನಂತರ ಇಂತಹ ನಿರ್ಬಂಧ ಹೇರಿದ ವಿಶ್ವದ ನಾಲ್ಕನೇ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ.
ತಂತ್ರಜ್ಞಾನ ಸಂಸ್ಥೆಗಳು ಮತ್ತು ಟೀಕಾಕಾರರಿಂದ ಎದುರಾಗಬಹುದಾದ ಯಾವುದೇ ಸವಾಲುಗಳಿಗೆ ಸರ್ಕಾರ ಮಣಿಯುವುದಿಲ್ಲ ಎಂದು ಪ್ರಧಾನಿ ಸ್ಟಾರ್ಮರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಪ್ರಧಾನಿ ಸ್ಟಾರ್ಮರ್ , “ನನ್ನ ಈ ಸಂದೇಶ ಎಲ್ಲರಿಗೂ ಸ್ಪಷ್ಟವಾಗಿ ತಲುಪಬೇಕೆಂದು ನಾನು ಬಯಸುತ್ತೇನೆ. ನಮ್ಮ ಮಕ್ಕಳ ಸುರಕ್ಷತೆ ಮತ್ತು ಸಂತೋಷದ ವಿಷಯದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧನಿಲ್ಲ. ಇದೇ ಕಾರಣಕ್ಕಾಗಿ ಈ ನಿಷೇಧ ಜಾರಿಗೆ ಬರಲೇಬೇಕು ಮತ್ತು ಇದು ಖಂಡಿತವಾಗಿಯೂ ಸಂಭವಿಸಲಿದೆ” ಎಂದು ದೃಢವಾಗಿ ಹೇಳಿದರು.
ಇಂತಹ ನಿರ್ಧಾರವನ್ನು ಜಾರಿಗೊಳಿಸುವುದು ಸುಲಭದ ಮಾತಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ಆದರೆ ಈ ಸಮಸ್ಯೆಯು ನಿಯಂತ್ರಣ ಮೀರಿ ಹೋಗಿದೆ ಎಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. “ನಮಗೆ ಅಧಿಕಾರವಿದೆ. ನಾವು ಬದಲಾವಣೆಗಳನ್ನು ತರಬಲ್ಲೆವು ಮತ್ತು ಖಂಡಿತವಾಗಿಯೂ ತರುತ್ತೇವೆ” ಎಂದ ಅವರು, ಯುವ ಪೀಳಿಗೆಯ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬ ನೀತಿ ನಿರೂಪಕರ ವಾದವನ್ನು ತಳ್ಳಿಹಾಕಿದರು.
ಮಕ್ಕಳ ಮೇಲಿನ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ:
ನಿಷೇಧದ ಅಗತ್ಯವನ್ನು ಒತ್ತಿ ಹೇಳಿದ ಸ್ಟಾರ್ಮರ್, ಸಾಮಾಜಿಕ ಜಾಲತಾಣಗಳು ಮಕ್ಕಳ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಅವರ ಆರೋಗ್ಯಕರ ದಿನಚರಿ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆ ಎಂದರು. ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಮಕ್ಕಳು ಓದು, ಅಧ್ಯಯನ, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮತ್ತು ಆರೋಗ್ಯಕರ ನಿದ್ರೆಯಂತಹ ಬೆಳವಣಿಗೆಗೆ ಅತ್ಯಗತ್ಯವಾದ ಚಟುವಟಿಕೆಗಳಿಂದ ದೂರು ಉಳಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
“ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ಅತೃಪ್ತಿ ಮತ್ತು ಅಸಮಾಧಾನಕ್ಕೆ ತಳ್ಳುತ್ತಿವೆ. ಸಂತೋಷವನ್ನು ದೂರ ಮಾಡುತ್ತಿವೆ. ಅನೇಕ ಫ್ಲಾಟ್‌ಫಾರ್ಮ್‌ಗಳನ್ನು ಬಳಕೆದಾರರನ್ನು ಗಂಟೆಗಟ್ಟಲೆ ಸೆರೆಹಿಡಿಯುವಂತೆ ಮತ್ತು ಅದಕ್ಕೆ ದಾಸರನ್ನಾಗಿಗಿ ಮಾಡುವಂತೆ (ಅಡಿಕ್ಟಿವ್) ವಿನ್ಯಾಸಗೊಳಿಸಲಾಗಿದೆ” ಎಂದು ಅವರು ಹೇಳಿದರು. ಅಲ್ಲದೆ, ಆನ್‌ಲೈನ್ ಬುಲ್ಲಿಂಗ್ (ಚುಡಾಯಿಸುವಿಕೆ) ಮತ್ತು ನಿಂದನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಡಿಜಿಟಲ್ ವೇದಿಕೆಗಳು ಮಕ್ಕಳನ್ನು ಸುಲಭವಾಗಿ ಟಾರ್ಗೆಟ್ ಮಾಡಲು ಕಿಡಿಗೇಡಿಗಳಿಗೆ ದಾರಿ ಮಾಡಿಕೊಡುತ್ತಿವೆ, ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದರು.
ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಸ್ಟಾರ್ಮರ್, ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಂಡಿಲ್ಲ, ಆದರೆ ಅನಿವಾರ್ಯವಾಗಿ ಈ ಕ್ರಮಕ್ಕೆ ಮುಂದಾಗಬೇಕಾಯಿತು ಎಂದರು. “ನನ್ನ ಸ್ವಂತ ಮಕ್ಕಳ ವಿಷಯದಲ್ಲಿ ನಾನು ಯಾವಾಗಲೂ ಬಯಸುವುದು ಅವರ ಸಂತೋಷ ಮತ್ತು ಸುರಕ್ಷತೆಯನ್ನು ಮಾತ್ರ. ಪ್ರತಿಯೊಬ್ಬ ಪೋಷಕರೂ ಅದನ್ನೇ ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಆನ್‌ಲೈನ್ ಸುರಕ್ಷತೆಗೆ ಸಮಗ್ರ ಸುಧಾರಣೆ:
ಈ ನೀತಿಯು ಕೇವಲ ಸಾಮಾಜಿಕ ಜಾಲತಾಣಗಳ ನಿಷೇಧಕ್ಕಷ್ಟೇ ಸೀಮಿತವಾಗಿಲ್ಲ ಎಂದು ಹೇಳಿದಪ್ರಧಾನಿ ಸ್ಟಾರ್ಮರ್, ಅಪರಿಚಿತರು ಮಕ್ಕಳನ್ನು ಸುಲಭವಾಗಿ ಸಂಪರ್ಕಿಸಲು ಅವಕಾಶ ನೀಡುವ ಗೇಮಿಂಗ್ ಸೇವೆಗಳು, ಲೈವ್-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರೆ ಡಿಜಿಟಲ್ ತಾಣಗಳನ್ನು ಲಕ್ಷ್ಯದಲ್ಲಿಟ್ಟು ಸರ್ಕಾರವು ವ್ಯಾಪಕವಾದ ಆನ್‌ಲೈನ್ ಸುರಕ್ಷತಾ ಕ್ರಮಗಳನ್ನು ಸಿದ್ಧಪಡಿಸುತ್ತಿದೆ ಎಂದು ಅವರು ತಿಳಿಸಿದರು. ಈ ಸುಧಾರಣಾ ಕ್ರಮಗಳು ಬ್ರಿಟನ್‌ನ ತಾಂತ್ರಿಕ ಆವಿಷ್ಕಾರಗಳಿಗೆ ಧಕ್ಕೆ ತರದೇ, ಯುವ ಬಳಕೆದಾರರಿಗೆ ಬಲವಾದ ರಕ್ಷಣೆಯನ್ನು ನೀಡಲಿದೆ ಎಂದು ಸರ್ಕಾರ ನಂಬಿದೆ ಎಂದರು.
ನಿಷೇಧ ಯಾವಾಗ ಜಾರಿ?
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸ್ಟಾರ್ಮರ್, ಕ್ರಿಸ್‌ಮಸ್ ಹಬ್ಬದ ಒಳಗಾಗಿ ಇದಕ್ಕೆ ಅಗತ್ಯವಿರುವ ಕಾನೂನು ಮತ್ತು ನಿಬಂಧನೆಗಳನ್ನು ಅಂಗೀಕರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು. ಎಲ್ಲವೂ ಯೋಜನೆಯಂತೆ ನಡೆದರೆ, ಮುಂದಿನ ವರ್ಷದ (ಹೊಸ ವರ್ಷದ) ಆರಂಭದಲ್ಲೇ ಈ ನಿಷೇಧವು ಅಧಿಕೃತವಾಗಿ ಜಾರಿಗೆ ಬರಲಿದೆ.



ನಿಮ್ಮ ಕಾಮೆಂಟ್ ಬರೆಯಿರಿ