ಕಾರ್ಗಿಲ್ ಯುದ್ಧದ ವರ್ಷಾಚರಣೆ ಕೆಲವೇ ದಿನಗಳು ಬಾಕಿ ಇರುವಾಗ, ಪಾಕಿಸ್ತಾನದ ರಾಜಕಾರಣಿ ಹಾಗೂ ರಾಷ್ಟ್ರೀಯ ಅಸೆಂಬ್ಲಿ (ಎಂಎನ್ಎ) ಸದಸ್ಯ, ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆ.ಯು.ಐ.) ಅಧ್ಯಕ್ಷ ಮೌಲಾನಾ ಫಜ್ಲುರ್ ರೆಹಮಾನ್ ಅವರು ಪಾಕಿಸ್ತಾನ ಸೇನೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವುದು ಈಗ ಭಾರಿ ಚರ್ಚಿತ ವಿಷಯವಗಿ ಪರಿಣಮಿಸಿದೆ.
1999ರ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಪಾಕಿಸ್ತಾನಿ ಸೈನಿಕರ ಸಾವಿನ ಸಂಖ್ಯೆಯನ್ನು ಪಾಕಿಸ್ತಾನದ ಸೇನೆ ಹೇಳದೆ ಮರೆಮಾಚಿದ್ದು, ತಮ್ಮದೇ ಹುತಾತ್ಮರ ಮೃತದೇಹಗಳನ್ನು ಸ್ವೀಕರಿಸದೆ “ಭಾರತದವರೇ ಅವರ ಅಂತ್ಯ ಸಂಸ್ಕಾರ ಮಾಡಬೇಕಾಯಿತು” ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ರೆಹಮಾನ್, ಕಾರ್ಗಿಲ್ ಯುದ್ಧದಲ್ಲಿ ಎಷ್ಟು ಪಾಕಿಸ್ತಾನಿ ಸೈನಿಕರು ಮೃತಪಟ್ಟರು ಎಂಬುದನ್ನು ಇಂದಿಗೂ ಪಾಕಿಸ್ತಾನ ಸೇನೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ ಎಂದು ಟೀಕಿಸಿದರು.
“ನಿಮ್ಮ ಹುತಾತ್ಮರ ಬಗ್ಗೆ ನಿಮಗೆ ಎಷ್ಟು ಗೌರವವಿದೆ ಎಂಬುದು ನನಗೆ ಗೊತ್ತು. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಎಷ್ಟು ಸೈನಿಕರು ಮೃತಪಟ್ಟರು ಎಂದು ದೇಶಕ್ಕೆ ನೀವು ಹೇಳಿದ್ದೀರಾ? ಎಷ್ಟು ಶವಪೆಟ್ಟಿಗೆಗಳನ್ನು ಸ್ವೀಕರಿಸಿದ್ದೀರಿ? “ಕಾರ್ಗಿಲ್ನಲ್ಲಿ ಪಾಕಿಸ್ತಾನದ ಸೈನಿಕರನ್ನು ಬಿಟ್ಟುಬಂದವರು ಯಾರು? ನಿಮ್ಮ ಹುತಾತ್ಮರನ್ನು ನೀವು ಭಾರತೀಯರ (ಹಿಂದೂಗಳ) ಕೈಯಲ್ಲಿ ಬಿಟ್ಟಿದ್ದೀರಿ. ಅಲ್ಲಿಂದ ‘ಇಸ್ಲಾಮಿಕ್ ಸಂಪ್ರದಾಯದಂತೆ ನಾವು ಮೃತದೇಹಗಳನ್ನು ಸಮಾಧಿ ಮಾಡಿದ್ದೇವೆ’ ಎಂಬ ಹೇಳಿಕೆ ಸಹ ಬಂದಿತ್ತು. ಪಾಕಿಸ್ತಾನಿ ಮೃತದೇಹಗಳನ್ನು ಭಾರತವೇ ಸಮಾಧಿ ಮಾಡಬೇಕಾದ ಪರಿಸ್ಥಿತಿ ಏಕೆ ಉಂಟಾಯಿತು?. ಸಾವಿನ ಬಗ್ಗೆ ಬೇರೆ ಬೇರೆ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ. ಆದರೆ ಆ ಸಂಖ್ಯೆ ನೂರಾರು ಇದೆ” ಎಂದು ಅವರು ಹೇಳುವ ಮೂಲಕ ಪಾಕಿಸ್ತಾನದ ನಾಗರಿಕ-ಸೇನಾ ಸಂಬಂಧಗಳ ಇತಿಹಾಸದಲ್ಲೇ ಅತ್ಯಂತ ಸೂಕ್ಷ್ಮ ಮತ್ತು ವಿವಾದಾತ್ಮಕ ವಿಷಯವೊಂದನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಅವರು ಮತ್ತೊಮ್ಮೆ ಇದೇ ಆರೋಪವನ್ನು ಪುನರುಚ್ಚರಿಸಿ, “ನಿಮ್ಮ ಹುತಾತ್ಮರ ಶವಪೆಟ್ಟಿಗೆಗಳನ್ನು ಸ್ವೀಕರಿಸಲು ನೀವು ಸಿದ್ಧರಿರಲಿಲ್ಲ. ಅವರನ್ನು ಭಾರತೀಯರ ಕೈಗೆ ಒಪ್ಪಿಸಿದ್ದೀರಿ,” ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಅವರು ಕ್ಯಾಪ್ಟನ್ ಕರ್ನಲ್ ಶೇರ್ ಖಾನ್ ಅವರ ಉದಾಹರಣೆಯನ್ನೂ ಪ್ರಸ್ತಾಪಿಸಿದರು. ಭಾರತದ ಒತ್ತಾಯದ ಮೇರೆಗೆ ಮಾತ್ರ ಕ್ಯಾಪ್ಟನ್ ಶೇರ್ ಖಾನ್ ಅವರ ಮೃತದೇಹವನ್ನು ಪಾಕಿಸ್ತಾನ ಸ್ವೀಕರಿಸಿತ್ತು ಎಂದು ಫಜ್ಲುರ್ ರೆಹಮಾನ್ ಹೇಳಿದ್ದಾರೆ.
ಆದಾಗ್ಯೂ, ಈ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ.
ಕಾರ್ಗಿಲ್ ಯುದ್ಧದ ಹಿನ್ನೆಲೆ
1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ನಿಯಮಿತ ಸೇನೆಯೇ ಈ ಕಾರ್ಯಾಚರಣೆಯ ನೇತೃತ್ವ ವಹಿಸಿತ್ತು ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿರಲಿಲ್ಲ. ಕಾರ್ಗಿಲ್ ಪರ್ವತ ಪ್ರದೇಶದಲ್ಲಿ ಕಾಶ್ಮೀರಿ ಉಗ್ರರು ಭಾರತದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂಬುದಾಗಿ ಪಾಕಿಸ್ತಾನ ಆಗ ಹೇಳಿತ್ತು.
ಆದರೆ, ಪಾಕಿಸ್ತಾನದ ಸೈನಿಕರೇ ಒಳನುಸುಳುವಿಕೆಯಲ್ಲಿ ಭಾಗಿಯಾಗಿದ್ದರು ಎಂಬುದು ಭಾರತದ ನಿಲುವಾಗಿತ್ತು. ಯುದ್ಧದಲ್ಲಿ ಮೃತಪಟ್ಟ ಪಾಕಿಸ್ತಾನಿ ಸೈನಿಕರ ಮೃತದೇಹಗಳೇ ಭಾರತದ ಈ ವಾದಕ್ಕೆ ಸಾಕ್ಷಿಯಾಗಿದ್ದವು. ಆದರೆ, ಅವರು ತಮ್ಮ ಸೈನಿಕರು ಎಂಬುದನ್ನು ಪಾಕಿಸ್ತಾನ ಒಪ್ಪಿಕೊಳ್ಳದೇ, ಮೃತದೇಹಗಳನ್ನು ಸ್ವೀಕರಿಸಲು ಸಹ ನಿರಾಕರಿಸಿತ್ತು.
1999ರ ಮೇ ತಿಂಗಳಿಂದ ಜುಲೈವರೆಗೆ ಲಡಾಖ್ನ ಕಾರ್ಗಿಲ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್ಒಸಿ) ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ನಡೆದಿತ್ತು.ಚಳಿಗಾಲದ ಅವಧಿಯಲ್ಲಿ ಪಾಕಿಸ್ತಾನಿ ಸೈನಿಕರು ಕಾಶ್ಮೀರಿ ಉಗ್ರರ ವೇಷದಲ್ಲಿ ರಹಸ್ಯವಾಗಿ ನಿಯಂತ್ರಣ ರೇಖೆ ದಾಟಿ, ಭಾರತದ ಎತ್ತರದ ಹಾಗೂ ಭದ್ರತಾ ದೃಷ್ಟಿಯಿಂದ ಮಹತ್ವದ ಸೇನಾ ನೆಲೆಗಳನ್ನು ಆಕ್ರಮಿಸಿಕೊಂಡಿದ್ದರು.
ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ವಿಜಯ್’ ಹೆಸರಿನ ಬೃಹತ್ ಸೇನಾ ಕಾರ್ಯಾಚರಣೆ ಆರಂಭಿಸಿ, ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ಎಲ್ಲಾ ಪ್ರದೇಶಗಳನ್ನು ಮರಳಿ ತನ್ನ ವಶಕ್ಕೆ ಪಡೆದುಕೊಂಡಿತು. 1999ರ ಜುಲೈ 26ರಂದು ಭಾರತ ನಿರ್ಣಾಯಕ ವಿಜಯ ಸಾಧಿಸಿರುವುದಾಗಿ ಘೋಷಿಸಿತು. ಈ ಐತಿಹಾಸಿಕ ಗೆಲುವಿನ ಸ್ಮರಣಾರ್ಥ ಭಾರತದಲ್ಲಿ ಪ್ರತಿವರ್ಷ ಜುಲೈ 26ರಂದು ‘ಕಾರ್ಗಿಲ್ ವಿಜಯ್ ದಿವಸ್’ ಆಚರಿಸಲಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ