
ಸೂರತ್: ಗುಜರಾತಿನ ಸೂರತ್‌ನಲ್ಲಿ 36 ವರ್ಷದ ಉದ್ಯಮಿಯೊಬ್ಬರು ಹಠಾತ್ತನೆ ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ, ಕುಟುಂಬ ಸದಸ್ಯರಿಗೆ ಆ ವ್ಯಕ್ತಿಯ ಫೋನ್‌ನಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದವು. ಅದರಲ್ಲಿ ಆತನನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿತ್ತು. ಹಾಗೂ ಸುರಕ್ಷಿತವಾಗಿ ಬಿಡಲು 50 ಲಕ್ಷ ರೂ.ಹಣ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಆದರೆ, ಪೊಲೀಸರು ಈ ಪ್ರಕರಣದ ಬೆನ್ನು ಹತ್ತಿದ ನಂತರ ಪ್ರಕರಣವು ಯಾರೂ ನಿರೀಕ್ಷಿಸದ ತಿರುವು ಪಡೆಯಿತು. ಕೊನೆಯಲ್ಲಿ ಹೊರಬಂದ ಸತ್ಯ ಇತ್ತ ಪೊಲೀಸರನ್ನು ಮತ್ತು ಅತ್ತ ಅಪಹರಣಕ್ಕೊಳಗಾಗಿದ್ದಾನೆ ಎನ್ನಲಾದ ವ್ಯಕ್ತಿಯ ಕುಟುಂಬಸ್ಥರನ್ನು ದಂಗಾಗಿಸಿತು…!
ಈ ಇಡೀ ಪ್ರಕರಣ ಜೂನ್ 12 ರಂದು ಆರಂಭವಾಗಿತ್ತು. ಸೂರತ್‌ನ ಉತ್ರನ್ ಪ್ರದೇಶದ ನಿವಾಸಿಯಾದ ಜಿಗ್ನೇಶ ಭಾಯ್ ಲಾಲಜಿ ಭಾಯ್ ತಲಾವಿಯಾ ಎಂಬವರ ಪತ್ನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ, ಜಿಗ್ನೇಶ ಭಾಯ್ ಅವರ ಮೊಬೈಲ್ ಫೋನ್‌ನಿಂದ ಕುಟುಂಬದವರಿಗೆ ಬೆದರಿಕೆ ಸಂದೇಶಗಳು ಬರಲಾರಂಭಿಸಿದವು. ಜಿಗ್ನೇಶ ಭಾಯ್ ಅವರನ್ನು ಅಪಹರಿಸಲಾಗಿದ್ದು, ಆತ ಸುರಕ್ಷಿತವಾಗಿ ಮರಳಬೇಕಾದರೆ 50 ಲಕ್ಷ ರೂಪಾಯಿ ನೀಡಬೇಕು ಎಂದು ಅದರಲ್ಲಿ ಬೇಡಿಕೆ ಇಡಲಾಗಿತ್ತು. ಅಷ್ಟೇ ಅಲ್ಲದೆ, ಒಂದು ವೇಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಆತನನ್ನು ಕೊಲೆ ಮಾಡಲಾಗುವುದು ಮತ್ತು ಕೇವಲ ಆತನ ಶವವಷ್ಟೇ ಸಿಗಲಿದೆ ಎಂದು ಸಂದೇಶಗಳಲ್ಲಿ ಬೆದರಿಕೆ ಹಾಕಲಾಗಿತ್ತು.
ಪೊಲೀಸರು ತಮ್ಮ ತನಿಖೆ ಆರಂಭಿಸುತ್ತಿದ್ದಂತೆಯೇ ಜಿಗ್ನೇಶ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಂತೆ ಕಾಣುವ ವಿಡಿಯೊವೊಂದು ಕುಟುಂಬಕ್ಕೆ ತಲುಪಿತು. ಆ ವಿಡಿಯೋದಲ್ಲಿ ಆತನನ್ನು ಬಟ್ಟೆಯ ತುಂಡುಗಳಿಂದ ಕಿಟಕಿಯ ಗ್ರಿಲ್‌ಗೆ ಕಟ್ಟಿ ಹಾಕಿರುವುದನ್ನು ಕಾಣಬಹುದಾಗಿತ್ತು.
ಪೊಲೀಸರ ಪ್ರಕಾರ, ತಾಂತ್ರಿಕ ಕಣ್ಗಾವಲು (Technical Surveillance), ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗುಪ್ತಚರದ ಮಾಹಿತಿ ಸಹಾಯದಿಂದ ತನಿಖೆಯನ್ನು ಮುಂದುವರಿಸಲಾಯಿತು. ಆರಂಭಿಕ ತಾಂತ್ರಿಕ ದತ್ತಾಂಶಗಳು ಜಿಗ್ನೇಶ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿರಬಹುದು ಎಂದು ಸೂಚಿಸಿದವು. ಆದಾಗ್ಯೂ, ವಿಡಿಯೊದ ವಿಶ್ಲೇಷಣೆ ಮತ್ತು ಮಾಹಿತಿ ಜಾಲದಿಂದ (Informant Network) ಸಿಕ್ಕ ಸುಳಿವುಗಳ ಆಧಾರದ ಮೇಲೆ, ಆ ವಿಡಿಯೋವನ್ನು ವಾಸ್ತವವಾಗಿ ಗೋಧ್ರಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಪತ್ತೆಹಚ್ಚಿದರು. ತರುವಾಯ, ಪೊಲೀಸ್ ತಂಡವೊಂದು ಆ ಪ್ರದೇಶಕ್ಕೆ ಭೇಟಿ ನೀಡಿ, ವಿವಿಧ ಹೋಟೆಲ್‌ಗಳಲ್ಲಿ ಶೋಧ ನಡೆಸಿ ಕೊನೆಗೆ ಒಂದು ಹೋಟೆಲ್‌ನಲ್ಲಿ ಜಿಗ್ನೇಶ ಅವರನ್ನು ಪತ್ತೆಹಚ್ಚಿತು.
ವಿಚಾರಣೆಯ ಸಮಯದಲ್ಲಿ, ಹೊರಬಿದ್ದ ಸತ್ಯದಿಂದ ಒಮ್ಮೆ ಪೊಲೀಸರೇ ಶಾಕ್ ಆದರು. ತನನ್ನು ಯಾರೂ ಅಪಹರಿಸಿಲ್ಲ ಎಂಬುದನ್ನು ಜಿಗ್ನೇಶ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಆತ ಷೇರು ಮಾರುಕಟ್ಟೆ ಮತ್ತು ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ಸುಮಾರು 50 ಲಕ್ಷದಿಂದ 60 ಲಕ್ಷ ರೂಪಾಯಿಗಳಷ್ಟು ಹಣವನ್ನು ಕಳೆದುಕೊಂಡಿದ್ದು, ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದ ಎಂಬುದು ತನಿಖೆಯಿಂದ ಬಹಿರಂಗವಾಯಿತು. ತನ್ನ ಆರ್ಥಿಕ ಮುಗ್ಗಟ್ಟಿನಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಕುಟುಂಬ ಹಾಗೂ ಸಂಬಂಧಿಕರಿಂದ ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಲು ಆತನೇ ಈ ಇಡೀ ಅಪಹರಣದ ನಾಟಕವನ್ನು ಸೃಷ್ಟಿಸಿದ್ದ ಎಂಬುದು ಗೊತ್ತಾಯಿತು. ತಾನೇ ಸ್ವತಃ ಹಣದ ಬೇಡಿಕೆಯ ಮೆಸೇಜ್‌ಗಳನ್ನು ಕಳುಹಿಸಿದ್ದ ಮತ್ತು ತಾನೇ ಆ ವಿಡಿಯೋವನ್ನು ಮಾಡಿ ಕುಟುಂಬಕ್ಕೆ ಕಳುಹಿಸಿದ್ದ. ತನಿಖೆಯ ವೇಳೆ, ಆ ಉದ್ಯಮಿ ತನ್ನನ್ನೇ ತಾನು ಹೇಗೆ ಕಟ್ಟಿ ಹಾಕಿಕೊಂಡು, ಅಸಹಾಯಕನಾಗಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಎಂಬುದನ್ನು ಪೊಲೀಸರ ಮುಂದೆ ಮರುಸೃಷ್ಟಿ (Reenact) ಮಾಡಿ ತೋರಿಸಿದ್ದಾನೆ.
ಉಪ ಪೊಲೀಸ್ ಕಮಿಷನರ್ (DCP) ಲಖಧೀರ ಸಿಂಗ್ ಝಾಲಾ ಮಾತನಾಡಿ, ತನಿಖೆಯಲ್ಲಿ ಬೇರೆ ಯಾವುದೇ ವ್ಯಕ್ತಿಯ ಭಾಗೀದಾರಿಕೆ ಕಂಡುಬಂದಿಲ್ಲ ಮತ್ತು ಜಿಗ್ನೇಶ ಒಬ್ಬನೇ ಈ ಇಡೀ ಸಂಚನ್ನು ರೂಪಿಸಿದ್ದಾನೆ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ