ಶಿರಸಿ : ಮನೆಯಲ್ಲಿ ಮಲಗಿದ್ದಾಗ ಇಬ್ಬರು ಮಕ್ಕಳಿಗೆ ಕಚ್ಚಿದ ಹಾವು ; ಓರ್ವ ಸಾವು

ಶಿರಸಿ :  ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆತನ ಸಹೋದರಿಗೂ ಹಾವು ಕಚ್ಚಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಈ ದುರ್ಘಟನೆ ಇಂದು, ಬುಧವಾರ ಮುಂಜಾನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ ಬಾಲಕನನ್ನು ಮಿಥುನ್ ಪುಟ್ಟಪ್ಪ ನಾಯ್ಕ (12) ಎಂದು ಗುರುತಿಸಲಾಗಿದೆ. ಈತ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ದುರ್ಘಟನೆಯಲ್ಲಿ ಆತನ ಸಹೋದರಿ ದೀಕ್ಷಾ ಸಹ ಹಾವಿನ ಕಡಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ನಿದ್ರೆಯಲ್ಲೇ ಕಚ್ಚಿದ ವಿಷಪೂರಿತ ಹಾವು
ವರದಿಗಳ ಪ್ರಕಾರ, ಇವರಿಬ್ಬರು ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮನೆಯಲ್ಲಿ ತಂದೆ ಜೊತೆ ಮಲಗಿದ್ದಾಗ ಅವರಿಗೆ ಹಾವು ಕಚ್ಚಿದೆ. ಬೆಳಗಿನ ಜಾವ ಇಬ್ಬರೂ ಏಕಾಏಕಿ ವಾಂತಿ ಮಾಡುತ್ತಿದ್ದುದ್ದನ್ನು ಗಮನಿಸಿದ ಪೋಷಕರು ತಕ್ಷಣ ದೀಪ ಹಾಕಿ ನೋಡಿದಾಗ ಮಕ್ಕಳು ಅಸ್ವಸ್ಥರಾಗಿರುವುದು ಕಂಡುಬಂದಿದೆ. ತಕ್ಷಣವೇ ಅಕ್ಕಪಕ್ಕದವರನ್ನು ಕರೆದಿದ್ದಾರೆ. ಈ ವೇಳೆ ಅವರಿಗೆ ಹಾವು ಹೊರಹೋಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಅವರು ಮಕ್ಕಳಿಗೆ ಹಾವು ಕಚ್ಚಿರುವ ಶಂಕೆ ಮೂಡಿದೆ.
ತಕ್ಷಣವೇ ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಿಥುನ್ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ದೀಕ್ಷಾ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಬನವಾಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮುಂಡಗೋಡ | ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement