ವಿಡಿಯೋ…| ಟೋಲ್ ಪ್ಲಾಜಾಕ್ಕೆ ಡಿಕ್ಕಿ ಹೊಡೆದು ಎಲ್‌ಪಿಜಿ ಟ್ಯಾಂಕರ್ ಸ್ಫೋಟ : ಐವರು ಸಾವು ; 2 ಕಿಮೀ ವರೆಗೆ ಗೋಚರಿಸಿದ ಬೆಂಕಿಯ ಜ್ವಾಲೆ

ನವದೆಹಲಿ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದಬ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಜೂನ್ 26ರಂದು ಬೆಳಿಗ್ಗೆ ಸುಮಾರು 6:40ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು,  ಘಟನೆಯ ಸಿಸಿಟಿವಿ ದೃಶ್ಯ ಈಗ ಹೊರಹೊಮ್ಮಿದೆ.
ಕಾನ್ಪುರದಿಂದ ವಾರಣಾಸಿಗೆ ಹೋಗುತ್ತಿದ್ದ ಎಲ್‌ಪಿಜಿ ಟ್ಯಾಂಕರ್ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡು ಅನಿಲ ಟ್ಯಾಂಕರ್‌ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಕಾರ, ಡಿಕ್ಕಿಯಿಂದಾಗಿ ಅನಿಲ ಸೋರಿಕೆಯಾಗಿ ಟ್ಯಾಂಕರ್ ಬೆಂಕಿ ಹೊತ್ತಿಕೊಳ್ಳುವ ಮೊದಲು ವೇಗವಾಗಿ ಹರಡಿತು, ಇದರಿಂದಾಗಿ ಪ್ರದೇಶಾದ್ಯಂತ ಬೆಂಕಿ ಹೊತ್ತಿಕೊಂಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಹೊರಬಂದಿದ್ದು,  ವಿಡಿಯೊದಲ್ಲಿ ಎರಡು ಟ್ಯಾಂಕರ್‌ಗಳು ಟೋಲ್ ಪ್ಲಾಜಾದತ್ತ ಬರುತ್ತಿರುವುದು ಕಂಡುಬರುತ್ತದೆ. ಈ ವೇಳೆ ಅವುಗಳಲ್ಲಿ ಒಂದು ಟ್ಯಾಂಕರ್ ಏಕಾಏಕಿ ನಿಯಂತ್ರಣ ಕಳೆದುಕೊಂಡು, ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದು ಟೋಲ್ ಪ್ಲಾಜಾಗೆ ಅಪ್ಪಳಿಸಿದೆ.
ಅಪಘಾತದ ಬಳಿಕ ಅದರಿಂದ ಎಲ್‌ಪಿಜಿ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ಬೆಂಕಿಯ ಜ್ವಾಲೆಗಳು ಸುಮಾರು ಎರಡು ಕಿಲೋಮೀಟರ್ ದೂರದಿಂದಲೂ ಗೋಚರಿಸುತ್ತಿದ್ದವು ಎಂದು ವರದಿಯಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳದ ಘಟಕಗಳು ಹಾಗೂ ನಾಗರಿಕ ಪೊಲೀಸ್ ಸಿಬ್ಬಂದಿಯನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದಲ್ಲಿ ಟ್ಯಾಂಕರ್ ಚಾಲಕ 40 ವರ್ಷದ ಧರ್ಮೇಂದ್ರ ದುಬೆ ಹಾಗೂ ಟೋಲ್ ಪ್ಲಾಜಾದ ಉದ್ಯೋಗಿ ಅಲೋಕ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೋಲ್ ಪ್ಲಾಜಾದ ಹಲವಾರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜದ ಅನಿಲಕುಮಾರ ಚಿಕಿತ್ಸೆ ಫಲಕಾರಿಯಾಗದೆ ಜುಲೈ 1ರಂದು ಮೃತಪಟ್ಟಿದ್ದಾರೆ. ಅವರ ಸಹೋದ್ಯೋಗಿಗಳಾದ ಉತ್ತರ ಪ್ರದೇಶದ ರಾಯಬರೇಲಿಯ ಹೀರಾಮಣಿ ಸಿಂಗ್ ಹಾಗೂ ಮಧ್ಯಪ್ರದೇಶದ ಕೃಷ್ಣಪಾಲ್ ಮೌರ್ಯ ಅವರು ಒಂದು ದಿನದ ಬಳಿಕ ಮೃತಪಟ್ಟಿದ್ದಾರೆ.
ಸ್ಫೋಟದ ಪರಿಣಾಮ ಟೋಲ್ ಪ್ಲಾಜಾ ಸಮೀಪ ನಿಲ್ಲಿಸಲಾಗಿದ್ದ 16 ಮೋಟಾರ್‌ಸೈಕಲ್‌ಗಳು ಹಾಗೂ ಎರಡು ಕಾರುಗಳಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಗಿವೆ. ಅಪಘಾತದಿಂದ ಸಂಚಾರ ದಟ್ಟಣೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ವಾಹನಗಳಿಗೆ ಟೋಲ್ ಶುಲ್ಕವಿಲ್ಲದೆ ಸಂಚರಿಸಲು ಅಧಿಕಾರಿಗಳು ಅವಕಾಶ ನೀಡಿದರು. ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚಲು ತಾಂತ್ರಿಕ ತಜ್ಞರ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement