ಸಿಗರೇಟ್ ತುಂಡು ಹೆಕ್ಕಿ ತಂದು ಯಂತ್ರಕ್ಕೆ ಹಾಕಿದ್ರೆ ಸಿಗಲಿದೆ ಆಹಾರ ; ಸ್ವೀಡನ್‌ನಲ್ಲಿ ಕಾಗೆಗಳಿಗೆ ನಗರ ಸ್ವಚ್ಛತೆಗೆ ವಿಶಿಷ್ಟ ತರಬೇತಿ

ಸ್ಟಾಕ್‌ಹೋಮ್ : ಸ್ವೀಡನ್‌ನ ಕೊರ್ವಿಡ್‌ ಕ್ಲೀನಿಂಗ್‌ (Corvid Cleaning) ಎಂಬ ಸ್ಟಾರ್ಟ್‌ಅಪ್ ನಗರ ಪ್ರದೇಶಗಳ ಸ್ವಚ್ಛತೆಯನ್ನು ಹೆಚ್ಚಿಸಲು ಕಾಗೆಗಳ ಬುದ್ಧಿಮತ್ತೆಯನ್ನು ಬಳಸುವ ವಿನೂತನ ಪರೀಕ್ಷಾರ್ಥ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಕಾಗೆಗಳಿಗೆ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಸಿಗರೇಟ್ ತುಂಡುಗಳನ್ನು (Cigarette Butts) ಸಂಗ್ರಹಿಸಿ ವಿಶೇಷ ಯಂತ್ರದಲ್ಲಿ ಹಾಕಿದರೆ ಆಹಾರದ ರೂಪದಲ್ಲಿ ಸಣ್ಣ ಬಹುಮಾನ ದೊರೆಯುವಂತೆ ತರಬೇತಿ ನೀಡಲಾಗುತ್ತಿದೆ.
ಈ ವ್ಯವಸ್ಥೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸ್ವಯಂ ಚಾಲಿತ ಯಂತ್ರವನ್ನು ಬಳಸಲಾಗುತ್ತದೆ. ಕಾಗೆ ಕಸವನ್ನು ಯಂತ್ರದಲ್ಲಿ ಹಾಕಿದ ಕ್ಷಣವನ್ನು ಅದು ಗುರುತಿಸಿ, ಪ್ರತಿಫಲವಾಗಿ ಆ ಕಾಗೆಗೆ ಆಹಾರದ ಕಾಳುಗಳನ್ನು ಹೊರಕ್ಕೆ ಬಿಡುಗಡೆ ಮಾಡುತ್ತದೆ. ಅದನ್ನು ಕಾಗೆ ತಿನ್ನುತ್ತದೆ. ಕಾಗೆ ಕಾಳಿನ ಆಸೆಗೆ ಪುನಃ ಸಿಗರೇಟ್‌ ತುಂಡುಗಳನ್ನು ಹಾಗೂ ಇತರ ಕಸಗಳನ್ನು ಹುಡುಕಿ ತಂದು ಈ ಯಂತ್ರಕ್ಕೆ ಹಾಕುತ್ತದೆ. ಆಗ ಪುನಃ ಕಾಳುಗಳು ಬಿಡುಗಡೆಯಾಗುತ್ತವೆ. ಈ ರೀತಿಯ “ಬಹುಮಾನ ಆಧಾರಿತ ಕಲಿಕೆ” (Reward Loop/Positive Reinforcement) ಮೂಲಕ ಕಾಗೆಗಳು ಕ್ರಮೇಣ ಇದೇ ವರ್ತನೆಯನ್ನು ಪುನರಾವರ್ತಿಸುವಂತೆ ತರಬೇತಿ ಪಡೆಯುತ್ತವೆ.

ಕಾಗೆಗಳು ವಿಶ್ವದ ಅತ್ಯಂತ ಬುದ್ಧಿವಂತ ಪಕ್ಷಿಗಳಲ್ಲಿ ಒಂದಾಗಿದ್ದು, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಅನುಭವದಿಂದ ಕಲಿಯುವ ಗುಣ ಹಾಗೂ ಸಾಧನಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿವೆ.ಕೆಲವು ಅಧ್ಯಯನಗಳಲ್ಲಿ ಕಾಗೆಗಳು ಆಹಾರ ಪಡೆಯಲು ಸಾಧನಗಳನ್ನು ಬಳಸಿರುವುದು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಿರುವುದೂ ದಾಖಲಾಗಿದೆ. ಇದೇ ಸಹಜ ಬುದ್ಧಿಮತ್ತೆಯನ್ನು ನಗರ ಸ್ವಚ್ಛತೆಗೆ ಬಳಸುವ ಪ್ರಯತ್ನವೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಯ ಆರಂಭಿಕ ಅವಲೋಕನಗಳ ಪ್ರಕಾರ, ಕಾಗೆಗಳು ಉದ್ಯಾನಗಳು, ಕಾಲುದಾರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಸಿಗರೇಟ್ ತುಂಡು ಸೇರಿದಂತೆ ಸಣ್ಣ ಕಸವನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ.

ಇದು  ಸಾಂಪ್ರದಾಯಿಕ ಸ್ವಚ್ಛತಾ ಸಿಬ್ಬಂದಿಯ ಮೇಲಿನ ಸಂಪೂರ್ಣ ಅವಲಂಬನೆಯನ್ನು ಕಡಿಮೆ ಮಾಡಿ, ವನ್ಯಜೀವಿಗಳ ಸಹಜ ವರ್ತನೆಯನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಹೊಸ ಪ್ರಯತ್ನವಾಗಿ ಇದನ್ನು ಪರಿಗಣಿಸಲಾಗುತ್ತಿದೆ.
ತಜ್ಞರ ಅಭಿಪ್ರಾಯದಂತೆ, ಈ ವಿಧಾನ ಯಶಸ್ವಿಯಾದರೆ ನಗರಪಾಲಿಕೆಗಳ ಸ್ವಚ್ಛತಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ. ಜೊತೆಗೆ, ಸಿಗರೇಟ್ ತುಂಡುಗಳಲ್ಲಿ ಇರುವ ವಿಷಕಾರಿ ರಾಸಾಯನಿಕಗಳು ಮಣ್ಣು ಮತ್ತು ಜಲಮೂಲಗಳಿಗೆ ಸೇರಿ ಪರಿಸರ ಕಲುಷಿತವಾಗುವ ಸಮಸ್ಯೆಯನ್ನು ತಗ್ಗಿಸಲು ಸಹ ಇದು ನೆರವಾಗಬಹುದುಎಂದು ನಿರೀಕ್ಷಿಸಲಾಗಿದೆ.ಸದ್ಯ ಇದು ಪರೀಕ್ಷಾ ಹಂತದಲ್ಲಿದೆ. ಇದು ಯಶಸ್ವಿಯಾದರೆ ವನ್ಯಜೀವಿಗಳ ಸಹಜ ಸಾಮರ್ಥ್ಯ ಮತ್ತು ಆಧುನಿಕ ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಹೆಚ್ಚು ಸುಸ್ಥಿರ (Sustainable) ಹಾಗೂ ಪರಿಸರ ಸ್ನೇಹಿ ನಗರಗಳನ್ನು ನಿರ್ಮಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಬಹುದಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement