ತೆಹ್ರಾನ್ : ಅಮೆರಿಕಾ–ಇಸ್ರೇಲ್ ಜಂಟಿಯಾಗಿ 2025ರ ಫೆಬ್ರವರಿ 28ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೆನಿಯ ನಿವಾಸಕ್ಕೆ ಉಂಟಾದ ಭಾರೀ ಹಾನಿಯ ದೃಶ್ಯಗಳನ್ನು ಇರಾನ್ನ ಸರ್ಕಾರಿ ಮಾಧ್ಯಮವು ಮೊದಲ ಬಾರಿಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ.
35 ಸೆಕೆಂಡುಗಳ ಈ ವಿಡಿಯೊವನ್ನು ಇರಾನ್ನ ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ್ದು, ಖಮೆನಿಯ ಅಧಿಕೃತ ವೆಬ್ಸೈಟ್ನಲ್ಲೂ ಪ್ರಕಟಿಸಲಾಗಿದೆ. ವಿಡಿಯೊದಲ್ಲಿ ತೆಹ್ರಾನ್ನಲ್ಲಿರುವ ಸರ್ವೋಚ್ಚ ನಾಯಕರ ನಿವಾಸದ ಪ್ರಮುಖ ಸಭಾಂಗಣವಾದ ಇಮಾಮ್ ಖೋಮೇನಿ ಹುಸೈನಿಯಾ ಸಂಪೂರ್ಣವಾಗಿ ಅವಶೇಷವಾಗಿರುವುದು ಹಾಗೂ ಕಟ್ಟಡಕ್ಕೆ ವ್ಯಾಪಕ ಪ್ರಮಾಣದ ಹಾನಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಸಭಾಂಗಣವು ಖಮೆನಿ ತಮ್ಮ ಆಡಳಿತಾವಧಿಯುದ್ದಕ್ಕೂ ಸಾರ್ವಜನಿಕ ಭಾಷಣಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರಮುಖ ಸಭೆಗಳನ್ನು ನಡೆಸುತ್ತಿದ್ದ ಮುಖ್ಯ ಕೇಂದ್ರವಾಗಿತ್ತು.
ಹೊಸದಾಗಿ ಬಿಡುಗಡೆಯಾದ ಈ ದೃಶ್ಯಾವಳಿಗಳು, ಅಮೆರಿಕಾ–ಇಸ್ರೇಲ್ ಯುದ್ಧದ ಮೊದಲ ದಿನವೇ ನಡೆದ ದಾಳಿಯಲ್ಲಿ 86 ವರ್ಷದ ಅಲಿ ಖಮೆನಿ ಮೃತಪಟ್ಟ ಬಳಿಕ, ಆ ದಾಳಿಯಿಂದ ಉಂಟಾದ ಹಾನಿಯ ಪ್ರಮಾಣವನ್ನು ಮೊದಲ ಬಾರಿಗೆ ಜಗತ್ತಿಗೆ ತೋರಿಸಿವೆ.
ಅದೇ ದಾಳಿಯಲ್ಲಿ ಖಮೆನಿಯ ಕುಟುಂಬದ ಹಲವು ಸದಸ್ಯರು ಸಾವಿಗೀಡಾಗಿದ್ದರು. ಅವರ 14 ತಿಂಗಳ ಮೊಮ್ಮಗಳು ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ಖಮೆನಿಯ ಪುತ್ರ ಹಾಗೂ ಹಾಲಿ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೆನಿ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಖಮೆನಿಯ ಅಂತ್ಯಕ್ರಿಯೆ
ಅಯತೊಲ್ಲಾ ಅಲಿ ಖಮೆನಿಯ ಪಾರ್ಥಿವ ಶರೀರವನ್ನು ಜುಲೈ 9ರಂದು ಅವರು ಜನಿಸಿದ ಊರಾದ ಮಶ್ಹದ್ನಲ್ಲಿರುವ ಇಮಾಮ್ ರೆಜಾ ದರ್ಗಾ ಸಮೀಪ ಅಂತ್ಯಸಂಸ್ಕಾರ ಮಾಡಲಾಯಿತು. ಜುಲೈ 4ರಂದು ತೆಹ್ರಾನ್ನಲ್ಲಿ ಆರಂಭವಾದ ಆರು ದಿನಗಳ ಸರ್ಕಾರಿ ಶ್ರದ್ಧಾಂಜಲಿ ಮತ್ತು ಅಂತ್ಯಕ್ರಿಯೆಯ ಕಾರ್ಯಕ್ರಮಗಳು ಇದರೊಂದಿಗೆ ಪೂರ್ಣಗೊಂಡಿತು.
ಅಂತ್ಯಸಂಸ್ಕಾರಕ್ಕೂ ಮುನ್ನ ಖಮೆನಿಯ ಪಾರ್ಥಿವ ಶರೀರವನ್ನು ಇರಾನಿನ ಶಿಯಾ ಮುಸ್ಲಿಮರ ಪವಿತ್ರ ನಗರಗಳಾದ ನಜಫ್ ಮತ್ತು ಕರ್ಬಲಾ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಇರಾನ್ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಖಮೆನಿಯ ಪಾರ್ಥಿವ ಶರೀರವನ್ನು ಶಿಯಾ ಇಸ್ಲಾಂನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ನಜಫ್ನ ಇಮಾಮ್ ಅಲಿ ದರ್ಗಾಕ್ಕೆ ಕೊಂಡೊಯ್ಯಲಾಗಿದ್ದು, ಸಾವಿರಾರು ಭಕ್ತರು ಮತ್ತು ಶೋಕಸಂತಪ್ತರು ಅಂತಿಮ ನಮನ ಸಲ್ಲಿಸಿದರು.
ಇರಾನ್ ರಾಷ್ಟ್ರಧ್ವಜದಿಂದ ಹೊದಿಸಲಾಗಿದ್ದ ಖಮೆನಿಯ ಶವಪೆಟ್ಟಿಗೆಯನ್ನು ಸಾವಿರಾರು ಜನರು ನಜಫ್ ನಗರದ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಹೊತ್ತು ಸಾಗಿಸಿದರು.
ತೆಹ್ರಾನ್, ಕೋಮ್, ನಜಫ್ ಹಾಗೂ ಕರ್ಬಲಾ ಮೂಲಕ ಸಾಗಿದ ಆರು ದಿನಗಳ ಅಂತ್ಯಕ್ರಿಯೆಯ ಯಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದು, ವಿವಿಧ ದೇಶಗಳ ಗಣ್ಯರು, ವಿದೇಶಿ ಪ್ರತಿನಿಧಿಗಳು ಹಾಗೂ ಪ್ರಾದೇಶಿಕ ರಾಜಕೀಯ ನಾಯಕರು ಕೂಡ ಪಾಲ್ಗೊಂಡಿದ್ದರು ಎಂದು ಇರಾನ್ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
ಗಮನಾರ್ಹ ಸಂಗತಿಯೆಂದರೆ, ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮೆನಿ ಇದುವರೆಗೆ ಯಾವುದೇ ಅಂತ್ಯಕ್ರಿಯೆಯ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ತಂದೆಯ ಸಾವಿಗೆ ಕಾರಣವಾದ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರು ಸುರಕ್ಷತಾ ಕಾರಣಗಳಿಂದ ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ