ಎರಡು ಕೊಲೆ ಸಂಚು ವಿಫಲ ; ನಂತ್ರ ಜನ್ಮದಿನದ ನೆಪದಲ್ಲಿ ಕರೆದೊಯ್ದು ಭಾವಿ ಪತಿಯನ್ನೇ 400 ಅಡಿ ಪ್ರಪಾತಕ್ಕೆ ತಳ್ಳಿ ಸಾಯಿಸಿದ ಯುವತಿ !

ಪುಣೆ : ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಲೋಹಗಢ್ ಕೋಟೆಯಲ್ಲಿ ನಡೆದ ಭೀಕರ ಚಾರಣ ದುರಂತ ಎಂದು ಆರಂಭದಲ್ಲಿ ವರದಿಯಾಗಿದ್ದ ಪ್ರಕರಣವೊಂದು ಈಗ ಒಂದು ಅತ್ಯಂತ ಕ್ರೂರ ಹಾಗೂ ವ್ಯವಸ್ಥಿತ ಕೊಲೆ ಸಂಚು ಎಂದು ಬೆಳಕಿಗೆ ಬಂದಿದೆ.
ತನ್ನ ಭಾವಿ ಪತಿ, 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ ಅಗರ್ವಾಲ್‌ ಅವರನ್ನು ಅತ್ಯಂತ ವ್ಯವಸ್ಥಿತವಾಗಿ ಆಳ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ 20 ವರ್ಷದ ಸಿಯಾ ಗೋಯಲ್ ಮತ್ತು ಆಕೆಯ ಸಿಕ್ರೇಟ್‌ ಪ್ರೇಮಿ, 22 ವರ್ಷದ ಚೇತನ್ ಚೌಧರಿಯನ್ನು ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜೂನ್ 18 ರಂದು ಕೇತನ್ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವಿಗೀಡಾಗಿದ್ದರು. ಅವರು “ಫೋಟೋ ತೆಗೆದುಕೊಳ್ಳುವಾಗ ಜೋರಾಗಿ ಬೀಸಿದ ಗಾಳಿ ಮತ್ತು ಕಾಲು ಜಾರಿದ್ದರಿಂದ ಈ ಅಪಘಾತ ಸಂಭವಿಸಿದೆ” ಎಂದು ಸಿಯಾ ಆರಂಭದಲ್ಲಿ ಕಥೆ ಕಟ್ಟಿದ್ದಳು. ಆದರೆ, ಪೊಲೀಸರ ನಿರಂತರ ತನಿಖೆ, ತಾಂತ್ರಿಕ ಕಣ್ಗಾವಲು ಮತ್ತು ತೀವ್ರ ವಿಚಾರಣೆಯು ಈ ಭೀಕರ ಪ್ರೇಮ ತ್ರಿಕೋನ ಹಾಗೂ ಕೇತನ್‌ಗೆ ತಿಳಿಯದಂತೆ ಆತನ ಕೊಲೆಗೆ ನಡೆದಿದ್ದ ಸರಣಿ ಯತ್ನಗಳನ್ನು ಬೆಳಕಿಗೆ ತಂದಿದೆ.

ಪ್ರೇಮ ಕಹಾನಿ ಮತ್ತು ರಕ್ತಸಿಕ್ತ ಪಿತೂರಿ
ಈ ಇಡೀ ಅಪರಾಧದ ಹಿಂದಿನ ಮುಖ್ಯ ಕಾರಣ ಮನೆಯವರು ನಿಶ್ಚಯಿಸಿದ್ದ ಮದುವೆಗೆ ಇದ್ದ ತೀವ್ರ ಪ್ರತಿರೋಧ. ಪ್ರತಿಷ್ಠಿತ ಉದ್ಯಮಿ ಕುಟುಂಬದ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ವಿವಾಹ ಮುಂಬರುವ ನವೆಂಬರ್‌ನಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಭವ್ಯವಾದ ಹೆರಿಟೇಜ್ ಪ್ಯಾಲೇಸ್ ಅನ್ನು ಕೂಡ ಬುಕ್ ಮಾಡಲಾಗಿತ್ತು.
ಆದರೆ, ಸಿಯಾ ತನ್ನ ಕುಟುಂಬದ ಒಣಹಣ್ಣುಗಳ (Dry Fruits) ವ್ಯಾಪಾರದಲ್ಲಿದ್ದ ಚೇತನ್ ಚೌಧರಿ ಎಂಬ ಯುವಕನೊಂದಿಗೆ ದೀರ್ಘಕಾಲದ ರಹಸ್ಯ ಪ್ರೇಮ ಸಂಬಂಧ ಹೊಂದಿದ್ದಳು. ತನ್ನ ಪ್ರೇಮ ಜೀವನಕ್ಕೆ ಕೇತನ್ ದೊಡ್ಡ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಸಿಯಾ, ಕೌಟುಂಬಿಕ ಒತ್ತಡಕ್ಕೆ ಮಣಿದು ಮದುವೆಯಾಗುವ ನಾಟಕವಾಡುತ್ತಲೇ ಆತನನ್ನು ಮುಗಿಸಲು ಚೇತನ್ ಜೊತೆ ಸೇರಿ ಸ್ಕೆಚ್ ಹಾಕಿದ್ದಳು. ಈ ಹತ್ಯೆಯನ್ನು ಚಾರಣದ ವೇಳೆ ನಡೆದ ಅಪಘಾತ ಎಂದು ಬಿಂಬಿಸುವುದು ಇಬ್ಬರ ಯೋಜನೆಯಾಗಿತ್ತು.

ಪ್ರಮುಖ ಸುದ್ದಿ :-   ಹೆಂಡ..ವಿಷ..ಬೃಹನ್ನಾಟಕ : ಸದ್ದಿಲ್ಲದೆ 8 ಜನರ ಕೊಂದು ಶವಯಾತ್ರೆಗೆ ಹೋಗಿ ಕಣ್ಣೀರಿಡುತ್ತಿದ್ದ ; ಈತನ ರಕ್ತಚರಿತ್ರೆಗೆ ಪೊಲೀಸರೇ ದಂಗು...!

ಪಾಸ್‌ಪೋರ್ಟ್ ನಾಪತ್ತೆ ಮತ್ತು ವಿಫಲವಾದ ಮೊದಲ ಎರಡು ಯತ್ನಗಳು
ಜೂನ್ 18 ರ ಭೀಕರ ಘಟನೆ ಹಠಾತ್ ನಡೆದಿದ್ದಲ್ಲ, ಬದಲಿಗೆ ವಾರಗಳ ಕಾಲ ನಡೆಸಿದ ಯೋಜನೆಯ ಪರಾಕಾಷ್ಠೆಯಾಗಿತ್ತು. ಜೂನ್ ಆರಂಭದಲ್ಲಿ ಕೇತನ್‌ ಹಾಗೂ ಸಿಯಾ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ಹೊರಡಬೇಕಿತ್ತು. ಆದರೆ ಈ ಪ್ರವಾಸವನ್ನು ರದ್ದುಗೊಳಿಸಲು, ಸಿಯಾ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗಮಧ್ಯೆ ಹೋಟೆಲ್ ಒಂದರಲ್ಲಿ ಕೇತನ್‌ನ ಪಾಸ್‌ಪೋರ್ಟ್ ಅನ್ನು ಕದ್ದು ಯಾರಿಗೂ ತಿಳಿಯದಂತೆ ಬಿಸಾಡಿದ್ದಳು. ಇದರಿಂದಾಗಿ ಅವರು ಪುಣೆಗೆ ಹಿಂತಿರುಗಬೇಕಾಯಿತು.
ಅಂತಾರಾಷ್ಟ್ರೀಯ ಪ್ರವಾಸ ರದ್ದಾದ ಬೆನ್ನಲ್ಲೇ, ಸಿಯಾ ತನ್ನ ಪ್ಲಾನ್ ‘ಬಿ’ ಜಾರಿಗೊಳಿಸಿ ಕೇತನ್‌ನನ್ನು ಲೋಹಗಢ್ ಕೋಟೆ ಪ್ರವಾಸಕ್ಕೆ ಕರೆದೊಯ್ದು, ಅಲ್ಲಿನ ಕಡಿದಾದ ಕಂದಕಗಳತ್ತ ಕರೆದೊಯ್ದಿದ್ದಳು.
ಮೇ 31ರಂದು ಸಂಚಿನ ಮೊದಲ ಯತ್ನವಾಗಿ ಈ ಕೋಟೆಗೆ ಕರೆದೊಯ್ದಾಗ ಇವರ ಸಂಚಿನ ಯೋಜನೆ ಎಂದುಕೊಂಡಂತೆ ನಡೆಯಲಿಲ್ಲ. ಜೂನ್ 14ರಂದು ನಡೆದ ಎರಡನೇ ಯತ್ನದಲ್ಲಿ ಸಿಯಾ ಮತ್ತು ಚೇತನ್ ಸೇರಿ ಕೋಟೆಯ ಮೇಲಿದ್ದ ಕೇತನ್‌ ಅವರನ್ನು ಹೆದರಿಸಿ ಕೆಳಗೆ ಬೀಳಿಸಲು ಹಾವಿನ ದಾಳಿಯ ನಾಟಕವಾಡಿದ್ದರು. ಆದರೆ ಅದೂ ವಿಫಲವಾಗಿತ್ತು.
ಇದಾದ ಐದೇ ದಿನಗಳಲ್ಲಿ ಮೂರನೇ ಯತ್ನದಲ್ಲಿ ತನ್ನ ಮುಂಬರುವ ಜನ್ಮದಿನದ ಆಚರಣೆಯ ನೆಪವೊಡ್ಡಿ ಸಿಯಾ ಜೂನ್ 18ರಂದು ಮತ್ತೊಮ್ಮೆ ಕೇತನ್‌ ಅವರನ್ನು ಕೋಟೆಗೆ ಕರೆದೊಯ್ದು, ಅಂತಿಮವಾಗಿ ಕಂದಕಕ್ಕೆ ತಳ್ಳಿ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ತನ್ನ ಜೀವಕ್ಕೆ ಇಷ್ಟೊಂದು ಅಪಾಯಗಳಿದ್ದರೂ ಕೇತನ್ ಏಕೆ ಎಚ್ಚೆತ್ತುಕೊಳ್ಳಲಿಲ್ಲ ಎಂಬುದು ಈ ಪ್ರಕರಣದ ಅತ್ಯಂತ ದುರದೃಷ್ಟಕರ ಭಾಗ. ತಜ್ಞರ ಪ್ರಕಾರ, ಇಂತಹ ಪ್ರತಿಷ್ಠಿತ ಉದ್ಯಮಿಗಳ ಕುಟುಂಬಗಳಲ್ಲಿ ನಿಶ್ಚಯವಾಗುವ ಮದುವೆಗಳಲ್ಲಿ ಪರಸ್ಪರ ನಂಬಿಕೆ ಮತ್ತು ಸಕಾರಾತ್ಮಕತೆ ತೀರ ಹೆಚ್ಚಿರುತ್ತದೆ. ಕೇತನ್ ಈ ಸಂಬಂಧವನ್ನು ಪೂರ್ಣ ಹೃದಯದಿಂದ ಒಪ್ಪಿಕೊಂಡಿದ್ದರು. ಸಿಯಾಳ ಜ್ನಮದಿನಕ್ಕಾಗಿ ಕೇತನ್‌ ಮಹಾಬಲೇಶ್ವರದಲ್ಲಿ ಐಷಾರಾಮಿ ರೆಸಾರ್ಟ್ ರೂಮ್‌ಗಳನ್ನು ಕಾಯ್ದಿರಿಸಿದ್ದರು.
ಹಾವಿನ ದಾಳಿ ಅಥವಾ ಜೋರಾಗಿ ಬೀಸುವ ಗಾಳಿಯಂತಹ ನೈಸರ್ಗಿಕ ಕಾರಣಗಳನ್ನು ಸಿಯಾ ಮುಂದಿಟ್ಟಿದ್ದರಿಂದ, ಕೇತನ್ ಅದನ್ನು ಕೇವಲ ಚಾರಣದ ಸಾಮಾನ್ಯ ಅಪಾಯಗಳೆಂದು ಭಾವಿಸಿದ್ದರೇ ಹೊರತು, ತನ್ನ ಭಾವಿ ಪತ್ನಿಯೇ ತನ್ನ ಸಾವಿಗೆ ಸ್ಕೆಚ್ ಹಾಕುತ್ತಿದ್ದಾಳೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ.

ಪ್ರಮುಖ ಸುದ್ದಿ :-   ಟಿಎಂಸಿ ಆಂತರಿಕ ಕಲಹ ತಾರಕಕ್ಕೆ ; ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ; ನೂತನ ಅಧ್ಯಕ್ಷರ ನೇಮಕ...!

ಪಿತೂರಿ ಬಯಲು ಮಾಡಲು ನೆರವಾದ ತಾಂತ್ರಿಕ ಸಾಕ್ಷ್ಯ
ಕೇತನ್ ಒಬ್ಬ ಅನುಭವಿ ಚಾರಣಿಗನಾಗಿದ್ದು, ಅವರಿಗೆ ಲೋಹಗಢ್ ಕೋಟೆಯ ಭೌಗೋಳಿಕತೆಯ ಅರಿವಿತ್ತು. ಹೀಗಾಗಿ ಕಾಲು ಜಾರಿ ಬೀಳಲು ಸಾಧ್ಯವೇ ಇಲ್ಲ ಎಂದು ಅವರು ಕುಟುಂಬಸ್ಥರು ಘಟನೆ ಅಪಘಾತ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕುಟುಂಬದ ಸಂಶಯದ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪುಣೆ ಗ್ರಾಮಾಂತರ ಪೊಲೀಸರು ಆರೋಪಿಗಳ ಡಿಜಿಟಲ್ ಸಾಕ್ಷಿ, ಸಾಮಾಜಿಕ ಜಾಲತಾಣಗಳ ಟೈಮ್‌ಲೈನ್ ಮತ್ತು ಮೊಬೈಲ್ ಟವರ್ ಲೊಕೇಶನ್‌ಗಳನ್ನು ಜಾಲಾಡಿದಾಗ ಸತ್ಯ ಹೊರಬಿದ್ದಿದೆ. ಕೇತನ್ ಮತ್ತು ಸಿಯಾ ಕೋಟೆಗೆ ಹೋದಾಗಲೆಲ್ಲಾ ಚೇತನ್ ಚೌಧರಿ ಕೂಡ ಅವರನ್ನು ಹಿಂಬಾಲಿಸುತ್ತಿದ್ದದ್ದು ತಾಂತ್ರಿಕ ಸಾಕ್ಷ್ಯಗಳಿಂದ ಗೊತ್ತಾಯಿತು. ಈ ಬಲವಾದ ಸಾಕ್ಷ್ಯಗಳನ್ನು ಮುಂದಿಟ್ಟು ಪೊಲೀಸರು ವಿಚಾರಣೆ ನಡೆಸಿದಾಗ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯಡಿ (BNS) ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement