ವಿಡಿಯೊ : ಕೊಂಬಿನಿಂದ ಪ್ರವಾಸಿಗನನ್ನು 8 ಅಡಿ ಎತ್ತರಕ್ಕೆ ಎಸೆದ ಬೃಹತ್‌ ಬೈಸನ್‌ ; ಗಂಭೀರ ಗಾಯ

ವಾಷಿಂಗ್ಟನ್ : ಅಮೆರಿಕದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಘಟನೆಯಲ್ಲಿ, ಕಾಡುಕೋಣ (ಬೈಸನ್) ದಾಳಿಗೆ ಒಳಗಾದ ಪ್ರವಾಸಿಗರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಫಿಶಿಂಗ್ ಬ್ರಿಡ್ಜ್‌ನ ದಕ್ಷಿಣ ಭಾಗದಲ್ಲಿರುವ ಬ್ರಿಡ್ಜ್ ಬೇ ಕ್ಯಾಂಪ್‌ಗ್ರೌಂಡ್ ಪ್ರದೇಶದಲ್ಲಿ ನಡೆದಿದೆ. ಘಟನೆಗೂ ಮುನ್ನವೇ ಅದೇ ಬೈಸನ್ ಜನರು ಹಾಗೂ ವಾಹನಗಳ ಮೇಲೆ ಆಕ್ರಮಣಕಾರಿ ವರ್ತನೆ ತೋರಿಸುತ್ತಿದ್ದು, ಹಲವು ಬಾರಿ ದಾಳಿ ನಡೆಸಲು ಮುಂದಾಗಿತ್ತು ಎಂದು ತಿಳಿದುಬಂದಿದೆ.
ಗಾಯಗೊಂಡ ವ್ಯಕ್ತಿ ತಮ್ಮ ಚಿಕ್ಕ ಮೊಮ್ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ಘಟನೆಯನ್ನು ಕಣ್ಣಾರೆ ಕಂಡಿರುವ ಮೊಂಟಾನಾ ರಾಜ್ಯದ ಬೋಜ್‌ಮನ್‌ನ ವೃತ್ತಿಪರ ಛಾಯಾಗ್ರಾಹಕ ಮೈಕ್ ಮ್ಯಾಕ್‌ಲಿಯೊಡ್ ಅವರ ಪ್ರಕಾರ, ತಾತ ಮತ್ತು ಮೊಮ್ಮಗ ಬೈಸನ್‌ನಿಂದ ಸುಮಾರು 100 ಗಜಗಳಷ್ಟು ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದರು.
ಮ್ಯಾಕ್‌ಲಿಯೊಡ್ ಹೇಳುವಂತೆ, ಅದಕ್ಕೂ ಮೊದಲು ಬೈಸನ್ ಫೋಟೋ ತೆಗೆಯುತ್ತಿದ್ದ ಮಕ್ಕಳ ಗುಂಪಿನತ್ತ ದೌಡಾಯಿಸಿತ್ತು. ಮಕ್ಕಳು ಸಮಯಕ್ಕೆ ಸರಿಯಾಗಿ ಅದರ ದಾರಿಯಿಂದ ಸರಿದುಕೊಂಡ ಪರಿಣಾಮ ಅಪಾಯದಿಂದ ಪಾರಾಗಿದ್ದರು. ಇದೇ ವೇಳೆ ಕ್ಯಾಂಪ್‌ನಲ್ಲಿ ಇದ್ದವರು ಇತರರಿಗೆ ಎಚ್ಚರಿಕೆ ನೀಡುತ್ತಾ, ಬೈಸನ್ ಓಡಾಡುತ್ತಿದ್ದ ಪ್ರದೇಶದಿಂದ ದೂರ ಸರಿಯುವಂತೆ ಸೂಚಿಸುತ್ತಿದ್ದರು.
ಸ್ವಲ್ಪ ಸಮಯದ ಬಳಿಕ ಬೈಸನ್ ಮಣ್ಣಿನ ಜಾಗವೊಂದರಲ್ಲಿ ಹೊರಳಾಡಲು ಆರಂಭಿಸಿತು. ಇದು ಬೈಸನ್‌ಗಳ ಸಾಮಾನ್ಯ ವರ್ತನೆಯಾಗಿದ್ದು, ಅದನ್ನು ಕಂಡ ತಾತ ಮತ್ತು ಮೊಮ್ಮಗ ಅಪಾಯ ದೂರವಾಗಿದೆ ಎಂದು ಭಾವಿಸಿ ಕೆಲವು ಫೋಟೋಗಳನ್ನು ತೆಗೆದರು. ನಂತರ ಬೈಸನ್ ಮತ್ತೆ ಎದ್ದಾಗ ಸಮೀಪದಲ್ಲಿದ್ದ ಮರಗಳ ಹಿಂದೆ ಅಡಗಿಕೊಂಡರು. ಅದೇ ವೇಳೆ ಅಲ್ಲಿಂದ ಬಿಳಿ ಬಣ್ಣದ ಪಿಕಪ್ ಟ್ರಕ್‌ವೊಂದು ಸಾಗಿತು. ಇದರಿಂದ ಮತ್ತೆ ಉದ್ರಿಕ್ತಗೊಂಡ ಬೈಸನ್ ವಾಹನವನ್ನು ಬೆನ್ನಟ್ಟುವ ಬದಲು ಮರಗಳ ಹಿಂದೆ ಅಡಗಿದ್ದ ತಾತ ಮತ್ತು ಮೊಮ್ಮಗನತ್ತ ತಿರುಗಿತು.
ಮೊಮ್ಮಗ ಸಮಯಕ್ಕೆ ಸರಿಯಾಗಿ ಅಲ್ಲಿಂದ ತಪ್ಪಿಸಿಕೊಂಡರೂ, ವಯೋವೃದ್ಧ ವ್ಯಕ್ತಿಯನ್ನು ಬೈಸನ್ ಮರಗಳ ಸುತ್ತಲೂ ಬೆನ್ನಟ್ಟಿತು. ಕೊನೆಗೆ ತನ್ನ ಒಂದು ಕೊಂಬಿನಿಂದ ಅವರನ್ನು ಎತ್ತಿ ಸುಮಾರು ಎಂಟು ಅಡಿ ಎತ್ತರಕ್ಕೆ ಎಸೆದಿದ್ದು, ಅವರು ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಗಾಯಗೊಂಡ ವ್ಯಕ್ತಿ ನೆಲಕ್ಕೆ ಬಿದ್ದ ನಂತರವೂ ಬೈಸನ್ ಅವರ ಬಳಿಯೇ ನಿಂತು ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿತ್ತು. ಮತ್ತೊಮ್ಮೆ ದಾಳಿ ನಡೆಸುವ ಭೀತಿಯಿಂದ ಮೈಕ್ ಮ್ಯಾಕ್‌ಲಿಯೊಡ್ ಹಾಗೂ ಸ್ಥಳದಲ್ಲಿದ್ದ ಇತರರು ಜೋರಾಗಿ ಕೂಗುತ್ತಾ ಬೈಸನ್‌ನತ್ತ ಓಡಿದರು. ಅವರ ಈ ಪ್ರಯತ್ನದಿಂದ ಬೈಸನ್ ಅಲ್ಲಿಂದ ದೂರ ಸರಿದಿದ್ದು, ಬಳಿಕ ಇತರರು ಗಾಯಾಳುವಿನ ನೆರವಿಗೆ ಧಾವಿಸಲು ಸಾಧ್ಯವಾಯಿತು.
ಸ್ವಲ್ಪ ಸಮಯದಲ್ಲೇ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನದ ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದರು. ಗಾಯಾಳುವಿನ ಮೊಮ್ಮಗ ನೀಡಿದ ಮಾಹಿತಿಯಂತೆ, ಅವರ ತಾತ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದೆ.
ಇದೇ ವೇಳೆ, ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನ ಸೇವೆ (National Park Service) ಪ್ರವಾಸಿಗರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಬೈಸನ್‌ಗಳು ಕಾಡು ಹಾಗೂ ಅತ್ಯಂತ ಅನಿರೀಕ್ಷಿತ ಸ್ವಭಾವದ ಪ್ರಾಣಿಗಳಾಗಿವೆ ಎಂದು ತಿಳಿಸಿದೆ. ಸುಮಾರು 2,000 ಪೌಂಡ್ (907 ಕೆಜಿ) ತೂಕವಿರುವ ಬೈಸನ್‌ಗಳು ಮನುಷ್ಯರಿಗಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉದ್ಯಾನ ಆಡಳಿತದ ಮಾರ್ಗಸೂಚಿಗಳ ಪ್ರಕಾರ, ಬೈಸನ್ ಸೇರಿದಂತೆ ಇತರ ದೊಡ್ಡ ಕಾಡುಪ್ರಾಣಿಗಳಿಂದ ಕನಿಷ್ಠ 25 ಗಜ (23 ಮೀಟರ್) ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಈ ನಿಯಮ ಪಾಲಿಸದಿದ್ದರೆ ಗಂಭೀರ ಗಾಯಗಳು ಅಥವಾ ಸಾವಿಗೂ ಕಾರಣವಾಗುವ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement