
ವಾಷಿಂಗ್ಟನ್/ ತೆಹ್ರಾನ್ : ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಕೊನೆಗೂ ತಾತ್ಕಾಲಿಕ ತೆರೆ ಬಿದ್ದಿದೆ. ವಾರಗಳ ಕಾಲ ನಡೆದ ರಾಜತಾಂತ್ರಿಕ ಚರ್ಚೆಗಳ ನಂತರ, ಎರಡೂ ದೇಶಗಳು ಐತಿಹಾಸಿಕ ಶಾಂತಿ ಒಪ್ಪಂದದ ಜ್ಞಾಪಕ ಪತ್ರಕ್ಕೆ (Peace Memorandum) ಅಧಿಕೃತವಾಗಿ ಸಹಿ ಹಾಕಿವೆ. ಫ್ರಾನ್ಸ್ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇದು ಅಂತಿಮ ಶಾಂತಿ ಒಪ್ಪಂದವಲ್ಲದಿದ್ದರೂ, ಮುಂದಿನ 60 ದಿನಗಳ ಒಳಗೆ ಇದನ್ನು ಕಾನೂನುಬದ್ಧ ಪೂರ್ಣ ಪ್ರಮಾಣದ ಒಪ್ಪಂದವಾಗಿ ಪರಿವರ್ತಿಸಲು ಉಭಯ ದೇಶಗಳಿಗೆ ಇದು ಮಾರ್ಗಸೂಚಿಯಾಗಿ ಕೆಲಸ ಮಾಡಲಿದೆ. ಕದನ ವಿರಾಮ, ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹಡಗುಗಳ ಮುಕ್ತ ಸಂಚಾರ, ಇರಾನ್ ಮೇಲಿನ ನಿರ್ಬಂಧಗಳ ಸಡಿಲಿಕೆ ಹಾಗೂ ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಮಿತಿ ಹೇರುವುದು ಸೇರಿದಂತೆ ಹಲವು ಪ್ರಮುಖ ಅಂಶಗಳಿವೆ.
ಇದರ ಅನ್ವಯ ಇರಾನ್ ತನ್ನ ಬಳಿ ಇರುವ ತೀವ್ರವಾಗಿ ಸಮೃದ್ಧಗೊಳಿಸಿದ ಯುರೇನಿಯಂ ದಾಸ್ತಾನನ್ನು ದುರ್ಬಲಗೊಳಿಸಬೇಕಾಗುತ್ತದೆ ಮತ್ತು ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್ ಮೇಲಿನ ಅಮೆರಿಕ ಬೆಂಬಲಿತ ನಿರ್ಬಂಧಗಳನ್ನು ಮುಕ್ತಗೊಳಿಸಲಿದೆ. ಇದರಿಂದಾಗಿ ಇರಾನ್ ತಕ್ಷಣವೇ ತನ್ನ ತೈಲವನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಾಗಲಿದ್ದು, ಇದು ಅಮೆರಿಕವು ಇರಾನ್ಗೆ ನೀಡಿರುವ ಬಹುದೊಡ್ಡ ರಿಯಾಯಿತಿಯಾಗಿದೆ ಎಂದು ಉಭಯ ದೇಶಗಳು ಬಿಡುಗಡೆ ಮಾಡಿರುವ ವಿವರಗಳು ತಿಳಿಸಿವೆ.

ಯುದ್ಧವನ್ನು ಕೊನೆಗೊಳಿಸುವ ಈ ಪ್ರಾಥಮಿಕ ಒಪ್ಪಂದಕ್ಕೆ ಎರಡೂ ದೇಶಗಳ ನಾಯಕರು ಸಹಿ ಹಾಕಿದ ತಕ್ಷಣವೇ ಇದು “ಜಾರಿಗೆ” ಬಂದಿದೆ ಎಂದು ಈ ಒಪ್ಪಂದದ ಮಧ್ಯಸ್ಥಿಕೆಗೆ ಸಹಾಯ ಮಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ‘X’ (ಟ್ವಿಟರ್) ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಈ ಒಪ್ಪಂದವು ಸಂಘರ್ಷಗಳಿಗೆ ಶಾಶ್ವತ ಅಂತ್ಯ ಹಾಡಲು ಕರೆ ನೀಡುತ್ತದೆ ಮತ್ತು ಇರಾನ್ನ ಪರಮಾಣು ಕಾರ್ಯಕ್ರಮದ ಭವಿಷ್ಯದ ಕುರಿತು ಅಂತಿಮ ನಿರ್ಧಾರಕ್ಕೆ ಬರಲು 60 ದಿನಗಳ ಮಾತುಕತೆಯ ಸಮಯವನ್ನು ನಿಗದಿಪಡಿಸುತ್ತದೆ. ಆದಾಗ್ಯೂ, ದಾಳಿಗಳನ್ನು ಪುನರಾರಂಭಿಸುವ ಅವಕಾಶವನ್ನು ಟ್ರಂಪ್ ಮುಕ್ತವಾಗಿಟ್ಟಿದ್ದಾರೆ. ಈ ಒಪ್ಪಂದವು ಕಳೆದ ಕೆಲವು ದಿನಗಳಿಂದ ತೀವ್ರ ರಹಸ್ಯ ಮತ್ತು ಗೊಂದಲಗಳಿಂದ ಕೂಡಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ವಾರಾಂತ್ಯದಲ್ಲಿ ಇದಕ್ಕೆ ಡಿಜಿಟಲ್ ಮೂಲಕ ಸಹಿ ಹಾಕಿದ್ದಾರೆ ಎಂದು ತಿಳಿಸಿದ ನಂತರವೂ ಅಮೆರಿಕ ಅಧಿಕಾರಿಗಳು ಒಪ್ಪಂದದ ನಿಯಮಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು.
ಆದರೆ, ಬುಧವಾರ ಫ್ರಾನ್ಸ್ನ ವರ್ಸೈಲ್ಸ್ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಜೊತೆಗಿನ ಔತಣಕೂಟದಲ್ಲಿ ಭಾಗವಹಿಸಿದ್ದಾಗ ಟ್ರಂಪ್ ಈ ಒಪ್ಪಂದದ ಭೌತಿಕ ಪ್ರತಿಯೊಂದಕ್ಕೆ ಸಹಿ ಹಾಕಿದರು. ಶತಮಾನಗಳ ಇತಿಹಾಸದಲ್ಲಿ ಯುದ್ಧಗಳನ್ನು ಅಥವಾ ಪ್ರಾದೇಶಿಕ ವಿವಾದಗಳನ್ನು ಕೊನೆಗೊಳಿಸಿದ ಹಲವು ಐತಿಹಾಸಿಕ ಒಪ್ಪಂದಗಳಿಗೆ ಇದೇ ವರ್ಸೈಲ್ಸ್ ಅರಮನೆ ಸಾಕ್ಷಿಯಾಗಿದೆ.
ಫ್ರಾನ್ಸ್ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಭೇಟಿಯ ನಂತರ ವರ್ಸೈಲ್ಸ್ನಲ್ಲಿ ನಡೆದ ಔತಣಕೂಟದಿಂದ ಹೊರಡುವಾಗ ಟ್ರಂಪ್, “ಒಪ್ಪಂದಕ್ಕೆ ಸಹಿ ಹಾಕಲಾಗಿದೆ” ಎಂದು ಹೇಳಿದರು.
ಈ ಒಪ್ಪಂದದ 14 ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ….
ತಕ್ಷಣವೇ ಯುದ್ಧ ಸ್ಥಗಿತ:
ಒಪ್ಪಂದದ ಮೊದಲ ನಿಯಮದ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವಿನ ಎಲ್ಲಾ ಮಿಲಿಟರಿ ಸಂಘರ್ಷಗಳು ತಕ್ಷಣವೇ ಕೊನೆಗೊಳ್ಳಲಿವೆ. ಲೆಬನಾನ್ ಸೇರಿದಂತೆ ಎಲ್ಲಾ ಸಂಘರ್ಷ ಪೀಡಿತ ಪ್ರದೇಶಗಳಿಗೂ ಈ ಕದನ ವಿರಾಮ ಅನ್ವಯಿಸಲಿದೆ. ಭವಿಷ್ಯದಲ್ಲಿ ಪರಸ್ಪರರ ವಿರುದ್ಧ ಬಲಪ್ರಯೋಗ ಮಾಡುವುದಿಲ್ಲ ಎಂದು ಎರಡೂ ದೇಶಗಳು ಹೇಳಿವೆ. ಕದನ ವಿರಾಮ ಜಾರಿಗೆ ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ನೀಡಲು ಅಮೆರಿಕ ಒಪ್ಪಿಕೊಂಡಿದೆ.
ಸಾರ್ವಭೌಮತೆಗೆ ಗೌರವ:
ದಶಕಗಳಿಂದ ಪರಸ್ಪರರ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ದೂಷಿಸುತ್ತಿದ್ದ ಎರಡೂ ದೇಶಗಳು, ಇನ್ಮುಂದೆ ಪರಸ್ಪರ ಪ್ರಾದೇಶಿಕ ಸಮಗ್ರತೆ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಗೌರವಿಸಲು ಒಪ್ಪಿಕೊಂಡಿವೆ.
ನೌಕಾ ದಿಗ್ಬಂಧನ ಹಿಂಪಡೆಯಲಿರುವ ಅಮೆರಿಕ:
ಅಮೆರಿಕದಿಂದ ಇರಾನ್ಗೆ ಸಿಕ್ಕ ಅತಿ ದೊಡ್ಡ ರಿಯಾಯಿತಿ ಎಂದರೆ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿರುದ್ಧ ವಿಧಿಸಲಾಗಿದ್ದ ನೌಕಾ ದಿಗ್ಬಂಧನವನ್ನು ಅಮೆರಿಕ ಕೊನೆಗೊಳಿಸಲಿದೆ. ಅಲ್ಲದೆ, ಈ ಸಂಘರ್ಷಕ್ಕಾಗಿ ನಿಯೋಜಿಸಲಾಗಿದ್ದ ಅಮೇರಿಕಾದ ಮಿಲಿಟರಿಯನ್ನು ಅಲ್ಲಿಂದ ಹಿಂಪಡೆಯಲಾಗುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರ
ಜಾಗತಿಕ ತೈಲ ಮಾರುಕಟ್ಟೆಯ ದೃಷ್ಟಿಯಿಂದ ಇದು ಅತ್ಯಂತ ಪ್ರಮುಖ ನಿರ್ಧಾರವಾಗಿದೆ. ವಿಶ್ವದ ಅತ್ಯಂತ ಸೂಕ್ಷ್ಮ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಪುನರಾರಂಭಿಸಲು ಇರಾನ್ ಒಪ್ಪಿಕೊಂಡಿದೆ. ಈ ವಲಯದಲ್ಲಿ ಸುರಕ್ಷಿತ ನೌಕಾಯಾನವನ್ನು ಖಚಿತಪಡಿಸಿಕೊಳ್ಳಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲಿವೆ.
300 ಬಿಲಿಯನ್ ಡಾಲರ್ ಪುನರ್ನಿರ್ಮಾಣ ನಿಧಿ:
ಯುದ್ಧದಿಂದ ಹಾನಿಗೊಳಗಾದ ಇರಾನ್ನ ಮೂಲಸೌಕರ್ಯಗಳ ನಿರ್ಮಾಣ ಮತ್ತು ಆರ್ಥಿಕ ಚೇತರಿಕೆಗಾಗಿ ಸುಮಾರು 300 ಬಿಲಿಯನ್ ಡಾಲರ್ (ಸುಮಾರು 300 Billion USD) ಮೌಲ್ಯದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲು ಅಮೆರಿಕ ಬೆಂಬಲ ನೀಡಲಿದೆ. ಆದರೆ, ಇರಾನ್ ಒಪ್ಪಂದದ ನಿಯಮಗಳನ್ನು ಪಾಲಿಸುವುದರ ಮೇಲೆ ಈ ಹಣದ ಲಭ್ಯತೆ ನಿರ್ಧಾರವಾಗಲಿದೆ.
ಹಂತ-ಹಂತವಾಗಿ ನಿರ್ಬಂಧಗಳ ಸಡಿಲಿಕೆ:
ಇರಾನ್ ಮೇಲಿನ ಜಾಗತಿಕ ಹಾಗೂ ಅಮೆರಿಕ ತಾನು ವಿಧಿಸಿದ್ದ ಏಕಪಕ್ಷೀಯ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಲು ಅಮೆರಿಕ ಒಪ್ಪಿಕೊಂಡಿದೆ. ಆದರೆ ಇದು ತಕ್ಷಣವೇ ಜಾರಿಗೆ ಬರುವುದಿಲ್ಲ; ಬದಲಿಗೆ, ಭವಿಷ್ಯದ ಮಾತುಕತೆಯ ಪ್ರಗತಿಯ ಆಧಾರದ ಮೇಲೆ ಹಂತ-ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಪರಮಾಣು ಬಾಂಬ್ ತಯಾರಿಸುವುದಿಲ್ಲ ಎಂದ ಇರಾನ್:
ತಾವು ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಇರಾನ್ ಈ ಒಪ್ಪಂದದಲ್ಲಿ ಸ್ಪಷ್ಟವಾಗಿ ಪುನರುಚ್ಚರಿಸಿದೆ. ಕೇವಲ ಯುರೇನಿಯಂ ಸಮೃದ್ಧಗೊಳಿಸುವಿಕೆಗೆ ಮಿತಿ ಹೇರುವುದಷ್ಟೇ ಅಲ್ಲದೆ, ಪರಮಾಣು ಅಸ್ತ್ರ ತಯಾರಿಕೆಯ ಮೇಲಿನ ಸಂಪೂರ್ಣ ನಿಷೇಧ ಹೇರುವ ಅಮೆರಿಕದ ಪ್ರಸ್ತಾಪಕ್ಕೆ ಇರಾನ್ ಒಪ್ಪಿಕೊಂಡಿದೆ.
ಯುರೇನಿಯಂ ನಾಶಪಡಿಸದೆ, ದುರ್ಬಲಗೊಳಿಸುವುದು (Down-Blending):
ಇರಾನ್ ತನ್ನ ಬಳಿ ಇರುವ ಸಮೃದ್ಧ ಯುರೇನಿಯಂ ದಾಸ್ತಾನನ್ನು ನಾಶಪಡಿಸುವ ಬದಲು, ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಉಸ್ತುವಾರಿಯಲ್ಲಿ ಅದನ್ನು ‘ಡೌನ್-ಬ್ಲೆಂಡ್’ (ಅಂದರೆ ಅದರ ತೀವ್ರತೆಯನ್ನು ಕಡಿಮೆ ಮಾಡುವುದು) ಮಾಡಲು ಸಹ ಒಪ್ಪಿಕೊಂಡಿದೆ. ಹೀಗೆ ಮಾಡುವುದರಿಂದ ಯುರೇನಿಯಂ ಅನ್ನು ಬಾಂಬ್ ತಯಾರಿಕೆಗೆ ಬಳಸಲು ಸಾಧ್ಯವಾಗುವುದಿಲ್ಲ, ಆದರೆ ಶಾಂತಿಯುತ ನಾಗರಿಕ ಪರಮಾಣು ಅಗತ್ಯಗಳಿಗಾಗಿ (ವಿದ್ಯುತ್ ಇತ್ಯಾದಿ) ಬಳಸಬಹುದು.
ಮುಂದಿನ ೬೦ ದಿನಗಳ ಕಾಲ ಯುದ್ಧವಿಲ್ಲ:
ಹಾಲಿ ಒಪ್ಪಂದದ ಪ್ರಕಾರ ಸಂಘರ್ಷದಬೆಗಿನ ಅಂತಿಮ ಮಾತುಕತೆ ಮುಗಿಯುವವರೆಗೆ ಪರಿಸ್ಥಿತಿಯನ್ನು ಹದಗೆಡಿಸದಿರಲು ಉಭಯ ದೇಶಗಳು ಒಪ್ಪಿಕೊಂಡಿವೆ. ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ವಿಸ್ತರಿಸುವುದಿಲ್ಲ ಎಂದು ಹೇಳಿದೆ ಮತ್ತು ಅಮೆರಿಕ ಯಾವುದೇ ಹೊಸ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಿದೆ.
ಇರಾನ್ ತೈಲ ರಫ್ತು ಪುನರಾರಂಭಕ್ಕೆ ಹಸಿರು ನಿಶಾನೆ:
ಒಪ್ಪಂದ ಜಾರಿಯಾಗುವ ಅವಧಿಯಲ್ಲಿ ಇರಾನ್ ಮತ್ತೆ ತೈಲ ರಫ್ತು ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಅಮೆರಿಕ ವಿಶೇಷ ವಿನಾಯಿತಿಗಳನ್ನು ನೀಡಲಿದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಇರಾನ್ಗೆ ದೊಡ್ಡ ಆಸರೆಯಾಗಲಿದೆ.
ಮುಟ್ಟುಗೋಲು ಹಾಕಿಕೊಂಡ ಇರಾನ್ನ ಆಸ್ತಿ ಬಿಡುಗಡೆ:
ವಿವಿಧ ದೇಶಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ (Frozen) ಇರಾನ್ನ ವಿದೇಶಿ ಆಸ್ತಿಗಳನ್ನು ಮರಳಿ ಪಡೆಯಲು ಈ ಒಪ್ಪಂದವು ದಾರಿ ಮಾಡಿಕೊಡುತ್ತದೆ. ಇದು ಕೂಡ ಇರಾನ್ನ ನಿಯಮ ಪಾಲನೆಯ ಆಧಾರದ ಮೇಲೆ ಹಂತ-ಹಂತವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯ ಬಿಡುಗಡೆ ನಡೆಯಲಿದೆ.
ಜಂಟಿ ಉಸ್ತುವಾರಿ ಸಮಿತಿ ರಚನೆ:
ಒಪ್ಪಂದದ ನಿಯಮಗಳನ್ನು ಎರಡೂ ಕಡೆಯವರು ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂದು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ವಿವಾದಗಳನ್ನು ಬಗೆಹರಿಸಲು ಒಂದು ಜಂಟಿ ಉಸ್ತುವಾರಿ ಸಮಿತಿಯನ್ನು ರಚಿಸಲಾಗುತ್ತದೆ.
ಕೆಲವು ವಿಷಯಗಳಿಗಷ್ಟೇ ಸದ್ಯಕ್ಕೆ ಪರಿಹಾರ:
ಈ ಒಪ್ಪಂದವು ವಿಶಾಲವಾಗಿದ್ದರೂ, ಕೆಲವು ವಿವಾದಾತ್ಮಕ ವಿಷಯಗಳನ್ನು ಸದ್ಯಕ್ಕೆ ಬದಿಗಿಡಲಾಗಿದೆ. ಒಪ್ಪಂದದ ಪ್ರಾಥಮಿಕ ನಿಯಮಗಳು ಯಶಸ್ವಿಯಾಗಿ ಜಾರಿಯಾದ ನಂತರ, ಉಳಿದ ವಿಷಯಗಳ ಬಗ್ಗೆ ಚರ್ಚಿಸಿ ಅಂತಿಮ ಒಪ್ಪಂದ ರೂಪಿಸಲಾಗುವುದು ಎಂದು ಹೇಳಲಾಗಿದೆ.
ಅಂತಿಮ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಅನುಮೋದನೆ ಅಗತ್ಯ:
ಯಾವುದೇ ಶಾಶ್ವತ ಶಾಂತಿ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UN Security Council) ಕಡ್ಡಾಯ ನಿರ್ಣಯದ ಮೂಲಕವೇ ಅಂಗೀಕಾರ ನೀಡಲಾಗುವುದು ಎಂದು ಜ್ಞಾಪಕ ಪತ್ರದಲ್ಲಿ ಹೇಳಲಾಗಿದೆ. ಇದರಿಂದ ಒಪ್ಪಂದಕ್ಕೆ ಅಂತಾರಾಷ್ಟ್ರೀಯ ಕಾನೂನುಬದ್ಧ ರಕ್ಷಣೆ ಸಿಗಲಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಈ ಒಪ್ಪಂದವು ಜಾಗತಿಕ ರಾಜತಾಂತ್ರಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮುನ್ನಡೆಯಾಗಿದೆ. ಸದ್ಯಕ್ಕೆ ಇದು ಯುದ್ಧವನ್ನು ನಿಲ್ಲಿಸಿದೆ, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ ಮತ್ತು ಶಾಂತಿಗಾಗಿ ಒಂದು ವೇದಿಕೆಯನ್ನು ಸೃಷ್ಟಿಸಿದೆ. ಆದರೆ ಮುಂದಿನ 60 ದಿನಗಳಲ್ಲಿ ನಡೆಯಲಿರುವ ಮಾತುಕತೆಗಳು ಈ ತಾತ್ಕಾಲಿಕ ಒಪ್ಪಂದವನ್ನು ಶಾಶ್ವತ ಶಾಂತಿಯ ಒಪ್ಪಂದವನ್ನಾಗಿ ಪರಿವರ್ತಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ