ಚಂಡೀಗಢ: ನಗರದ ಸೆಕ್ಟರ್–26 ಪ್ರದೇಶದಲ್ಲಿ ಮೆರ್ಸಿಡಿಸ್ ಕಾರೊಂದು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಈ ಹಿಟ್-ಅಂಡ್-ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ಇದೀಗ ಹೊರಬಿದ್ದಿದ್ದು, ಕಾರು ವ್ಯಕ್ತಿಯ ಮೇಲೆ ಚಲಿಸಿದರೂ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಏನೂ ಆಗದವನಂತೆ ಎದ್ದು ನಡೆಯುತ್ತಿರುವ ದೃಶ್ಯವೂ ಕಂಡುಬಂದಿದೆ.
ಹೊರಬಿದ್ದ ಮೊಬೈಲ್ ದೃಶ್ಯಗಳಲ್ಲಿ ಧೂಳು ತುಂಬಿದ, ಗುಂಡಿಗಳಿರುವ ರಸ್ತೆಯಲ್ಲಿ ಮೆರ್ಸಿಡಿಸ್ ಕಾರು ವೇಗವಾಗಿ ಚಲಿಸುತ್ತಿರುವುದು ಕಾಣಿಸುತ್ತದೆ. ಗೊಂದಲದ ವಾತಾವರಣದ ನಡುವೆ ವೇಗವಾಗಿ ಮುನ್ನುಗ್ಗಿದ ಕಾರನ್ನು ಜನಸಮೂಹ ತಡೆಯಲು ಮುಂದಾಗುತ್ತದೆ. ಈ ವೇಳೆ ಕಾರು ಹಿಮ್ಮುಖವಾಗಿ ಚಲಿಸಿ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆಯುತ್ತದೆ. ಕಾರು ಅವರ ಮೇಲೆಯೇ ಸಂಪೂರ್ಣವಾಗಿ ಹರಿದರೂ, ಕೆಲವೇ ಕ್ಷಣಗಳಲ್ಲಿ ಅವರು ಎದ್ದು ನಡೆಯುತ್ತಿರುವ ದೃಶ್ಯವೂ ವಿಡಿಯೊದಲ್ಲಿ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸೆಕ್ಟರ್–26ರ ಬಾಬುಧಾಮ್ ಕಾಲೊನಿಯ ನಿವಾಸಿ ಅಮನ್ಜತ್ ಹಾಗೂ ಸೆಕ್ಟರ್–44ರ ನಿವಾಸಿ ಅಲನ್ಸ್ ಪ್ರೀತ್ ಅವರು ಶನಿವಾರ ಸಂಜೆ ಸೆಕ್ಟರ್–26ರಲ್ಲಿರುವ ಕ್ಲಬ್‌ಗೆ ತೆರಳಿದ್ದರು. ಕ್ಲಬ್‌ನಿಂದ ಹೊರಬರುತ್ತಿದ್ದ ವೇಳೆ ಅತಿವೇಗದಲ್ಲಿ ಬಂದ ಮೆರ್ಸಿಡಿಸ್ ಕಾರು ಇವರಿಬ್ಬರಿಗೆ ಡಿಕ್ಕಿ ಹೊಡೆದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಸೆಕ್ಟರ್–26 ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ಇಬ್ಬರನ್ನೂ ಚಂಡೀಗಢದ ಸರ್ಕಾರಿ ಆಸ್ಪತ್ರೆಯಾದ ಜಿಎಂಸಿಎಚ್–32 (GMCH-32) ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತ ನಡೆದ ಸ್ಥಳದ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದು, ತಾಂತ್ರಿಕ ಸಾಕ್ಷ್ಯಗಳ ನೆರವಿನಿಂದ ಕಾರಿನ ನೋಂದಣಿ ಸಂಖ್ಯೆ ಹಾಗೂ ಚಾಲಕನನ್ನು ಪತ್ತೆಹಚ್ಚುವ ಕಾರ್ಯವನ್ನು ಆರಂಭಿಸಿದ್ದಾರೆ.
ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯನ್ನು ಶೀಘ್ರದಲ್ಲೇ ಗುರುತಿಸಿ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ