ವಿಡಿಯೋ | ರ್ಯಾಲಿ ಬಳಿಕ ಗದ್ದಲದ ನಡುವೆ ಜನರನ್ನು ನಿಯಂತ್ರಿಸುವಾಗ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಬರೂಯಿಪುರದಲ್ಲಿ 11 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ನಡೆದ ಪ್ರತಿಭಟನಾ ರ್ಯಾಲಿ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. ರ್ಯಾಲಿಯ ವೇಳೆ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಮತ್ತು ಘರ್ಷಣೆ ನಡೆದಿದ್ದು, ಈ ವೇಳೆ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಒಬ್ಬ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇ ತಿಂಗಳ ಚುನಾವಣಾ ಸೋಲಿನ ಬಳಿಕ ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ರಾಜಕೀಯ ವೇದಿಕೆಗೆ ಮರಳಿದ ಈ ರ್ಯಾಲಿ, ದಕ್ಷಿಣ ಕೋಲ್ಕತ್ತಾದ ಹಜ್ರಾ ಕ್ರಾಸಿಂಗ್‌ನಲ್ಲಿ ಸಮಾವೇಶದೊಂದಿಗೆ ಅಂತ್ಯಗೊಂಡಿತು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಮತಾ, ಬಿಜೆಪಿ ಬೆಂಬಲಿಗರು ರ್ಯಾಲಿಗೆ ಪದೇ ಪದೇ ಅಡ್ಡಿಪಡಿಸಿದ್ದು, ಟಿಎಂಸಿ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ನ್ಯಾಯಾಲಯದ ನಿರ್ದೇಶನಗಳಿದ್ದರೂ ಶಾಂತಿಯುತವಾಗಿ ಕಾರ್ಯಕ್ರಮ ನಡೆಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.

ಬಿಜೆಪಿ ವಿರುದ್ಧ ಗಂಭೀರ ಆರೋಪ
ರ್ಯಾಲಿಯ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು “ಕಳ್ಳ” ಎಂಬ ಘೋಷಣೆಗಳನ್ನು ಕೂಗಿದ್ದು, ಹಜ್ರಾ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಮೆರವಣಿಗೆಯನ್ನು ತಡೆಯಲು ಯತ್ನಿಸಿದ್ದಾರೆ. ವಿವಿಧ ಸ್ಥಳಗಳಲ್ಲಿ ವೇದಿಕೆಗಳನ್ನು ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ರ್ಯಾಲಿಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆಡಳಿತದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಮತಾ ಬ್ಯಾನರ್ಜಿ, ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಪೊಲೀಸರು ಬೆಳಗ್ಗಿನಿಂದಲೇ ತಮ್ಮ ನಿವಾಸದ ಮೇಲೆ ನಿಗಾ ಇರಿಸಿದ್ದರು ಎಂದು ಆರೋಪಿಸಿದರು.
“ನನ್ನನ್ನು ಗೃಹ ಬಂಧನದಲ್ಲಿಟ್ಟಿರುವಂತೆ ಪೊಲೀಸರು ನಿರಂತರವಾಗಿ ಕಣ್ಗಾವಲಿನಲ್ಲಿ ಇಟ್ಟಿದ್ದರು. ನನ್ನ ಮನೆಗೆ ಯಾರು ಬರುತ್ತಿದ್ದಾರೆ ಎಂಬುದನ್ನೇ ಗಮನಿಸುತ್ತಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಇಂತಹ ಕೆಲಸದಲ್ಲಿ ತೊಡಗಿದ್ದರು,” ಎಂದು ಅವರು ಆರೋಪಿಸಿದರು.

ಪ್ರಮುಖ ಸುದ್ದಿ :-   ಬಿಷ್ಣೋಯ್ ಗ್ಯಾಂಗ್ ಸೇರಿ ಹಲವು ಗ್ಯಾಂಗ್‌ಗಳ ವಿರುದ್ಧ ವಿಶ್ವದಾದ್ಯಂತ ಭಾರಿ ಕಾರ್ಯಾಚರಣೆ: 24 ಜನರ ಬಂಧನ

‘ಹ್ಯಾಂಡ್ ಮೈಕ್‌ಗಳನ್ನು ವಶಪಡಿಸಿಕೊಂಡರು’
ರ್ಯಾಲಿಯಲ್ಲಿ ಹ್ಯಾಂಡ್ ಮೈಕ್ ಬಳಸಲು ಹೈಕೋರ್ಟ್ ಅನುಮತಿ ನೀಡಿದ್ದರೂ, ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು ಎಂದು ಮಮತಾ ಆರೋಪಿಸಿದರು. ಆದರೆ ಬಿಜೆಪಿ ಕಾರ್ಯಕರ್ತರಿಗೆ ಡಿಜೆ ಸಂಗೀತ ಬಳಸಲು, ವೇದಿಕೆಗಳನ್ನು ನಿರ್ಮಿಸಲು ಹಾಗೂ ರ್ಯಾಲಿಗೆ ಅಡ್ಡಿಪಡಿಸಲು ಅವಕಾಶ ನೀಡಲಾಗಿದೆ ಎಂದು ಅವರು ದೂರಿದರು.
ಮಹಿಳೆಯರು, ಹಿರಿಯ ನಾಗರಿಕರು ಮತ್ತು ಯುವ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಯಿತು. ನಮ್ಮ ಐಟಿ ಸೆಲ್ ಅಧ್ಯಕ್ಷೆಯನ್ನು ಸುತ್ತುವರಿದು ಹಲ್ಲೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ನಾನು ಸ್ವತಃ ಸ್ಥಳಕ್ಕೆ ಧಾವಿಸಿದೆ. ಅಲ್ಲಿ ಹಲವರು ರಕ್ತಸಿಕ್ತ ಸ್ಥಿತಿಯಲ್ಲಿ ಕಂಡುಬಂದರು,” ಎಂದು ಮಮತಾ ಹೇಳಿದರು.

ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಎಚ್ಚರಿಕೆ
ಹೈಕೋರ್ಟ್ ಆದೇಶವನ್ನು ಪಾಲಿಸದಿರುವುದು ನ್ಯಾಯಾಂಗ ನಿಂದನೆಗೆ ಸಮಾನ ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದರು. ಈ ಸಂಬಂಧ ಸಂಬಂಧಪಟ್ಟವರ ವಿರುದ್ಧ ತಮ್ಮ ಪಕ್ಷ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
“ನಾವು ಹೈಕೋರ್ಟ್ ನಿರ್ದೇಶನಗಳನ್ನು ಗೌರವಿಸಿ, ಅನುಮತಿ ಪಡೆದು ರ್ಯಾಲಿ ನಡೆಸಿದ್ದೇವೆ. ಆದರೆ ನ್ಯಾಯಾಲಯದ ಆದೇಶವನ್ನೇ ಪೊಲೀಸರು ಉಲ್ಲಂಘಿಸಿದರೆ, ಕಾನೂನಿನ ಆಳ್ವಿಕೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಬಂಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ,” ಎಂದು ಅವರು ಎಚ್ಚರಿಸಿದರು.
ಬರೂಯಿಪುರ ಅಪ್ರಾಪ್ತೆಯ ಅತ್ಯಾಚಾರ–ಕೊಲೆ ಪ್ರಕರಣದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ರ್ಯಾಲಿ
ಜುಲೈ 4ರಂದು ನಾಪತ್ತೆಯಾಗಿದ್ದ 11 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿ ಈ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಬಾಲಕಿಯ ಮೃತದೇಹ ಜುಲೈ 5ರಂದು ಸೂರ್ಯಾಪುರ ಹಾತ್‌ ಪ್ರದೇಶದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು.
ಸ್ಥಳೀಯರ ಆರೋಪದಂತೆ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ಚೀಲದಲ್ಲಿ ತುಂಬಿ ಕೆರೆಯಲ್ಲಿ ಎಸೆಯಲಾಗಿತ್ತು.

ಪ್ರಮುಖ ಸುದ್ದಿ :-   ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ : ಕಾರ್ಪೊರೇಟರ್ ಬಂಧನ

ಪ್ರಮುಖ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು
ಈ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ ಮಂಡಲ್ ಬುಧವಾರ ಮುಂಜಾನೆ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಅಪರಾಧ ನಡೆದ ಸ್ಥಳದ ಮರುಪರಿಶೀಲನೆ (Crime Scene Reconstruction) ವೇಳೆ ಪೊಲೀಸ್ ಸಿಬ್ಬಂದಿಯಿಂದ ಬಂದೂಕು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಬ್ಬ ಪರಾರಿಯಾಗಿದ್ದ ಆರೋಪಿ ಕಬೀರ್ ಮೊಲ್ಲಾನನ್ನು ಕೂಡ ಬುಧವಾರ ಬಂಧಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಮೊದಲು ಪ್ರಭಾಸ ಮಂಡಲ್, ಆನಂದ ಸರ್ದಾರ್ ಮತ್ತು ದಿಬಾಕರ ಸರ್ದಾರ ವಿರುದ್ಧ ಪ್ರಕರಣ ದಾಖಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement