ಭೀಕರ ರಸ್ತೆ ಅಪಘಾತದಲ್ಲಿ, ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸುತ್ತಿದ್ದನೆಂದು ಆರೋಪಿಸಲಾಗಿರುವ 17 ವರ್ಷದ ಅಪ್ರಾಪ್ತ ಬಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಕಾರು ಏಳು ಬೈಕ್ಗಳಿಗೆ ಡಿಕ್ಕಿ ಹೊಡೆದು 65 ವರ್ಷದ ವ್ಯಕ್ತಿ ಹಾಗೂ ಅವರ ಸಂಬಂಧಿ ಗಂಭೀರವಾಗಿ ಗಾಯಗೊಂಡ ಘಟನೆ ಹೈದರಾಬಾದ್ನ ಕಾರ್ಮಿಕ ನಗರದಲ್ಲಿ ಭಾನುವಾರ ನಡೆದಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪ್ರಾಪ್ತ ಬಾಲಕ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಸ್ಕೂಟರ್ಗೆ ಅಪ್ಪಳಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಪೊಲೀಸರ ಮಾಹಿತಿ ಪ್ರಕಾರ, ರಾಜಕುಮಾರ (65) ಮತ್ತು ಪ್ರಭಾಕರ (55) ಎಂಬ ಸಂಬಂಧಿಕರು ಭಾನುವಾರ ಬೆಳಿಗ್ಗೆ ಚರ್ಚ್ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಸವಾರ ಗಾಯಗೊಂಡರೆ, ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನ ಚಕ್ರದಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಳಿಕ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿ ಕೊನೆಗೆ ನಿಂತಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರನ್ನು ಮೇಲಕ್ಕೆ ಎತ್ತಿ ರಾಜಕುಮಾರ ಅವರನ್ನು ರಕ್ಷಿಸಿರುವುದು ಕಾಣಿಸುತ್ತದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮತ್ತೊಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ಅಪ್ರಾಪ್ತ ಬಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ಸ್ಥಳೀಯರು ಆತನನ್ನು ಬೆನ್ನಟ್ಟಿ ಸ್ವಲ್ಪ ದೂರದಲ್ಲೇ ಹಿಡಿದು ಥಳಿಸಿದ್ದು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರನ್ನು 17 ವರ್ಷದ ದ್ವಿತೀಯ ಪಿಯುಸಿ (12ನೇ ತರಗತಿ) ವಿದ್ಯಾರ್ಥಿಯೊಬ್ಬ ಚಲಾಯಿಸುತ್ತಿದ್ದು, ಆತನೊಂದಿಗೆ ಮತ್ತೊಬ್ಬ ಅಪ್ರಾಪ್ತ ಬಾಲಕ ಕಾರಿನಲ್ಲಿದ್ದ. ಈ ಕಾರನ್ನು ಅವರ ಪರಿಚಯಸ್ಥನಾದ ಯುವಕ ಬಾಡಿಗೆಗೆ ಪಡೆದುಕೊಂಡಿದ್ದು, ಎಲ್ಲರೂ ಸೇರಿ ಪ್ರವಾಸಕ್ಕೆ ತೆರಳಲು ಯೋಜಿಸಿದ್ದರು.
ಆ ಸ್ನೇಹಿತ ಊಟಕ್ಕಾಗಿ ಮನೆಗೆ ಹೋದ ವೇಳೆ, ಕೀಲಿಯನ್ನು ತೆಗೆದುಕೊಂಡ ಇಬ್ಬರು ಅಪ್ರಾಪ್ತರು ಕಾರನ್ನು ಚಲಾಯಿಸಿಕೊಂಡು ಹೊರಟಿದ್ದಾರೆ. ಆರಂಭದಲ್ಲಿ ಒಬ್ಬ ಬಾಲಕ ಕೆಲ ದೂರ ಕಾರು ಚಲಾಯಿಸಿದ್ದು, ಬಳಿಕ 17 ವರ್ಷದ ಬಾಲಕ ಸ್ಟೀರಿಂಗ್ ಹಿಡಿದಿದ್ದಾನೆ. ಈ ವೇಳೆ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕೂಟರ್ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪ್ರಾಪ್ತ ಚಾಲಕನನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ