ಮೈ ಜುಂ ಎನ್ನುವ ವಿಡಿಯೊ : ತನ್ನ ಮೇಲೆ ದಾಳಿ ಮಾಡಿದ ಕಾಳಿಂಗ ಸರ್ಪವನ್ನೇ ಹೆದರಿಸಿದ ಬೆಕ್ಕು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಪರೂಪದ ಹಾಗೂ ಅಸಾಮಾನ್ಯ ವಿಡಿಯೊವೊಂದು ಲಕ್ಷಾಂತರ ಮಂದಿಯ ಗಮನ ಸೆಳೆದಿದೆ. ವಿಷಕಾರಿ ಕಾಳಿಂಗ ಸರ್ಪ ಮತ್ತು ಬೆಕ್ಕಿನ ನಡುವಿನ ಉಸಿರು ಬಿಗಿಹಿಡಿಯುವ ಕಾದಾಟ ಅಥವಾ ಮುಖಾಮುಖಿ ನೋಡುಗರಲ್ಲಿ ಅಚ್ಚರಿ, ಕುತೂಹಲ ಹಾಗೂ ಆತಂಕವನ್ನು ಮೂಡಿಸಿದೆ. ವಿಡಿಯೊದಲ್ಲಿ ಕಾಳಿಂಗ ಸರ್ಪವು ಪದೇಪದೇ ಬೆಕ್ಕಿನ ಮೇಲೆ ದಾಳಿಗೆ ಮುಂದಾದರೂ, ಬೆಕ್ಕು ತನ್ನ ಅದ್ಭುತ ಚುರುಕುತನ, ಕ್ಷಿಪ್ರ ಪ್ರತಿಕ್ರಿಯೆ ಮತ್ತು ಸಮಯಪ್ರಜ್ಞೆಯಿಂದ ಪ್ರತಿಯೊಂದು ದಾಳಿಯನ್ನೂ ಯಶಸ್ವಿಯಾಗಿ ತಪ್ಪಿಸಿಕೊಳ್ಳುವ ದೃಶ್ಯಗಳು ಸೆರೆಯಾಗಿವೆ.
ಈ ಘಟನೆಯು ಚೀನಾದ ಝೆಜಿಯಾಂಗ್ ಪ್ರಾಂತ್ಯದ ಝೌಶಾನ್‌ನಲ್ಲಿರುವ ಒಂದು ಉದ್ಯಾನವನದಲ್ಲಿ ನಡೆದಿದ್ದು ಎಂದು ಹೇಳಲಾಗಿದ್ದು, ಅಲ್ಲಿದ್ದವರು ಈ ಮೈ ಜುಂ ಎನ್ನುವ ವಿಡಿಯೊವನ್ನು ಸೆರೆ ಹಿಡಿದಿದ್ದಾರೆ.

ವಿಡಿಯೊದ ಆರಂಭದಲ್ಲೇ ಬೆಕ್ಕು ಕಾಳಿಂಗ ಸರ್ಪದ ಅತ್ಯಂತ ಸಮೀಪದಲ್ಲಿ ಕುಳಿತಿರುವುದು ಕಾಣಿಸುತ್ತದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಬಹುತೇಕ ಪ್ರಾಣಿಗಳು ಅಲ್ಲಿಂದ ಓಡಿ ಹೋಗಲು ಯತ್ನಿಸುತ್ತವೆ. ಆದರೆ ಈ ಬೆಕ್ಕು ಮಾತ್ರ ಯಾವುದೇ ಆತಂಕ ಹಾಗೂ ಗೊಂದಲ ತೋರಿಸದೆ, ಸರ್ಪದ ಪ್ರತಿಯೊಂದು ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಎಚ್ಚರಿಕೆಯಿಂದ ಅಲ್ಲೇ ಕುಳಿತಿರುವುದು ಕಂಡುಬರುತ್ತದೆ.
ಕಾಳಿಂಗ ಸರ್ಪವು ಹಲವು ಬಾರಿ ಮಿಂಚಿನ ವೇಗದಲ್ಲಿ ಕಚ್ಚಲು ಮುಂದಾದಾಗ, ಬೆಕ್ಕು ಕ್ಷಣಾರ್ಧದಲ್ಲಿ ಹಿಂದೆ ಅಥವಾ ಪಕ್ಕಕ್ಕೆ ಸರಿದು ಪ್ರತಿಯೊಂದು ದಾಳಿಯನ್ನೂ ನಿಖರವಾಗಿ ತಪ್ಪಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಒಂದು ಹಂತದಲ್ಲಿ ತನ್ನ ಪಂಜದಿಂದ ಸರ್ಪಕ್ಕೆ ಹೊಡೆದು ಪ್ರತಿದಾಳಿಯನ್ನೂ ನಡೆಸುತ್ತದೆ. ಹಲವು ಬಾರಿ ಪ್ರಯತ್ನಿಸಿದರೂ ಬೆಕ್ಕನ್ನು ಕಚ್ಚಲು ವಿಫಲವಾದ ಕಾಳಿಂಗ ಸರ್ಪದ ಮೇಲೆಯೇ ಬೆಕ್ಕು ಪ್ರತಿದಾಳಿಗೆ ಮುಂದಾಗಿದ್ದರಿಂದ ಕೊನೆಗೆ ಕಾಳಿಂಗ ಸಾರ್ಪವು ತಾನೆ ಹಿಂದೆ ಸರಿದು ಅಲ್ಲಿಂದ ತೆರಳುತ್ತದೆ.

ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣ X ನಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಬೆಕ್ಕಿನ ಚುರುಕುತನ, ಧೈರ್ಯ ಮತ್ತು ಕ್ಷಿಪ್ರ ಪ್ರತಿಕ್ರಿಯೆ ಸಾಮರ್ಥ್ಯವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.
ಕೆಲವರು, “ಈ ಬೆಕ್ಕಿಗೆ ಬದುಕಿನ ಭಯವೇ ಇಲ್ಲವೇನೋ!” ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು, “ಇದರ ಪ್ರತಿಕ್ರಿಯೆಯ ವೇಗ ನಿಜಕ್ಕೂ ನಂಬಲಾಗದಷ್ಟು ಅದ್ಭುತ” ಎಂದು ಪ್ರಶಂಸಿಸಿದ್ದಾರೆ. ಮತ್ತಷ್ಟು ಮಂದಿ ಬೆಕ್ಕಿನ ಆತ್ಮವಿಶ್ವಾಸವನ್ನು ಕೊಂಡಾಡುತ್ತಾ, ಇಂತಹ ದೃಶ್ಯವನ್ನು ಇದೇ ಮೊದಲ ಬಾರಿ ನೋಡುತ್ತಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಕ್ಕಿನ ಅಸಾಧಾರಣ ಚುರುಕುತನವೋ, ಕಾಳಿಂಗ ಸರ್ಪದ ಪದೇಪದೇ ವಿಫಲವಾದ ದಾಳಿಗಳೋ—ಈ ರೋಚಕ ಮುಖಾಮುಖಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರಾಣಿಗಳ ಸಹಜ ಪ್ರತಿಕ್ರಿಯೆ, ಬದುಕುಳಿಯುವ ಕೌಶಲ್ಯ ಮತ್ತು ಧೈರ್ಯದ ಬಗ್ಗೆ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement