ಮುಂಗಾರಿನ ಉಲ್ಟಾ ಪಲ್ಟಾ ಆಟ : ರಾಜಸ್ಥಾನದ ಮರುಭೂಮಿ ಹಸಿರಾಗುತ್ತಿದೆ, ಮಳೆ ಬೀಳುವ ಪ್ರದೇಶಗಳು ಒಣಗುತ್ತಿವೆ ಯಾಕೆ ?

ನವದೆಹಲಿ: ದೇಶಾದ್ಯಂತ ನೈಋತ್ಯ ಮುಂಗಾರು ಮಾರುತಗಳು ಮತ್ತೊಮ್ಮೆ ಚುರುಕಾಗಲಿ ಎಂದು ಇಡೀ ಭಾರತ ಕಾತರದಿಂದ ಕಾಯುತ್ತಿರುವ ಬೆನ್ನಲ್ಲೇ, ದೇಶದ ಹವಾಮಾನ ವ್ಯವಸ್ಥೆಯಲ್ಲಿ ತೀರಾ ಆಶ್ಚರ್ಯಕರ ಮತ್ತು ಆತಂಕಕಾರಿ ವಿದ್ಯಮಾನವೊಂದು ಮುಂಚೂಣಿಗೆ ಬಂದಿದೆ.
ಭಾರತದ ಅತ್ಯಂತ ಒಣ ಭೂಮಿ ಹಾಗೂ ಥಾರ್ ಮರುಭೂಮಿಯ ನೆಲೆಯಾಗಿರುವ ರಾಜಸ್ಥಾನದಲ್ಲಿ ಈ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಆದರೆ, ಪ್ರತಿ ವರ್ಷ ಮುಂಗಾರಿನ ಗರಿಷ್ಠ ಲಾಭ ಪಡೆಯುತ್ತಿದ್ದ ಮಹಾರಾಷ್ಟ್ರ, ಕರ್ನಾಟಕ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳು ಮಾತ್ರ ಈ ಬಾರಿ ತೀವ್ರ ಮಳೆ ಕೊರತೆಯಿಂದ ಕಂಗಾಲಾಗಿದೆ !
ಮರುಭೂಮಿ ರಾಜ್ಯವೊಂದು ದಾಖಲೆ ಮಳೆಯನ್ನು ಸವಿಯುತ್ತಿರುವಾಗ, ಅರಬ್ಬೀ ಸಮುದ್ರದ ಮುಂಗಾರು ಮಾರುತಗಳನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿರುವ ಪ್ರದೇಶಗಳು ಮಳೆಯಿಲ್ಲದೆ ಮಳೆ ಕೊರತೆಯಾಗಿರುವುದು ಕೃಷಿಕರು, ಜಲ ಸಂಪನ್ಮೂಲ ನಿರ್ವಹಣಾಧಿಕಾರಿಗಳು ಹಾಗೂ ಹವಾಮಾನ ತಜ್ಞರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಮುಗಿಲಿನ ಸಹಸ್ರಾರು ಮೀಟರ್ ಎತ್ತರದಲ್ಲಿ ನಡೆಯುತ್ತಿರುವ ವಾಯುಮಂಡಲದ ಸಂಕೀರ್ಣ ಬದಲಾವಣೆಯೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ದಾರಿ ತಪ್ಪಿದ ಮುಂಗಾರು ಮಾರುತಗಳು!
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಮುಂಗಾರು ಮಾರುತಗಳು ಭಾರತದ ಪಶ್ಚಿಮ ಕರಾವಳಿಯ ಮೂಲಕ ಅತ್ಯಂತ ವೇಗವಾಗಿ ಮುನ್ನುಗ್ಗುತ್ತವೆ. ಅರಬ್ಬೀ ಸಮುದ್ರದಿಂದ ತೇವಾಂಶ ಹೊತ್ತು ತರುವ ಮಾರುತಗಳು ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಸಿ, ನಂತರ ಮಧ್ಯ ಭಾರತದತ್ತ ಸಾಗುತ್ತವೆ. ಇತ್ತ ರಾಜಸ್ಥಾನಕ್ಕೆ ಮುಂಗಾರು ಮಳೆಯಾಗಲು ಜೂನ್ ಕೊನೆಯ ವಾರ ಅಥವಾ ಜುಲೈ ಆರಂಭದವರೆಗೆ ಕಾಯಬೇಕಾಗುತ್ತದೆ.
ಆದರೆ, 2026ರ ಈ ಮುಂಗಾರು ಋತುವಿನಲ್ಲಿ ಮುಂಗಾರಿನ ಸಹಜ ಲಯವೇ ತಪ್ಪಿಹೋಗಿದೆ. ಜೂನ್ ಆರಂಭದಿಂದಲೂ ಮಳೆಯು ಕೇವಲ ವಾಯುವ್ಯ ಭಾರತದ ಭಾಗಗಳಲ್ಲೇ ಕೇಂದ್ರೀಕೃತವಾಗಿದ್ದು, ಕರ್ನಾಟಕ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಹಾಗೂ ಮಧ್ಯ ಭಾರತದ ಬಹುತೇಕ ಭಾಗಗಳು ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಮುಂಬೈ ನಗರವು ಕಳೆದ ಹಲವು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಳೆಯ ಆರಂಭವನ್ನು ಕಂಡಿದ್ದು, ಮಹಾರಾಷ್ಟ್ರದ ಜಲಾಶಯಗಳ ನೀರಿನ ಮಟ್ಟ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಹವಾಮಾನ ಏರುಪೇರಿಗೆ ಕಾರಣವಾದ ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ (ಪಾಶ್ಚಾತ್ಯ ವಿಕ್ಷೋಭೆ):
ಈ ವಿಚಿತ್ರ ಹವಾಮಾನ ವೈಪರೀತ್ಯಕ್ಕೆ ತಜ್ಞರು ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ (ಪಾಶ್ಚಾತ್ಯ ವಿಕ್ಷೋಭೆ) ಅನ್ನು ಪ್ರಮುಖ ಕಾರಣವಾಗಿ ಗುರುತಿಸಿದ್ದಾರೆ. ಮೆಡಿಟರೇನಿಯನ್ ಪ್ರದೇಶದಲ್ಲಿ ಸೃಷ್ಟಿಯಾಗಿ ಭಾರತದತ್ತ ಸಾಗುವ ಈ ಹವಾಮಾನ ವ್ಯವಸ್ಥೆಯು ಸಾಮಾನ್ಯವಾಗಿ ಚಳಿಗಾಲದಲ್ಲಿ ಉತ್ತರ ಭಾರತ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಮಳೆ ಹಾಗೂ ಹಿಮಪಾತವನ್ನು ಉಂಟುಮಾಡುತ್ತದೆ. ಆದರೆ, ಈ ವರ್ಷ ಜೂನ್ ತಿಂಗಳಿನಲ್ಲೂ ಇವುಗಳ ಪ್ರಭಾವ ಮುಂದುವರಿದಿದೆ.
ಉತ್ತರ ಭಾರತದಾದ್ಯಂತ ಚಲಿಸಿದ ಈ ವ್ಯವಸ್ಥೆಗಳು, ಅರಬ್ಬೀ ಸಮುದ್ರದಿಂದ ಬಂದ ತೇವಾಂಶದೊಂದಿಗೆ ಬೆರೆತು ರಾಜಸ್ಥಾನ, ಪಂಜಾಬ್, ಹರಿಯಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಗುಡುಗು ಸಹಿತ ಮಳೆಯನ್ನು ಉಂಟುಮಾಡಿದವು. ಸಾಂಪ್ರದಾಯಿಕ ಮುಂಗಾರು ಮಾರ್ಗದ ಮೂಲಕ ಮಧ್ಯ ಭಾರತಕ್ಕೆ ಮಳೆ ತರಬೇಕಾಗಿದ್ದ ವಾಯುಮಂಡಲದ ತೇವಾಂಶವನ್ನು ಈ ವ್ಯವಸ್ಥೆಯು ಉತ್ತರ ಭಾರತದತ್ತ ಸೆಳೆದೊಯ್ದಿದೆ. ಇದರಿಂದಾಗಿ ರಾಜಸ್ಥಾನದ ಮರುಭೂಮಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆ ದಾಖಲಾಗಿದೆ.

ಪ್ರಮುಖ ಸುದ್ದಿ :-   ದೇವಸ್ಥಾನದ ಸಭಾಮಂಟಪದ ಮೇಲ್ಛಾವಣಿ ಕುಸಿತ; ನಾಲ್ವರು ಸಾವು, 23 ಮಂದಿಗೆ ಗಾಯ

ದುರ್ಬಲಗೊಂಡ ಅರಬ್ಬೀ ಸಮುದ್ರದ ‘ಎಂಜಿನ್’:
ಮತ್ತೊಂದೆಡೆ, ಮುಂಗಾರಿನ ಶಕ್ತಿಯಾಗಿದ್ದ ಅರಬ್ಬೀ ಸಮುದ್ರದ ಕವಲು ಈ ಬಾರಿ ತೀರಾ ದುರ್ಬಲಗೊಂಡಿದೆ. ದಕ್ಷಿಣ ಹಿಂದೂ ಮಹಾಸಾಗರದಿಂದ ತೇವಾಂಶವನ್ನು ಅರಬ್ಬೀ ಸಮುದ್ರಕ್ಕೆ ಹಾಗೂ ಅಲ್ಲಿಂದ ಭಾರತದ ಕರಾವಳಿಗೆ ಸಾಗಿಸಲು ಬಲವಾದ ಗಾಳಿಯ ಅಗತ್ಯವಿರುತ್ತದೆ. ಇದನ್ನು ‘ಸೋಮಾಲಿ ಜೆಟ್’ ಎನ್ನಲಾಗುವ ಕೆಳಮಟ್ಟದ ಗಾಳಿಯ ಪ್ರವಾಹಗಳು ಬಲಪಡಿಸುತ್ತವೆ. ಇದು ಭಾರತಕ್ಕೆ ತೇವಾಂಶವನ್ನು ಹೊತ್ತು ತರುವ ಕನ್ವೇಯರ್ ಬೆಲ್ಟ್‌ನಂತೆ ಕೆಲಸ ಮಾಡುತ್ತದೆ. ಆದರೆ ಈ ವರ್ಷ, ಈ ವ್ಯವಸ್ಥೆಯು ಪೂರ್ಣ ಪ್ರಮಾಣದ ಶಕ್ತಿ ಪಡೆಯಲು ವಿಫಲವಾಗಿದೆ.
ಜೂನ್ ತಿಂಗಳ ಸ್ಯಾಟಲೈಟ್ (ಉಪಗ್ರಹ) ಚಿತ್ರಗಳು ಪಶ್ಚಿಮ ಕರಾವಳಿಯುದ್ದಕ್ಕೂ ದಟ್ಟವಾದ ಮೋಡಗಳ ಕೊರತೆಯನ್ನು ಎತ್ತಿ ತೋರಿಸಿವೆ. ಪಶ್ಚಿಮ ಕರಾವಳಿಯಲ್ಲಿ ವ್ಯಾಪಕ ಮಳೆ ತರಬೇಕಾಗಿದ್ದ ಮೋಡಗಳ ಸಾಲುಗಳು ಕಾಣೆಯಾಗಿವೆ. ತೇವಾಂಶದ ಕೊರತೆಯಿಂದಾಗಿ ಇಡೀ ರಾಜ್ಯ ಒಣಹವೆಯಿಂದ ಕೂಡಿದೆ.

ಉತ್ತರಕ್ಕೆ ಸರಿದ ‘ಮಾನ್ಸೂನ್ ಟ್ರಫ್ʼ (Monsoon Trough):
ಉತ್ತರ ಭಾರತದಾದ್ಯಂತ ವಿಸ್ತರಿಸಿರುವ ಕಡಿಮೆ ಒತ್ತಡದ ವಲಯವಾದ ‘ ಮಾನ್ಸೂನ್ ಟ್ರಫ್ (Monsoon Trough): ಮಳೆ ತರುವ ವ್ಯವಸ್ಥೆಯನ್ನು ಮುನ್ನಡೆಸುವ ಹಳಿಗಳಂತೆ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ ಇದು ಮಧ್ಯ ಭಾರತದ ಹತ್ತಿರವಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢಗಳಲ್ಲಿ ಮಳೆ ಹಂಚಿಕೆಗೆ ನೆರವಾಗುತ್ತದೆ. ಆದರೆ, ಈ ಬಾರಿ ವೆಸ್ಟರ್ನ್ ಡಿಸ್ಟರ್ಬೆನ್ಸ್ ಪ್ರಭಾವದಿಂದಾಗಿ ಈ ‘ಮಾನ್ಸೂನ್ ಟ್ರಫ್ʼ ಉತ್ತರದ ಕಡೆಗೆ ಸರಿದಿದೆ. ಪರಿಣಾಮವಾಗಿ ಹಿಮಾಲಯದ ತಪ್ಪಲು, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಮಳೆ ಹೆಚ್ಚಾಗಿದ್ದು, ಮಧ್ಯ ಭಾರತ ಹಾಗೂ ದಕ್ಷಿಣ ಬಾರತದ ಕರ್ನಾಟಕ ಹಾಗೂ ಇತರ ಭಾಗಗಳು ಮಳೆಯಿಲ್ಲದೆ ವಂಚಿತವಾಗಿದೆ. ಇದು 2026ರ ಮುಂಗಾರು ಋತುವಿನ ಪ್ರಮುಖ ವೈಶಿಷ್ಟ್ಯವಾಗಿದೆ.
ಒಣ ಹವೆಯ ಆಕ್ರಮಣ:
ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವಂತೆ ವಾಯುವ್ಯ ಭಾಗದಿಂದ ಮಧ್ಯ ಭಾರತಕ್ಕೆ ಒಣ ಹವೆಯು ನುಗ್ಗುತ್ತಿದೆ. ವಾಯುಮಂಡಲದ ಮಧ್ಯಭಾಗದಲ್ಲಿರುವ ಈ ಒಣ ಗಾಳಿಯು ಒಂದು ಮುಚ್ಚಳದಂತೆ ಕಾರ್ಯನಿರ್ವಹಿಸುತ್ತಿದ್ದು, ತೇವಾಂಶವಿದ್ದರೂ ಮೋಡಗಳು ಮಳೆ ತರುವ ಬೃಹತ್ ವ್ಯವಸ್ಥೆಯನ್ನು ತಡೆಯುತ್ತಿದೆ.
ಇನ್ನು ರಾಜಸ್ಥಾನದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕೂಡ ಒಳ್ಳೆಯ ಸುದ್ದಿಯಲ್ಲ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಮರುಭೂಮಿಯ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲಿ ಈ ಅತಿಯಾದ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯು ಪ್ರವಾಹದ ಭೀತಿಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಗ್ರಿಲ್‌ಗೆ ಕೈಗಳನ್ನು ಕಟ್ಟಿದ್ದರು...ಬಾಯಿಗೆ ಬಟ್ಟೆ ತುರುಕಿದ್ದರು..: ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿದ ಪೊಲೀಸರು-ಕುಟುಂಬಸ್ಥರೇ ಬೆಸ್ತುಬಿದ್ದರು...!

ಇದು ಹವಾಮಾನ ಬದಲಾವಣೆಯ ಮುನ್ಸೂಚನೆಯೇ?
ಯಾವುದೇ ಒಂದು ಹವಾಮಾನ ಋತುವನ್ನು ದೃಷ್ಟಿಯಲ್ಲಿಟ್ಟು ನೇರವಾಗಿ ಹವಾಮಾನ ಬದಲಾವಣೆಗೆ (Climate Change) ಲಿಂಕ್ ಮಾಡಬಾರದು ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರಾದರೂ, ಕಳೆದ ಒಂದು ದಶಕದ ಪ್ರವೃತ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಭಾರತದಲ್ಲಿ ಮುಂಗಾರು ಮಳೆಯ ಮಾದರಿಯು ತೀವ್ರವಾಗಿ ಬದಲಾಗುತ್ತಿದ್ದು, ಸುದೀರ್ಘ ಒಣ ಹವೆಯ ನಂತರ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿಯುವ ವಿದ್ಯಮಾನಗಳು ಹೆಚ್ಚಾಗುತ್ತಿವೆ. ಸಾಂಪ್ರದಾಯಿಕ ಮಳೆ ಪ್ರದೇಶಗಳು ಒಣಗುತ್ತಿದ್ದು, ಮಳೆ ಲಡಿಮೆ ಬೀಳುವ ವಾಯುವ್ಯ ಭಾರತದಲ್ಲಿ ಅತಿವೃಷ್ಟಿಯಾಗುತ್ತಿದೆ.
ಇದು ಒಂದು ಋತುವಿನ ಬದಲಾವಣೆಯಲ್ಲ ; ಬದಲಿಗೆ ಭಾರತದ ಮುಂಗಾರಿನ ಭೂಗೋಳವೇ ಬದಲಾಗುತ್ತಿರುವುದರ ಸ್ಪಷ್ಟ ಮುನ್ಸೂಚನೆಯಾಗಿದೆ. ಕೋಟ್ಯಂತರ ರೈತರು, ನಗರಗಳು ಮತ್ತು ದೇಶದ ಆರ್ಥಿಕತೆ ನಂಬಿಕೊಂಡಿರುವ ಮುಂಗಾರು ಇನ್ನು ಮುಂದೆ ಎಂದಿಗೂ ಊಹಿಸಲು ಸಾಧ್ಯವಾಗದಷ್ಟು ಸಂಕೀರ್ಣವಾಗಲಿದೆ ಎಂಬುದಕ್ಕೆ ಇದುವೇ ಸಾಕ್ಷಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement