ಜಾಮನಗರ: ಕೆಲಸದ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಲಾಗಿದ್ದ ವ್ಯಕ್ತಿಯೊಬ್ಬರನ್ನು, ವಾಸ್ತವದಲ್ಲಿ ಸುಮಾರು ಎರಡು ವರ್ಷಗಳ ಹಿಂದೆಯೇ ಹತ್ಯೆ ಮಾಡಲಾಗಿದ್ದು, ಅವರ ಮೃತದೇಹವನ್ನು 12 ಅಡಿ ಆಳದಲ್ಲಿ ಕಾಂಕ್ರೀಟ್ ನೆಲದಡಿ ಹೂತುಹಾಕಲಾಗಿತ್ತು ಎಂಬ ಆಘಾತಕಾರಿ ಸಂಗತಿ ಗುಜರಾತಿನ ಜಾಮನಗರದಲ್ಲಿ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಬಯಲಾದ ಈ ಪ್ರಕರಣ ಬಾಲಿವುಡ್ನ ಜನಪ್ರಿಯ ಥ್ರಿಲ್ಲರ್ ಸಿನಿಮಾ ‘ದೃಶ್ಯಂ’ ಅನ್ನು ನೆನಪಿಸುವಂತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಜಿಗ್ನೇಶ್ ಮಾವಡಿಯಾ ಅವರ ಪತ್ನಿ ಪೃಥ್ವಿ ಅಲಿಯಾಸ್ ಭೂಮಿಬೆನ್, ಆಕೆಯ ಪ್ರಿಯಕರ ಎಂದು ಹೇಳಲಾಗಿರುವ ನಿಲೇಶ್ ಕಚ್ಚಾಟಿಯಾ ಹಾಗೂ ಆತನ ಸ್ನೇಹಿತ ಬಲ್ವೀರ್ ವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜಿಗ್ನೇಶ್ ಮಾವಡಿಯಾ ಸುಮಾರು ಎರಡು ವರ್ಷಗಳಿಂದ ನಾಪತ್ತೆಯಾಗಿದ್ದರು. ಈ ಅವಧಿಯಲ್ಲಿ ಅವರ ಪತ್ನಿ ಪೃಥ್ವಿ, “ಜಿಗ್ನೇಶ್ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಅವರು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ದೂರವಾಣಿ ಕರೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಇರುವುದರಿಂದ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ” ಎಂದು ಕುಟುಂಬಸ್ಥರನ್ನು ನಂಬಿಸುತ್ತಿದ್ದಳು.
ಆದರೆ, ಈ ಕಥೆ ಹೆಚ್ಚು ದಿನ ಉಳಿಯಲಿಲ್ಲ. ಜಿಗ್ನೇಶ್ ಅವರ ಸಂಬಂಧಿಯೊಬ್ಬರು ಆಸ್ಟ್ರೇಲಿಯಾಕ್ಕೆ ತೆರಳುವ ಸಂದರ್ಭದಲ್ಲಿ, ಅಲ್ಲಿಗೆ ಹೋದ ಬಳಿಕ ಅವರನ್ನು ಭೇಟಿ ಮಾಡಲು ವಿಳಾಸ ಹಾಗೂ ಸಂಪರ್ಕ ವಿವರಗಳನ್ನು ಕೇಳಿದಾಗ, ಪೃಥ್ವಿ ತನ್ನ ಪತಿಯ ಯಾವುದೇ ಮಾಹಿತಿ ನೀಡಲಿಲ್ಲ. ಇದರಿಂದ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ಜಿಗ್ನೇಶ್ ಅವರ ಸಹೋದರರು ಜುಲೈ 26ರಂದು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದರು.
ಕೈಗಾರಿಕಾ ಶೆಡ್ನಲ್ಲಿ 12 ಅಡಿ ಆಳದಲ್ಲಿ ಸಿಕ್ಕ ಅಸ್ಥಿಪಂಜರ
ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಜಾಮನಗರ ಪೊಲೀಸರು, ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ಕೈಗಾರಿಕಾ ಶೆಡ್ನಲ್ಲಿ ಶೋಧ ಕಾರ್ಯ ಕೈಗೊಂಡರು. ಜುಲೈ 30ರಂದು ಶೆಡ್ನ ಕಾಂಕ್ರೀಟ್ ನೆಲವನ್ನು ಒಡೆದು ಸುಮಾರು 12 ಅಡಿ ಆಳಕ್ಕೆ ಅಗೆದಾಗ, ಅಲ್ಲಿ ಹೂತುಹಾಕಲಾಗಿದ್ದ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದವು.
ಪ್ರಾಥಮಿಕ ತನಿಖೆಯ ಪ್ರಕಾರ, ಪೃಥ್ವಿ ಮತ್ತು ನಿಲೇಶ್ ನಡುವೆ ವಿವಾಹೇತರ ಸಂಬಂಧವಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಜಿಗ್ನೇಶ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. 2024ರ ಮೇ 31ರ ರಾತ್ರಿ, ಮದ್ಯದ ಪಾರ್ಟಿ ಎಂಬ ನೆಪದಲ್ಲಿ ಜಿಗ್ನೇಶ್ ಅವರನ್ನು ಕೈಗಾರಿಕಾ ಶೆಡ್ಗೆ ಕರೆಸಿಕೊಂಡು, ಸೈನೈಡ್ ಬೆರೆಸಿದ ಮದ್ಯ ಕುಡಿಸಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಹತ್ಯೆಯ ನಂತರ, ಮೂವರು ಆರೋಪಿಗಳು ಸುಮಾರು 12 ಅಡಿ ಆಳದ ಗುಂಡಿ ತೋಡಿ ಮೃತದೇಹವನ್ನು ಹೂತು, ಅದರ ಮೇಲೆ ಮಣ್ಣು ಹಾಕಿ ಬಳಿಕ ಸುಮಾರು ಒಂದು ಅಡಿ ದಪ್ಪದ ಕಾಂಕ್ರೀಟ್ ಲೇಯರ್ ಹಾಕಿ ಸ್ಥಳವನ್ನು ಸಂಪೂರ್ಣ ಮುಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಸಮ್ಮುಖದಲ್ಲೇ ಕ್ರೈಂ ಸೀನ್ ಮರುಸೃಷ್ಟಿ
ಆರೋಪಿಗಳ ಸಮ್ಮುಖದಲ್ಲೇ ಪೊಲೀಸರು ಘಟನಾ ಸ್ಥಳದಲ್ಲಿ ಕ್ರೈಂ ಸೀನ್ ರೀಕನ್ಸ್ಟ್ರಕ್ಷನ್ (Crime Scene Reconstruction) ನಡೆಸಿದರು. ವಿದ್ಯುತ್ ಚಾಲಿತ ಉಪಕರಣಗಳ ಸಹಾಯದಿಂದ ಕಾಂಕ್ರೀಟ್ ಪದರವನ್ನು ಒಡೆದು ಅಗೆದಾಗ, ಅದರ ಕೆಳಗೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದವು.
ಈ ಕುರಿತು ಮಾತನಾಡಿದ ಸಹಾಯಕ ಪೊಲೀಸ್ ಅಧೀಕ್ಷಕಿ ಪ್ರತಿಭಾ, “ಪತ್ತೆಯಾದ ಅಸ್ಥಿಪಂಜರದ ಅವಶೇಷಗಳನ್ನು ಮೃತದೇಹದ ಗುರುತು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ತಜ್ಞರ ಬಳಿ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಮತ್ತೊಬ್ಬ ಸಹಚರನನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ಹಿನ್ನೆಲೆ, ಕೊಲೆಯ ನಿಖರ ಕಾರಣ ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ