ಬಂಕಿಪುರದಲ್ಲಿ ಪ್ರಶಾಂತ ಕಿಶೋರ ಐತಿಹಾಸಿಕ ಗೆಲುವು : ಬಿಜೆಪಿ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಅದರ ಭದ್ರಕೋಟೆ ಭೇದಿಸಿದ್ದು ಹೇಗೆ ?

ಭಾರತದ ಅತ್ಯಂತ ಬೇಡಿಕೆಯ ರಾಜಕೀಯ ತಂತ್ರಜ್ಞರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ ಕಿಶೋರ ಅವರು, ಇದೀಗ ರಾಜಕೀಯ ರಣತಂತ್ರ ರೂಪಿಸುವ ವ್ಯಕ್ತಿಯಿಂದ ನೇರವಾಗಿ ಚುನಾವಣಾ ಕಣಕ್ಕಿಳಿದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿಯು ಸುಮಾರು ಮೂರು ದಶಕಗಳಿಂದ ತನ್ನ ಭದ್ರಕೋಟೆಯಾಗಿ ಉಳಿಸಿಕೊಂಡಿದ್ದ ಬಂಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಪ್ರಶಾಂತ ಕಿಶೋರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ನಿತಿನ್ ನಬಿನ್ ಅವರು ಹಲವಾರು ಅವಧಿಗಳಿಗೆ ಪ್ರತಿನಿಧಿಸಿದ್ದ ಅವರ ತವರು ಕ್ಷೇತ್ರದಲ್ಲಿ ಬಿಜೆಪಿಯನ್ನು ಭರ್ಜರಿಯಾಗಿ ಸೋಲಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇದರೊಂದಿಗೆ ತಮ್ಮ ರಾಜಕೀಯ ಪಕ್ಷ ಜನ ಸುರಾಜ್‌ಗೆ ಮೊದಲ ಚುನಾವಣಾ ವಿಜಯ ತಂದುಕೊಟ್ಟಿದ್ದು, ತಮ್ಮ ವೈಯಕ್ತಿಕ ರಾಜಕೀಯ ಪಯಣಕ್ಕೂ ಯಶಸ್ವಿ ಆರಂಭ ನೀಡಿದ್ದಾರೆ.
ಅವರು ಬಿಹಾರದ ಬಂಕಿಪುರದಿಂದ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ನೀರಜಕುಮಾರ ಅವರನ್ನು 19,324 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಅವರು ಒಟ್ಟು 64,151 ಮತಗಳನ್ನು ಗಳಿಸಿದರೆ, ಬಿಜೆಪಿಯ ನೀರಜ್ ಕುಮಾರ್ 44,827 ಮತಗಳನ್ನು ಪಡೆದರು. ಆರ್‌ಜೆಡಿಯ ರೇಖಾ ಕುಮಾರಿ 14,273 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.
ರಾಜಕೀಯ ತಂತ್ರಜ್ಞನಿಂದ ರಾಜಕಾರಣಿಯಾಗಿ ಪ್ರಶಾಂತ ಕಿಶೋರ ಪಯಣ
ಪ್ರಶಾಂತ ಕಿಶೋರ ಅವರ ರಾಜಕೀಯ ಪಯಣ 2014ರಲ್ಲಿ ಆರಂಭವಾಯಿತು. ಆ ವರ್ಷದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಭರ್ಜರಿ ವಿಜಯದ ಹಿಂದಿನ ಪ್ರಮುಖ ಚುನಾವಣಾ ತಂತ್ರಜ್ಞರಾಗಿ ಅವರು ದೇಶಾದ್ಯಂತ ಗಮನ ಸೆಳೆದರು.
ನಂತರ ಅವರು ಇಂಡಿಯನ್ ಪಾಲಿಟಿಕಲ್ ಆಕ್ಷನ್ ಕಮಿಟಿ (I-PAC) ಸ್ಥಾಪಿಸಿ, ದೇಶದ ಅನೇಕ ಪ್ರಮುಖ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರ ರೂಪಿಸುವ ಕೆಲಸ ಮಾಡಿದರು. 2018ರಲ್ಲಿ ಅವರು ಜೆಡಿಯು (JD(U)) ಪಕ್ಷಕ್ಕೆ ಸೇರ್ಪಡೆಯಾಗಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಆದರೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿಚಾರದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ಜೊತೆಗೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ 2020ರಲ್ಲಿ ಅವರನ್ನು ಜೆಡಿಯುದಿಂದ ಉಚ್ಚಾಟಿಸಲಾಯಿತು.
ಜನಾಂದೋಲನದ ಮೂಲಕ ರಾಜಕೀಯ ಪ್ರವೇಶ
2022ರಲ್ಲಿ ಪ್ರಶಾಂತ ಕಿಶೋರ ಯಾವುದೇ ಅಸ್ತಿತ್ವದಲ್ಲಿದ್ದ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಘೋಷಿಸಿದರು. ಬದಲಾಗಿ ಅವರು ‘ಜನ ಸುರಾಜ್’ ಅಭಿಯಾನ ಆರಂಭಿಸಿ, ಬಿಹಾರದಾದ್ಯಂತ ಪಾದಯಾತ್ರೆ ಕೈಗೊಂಡರು.
ಸುಮಾರು ಎರಡು ವರ್ಷಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಶಿಕ್ಷಣ, ಉದ್ಯೋಗ, ಆರೋಗ್ಯ, ಭ್ರಷ್ಟಾಚಾರ ಹಾಗೂ ವಲಸೆ ಸೇರಿದಂತೆ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿದರು. ಆರಂಭದಲ್ಲಿ ಇದನ್ನು ರಾಜಕೀಯ ಪಕ್ಷವಲ್ಲ, ಜನರ ಚಳವಳಿಯೆಂದು ಬಿಂಬಿಸಲಾಗಿತ್ತು.
ನಂತರ 2024ರ ಅಕ್ಟೋಬರ್‌ನಲ್ಲಿ ಈ ಜನಾಂದೋಲನವೇ ಅಧಿಕೃತವಾಗಿ ಜನ ಸುರಾಜ್ ಪಾರ್ಟಿಯಾಗಿ ರೂಪುಗೊಂಡಿತು. ಬಿಹಾರದಲ್ಲಿ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ನಿರ್ಮಿಸುವುದಾಗಿ ತಮ್ಮ ಉದ್ದೇಶ ಎಂದು ಅವರು ಘೋಷಿಸಿದರು.
2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್‌ಗೆ  ಭಾರೀ ಹಿನ್ನಡೆ ಯಾಕೆ ?
ಹೊಸ ಪಕ್ಷವಾಗಿ ಜನ ಸುರಾಜ್ 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ 238 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಆದರೆ ಪಕ್ಷಕ್ಕೆ ಒಂದೇ ಒಂದು ಕ್ಷೇತ್ರದಲ್ಲೂ ಗೆಲುವು ಸಿಗಲಿಲ್ಲ. ಇದಕ್ಕಿಂತ ದೊಡ್ಡ ಆಘಾತವೆಂದರೆ, 238 ಅಭ್ಯರ್ಥಿಗಳ ಪೈಕಿ 236 ಅಭ್ಯರ್ಥಿಗಳು ಠೇವಣಿಯನ್ನೇ ಕಳೆದುಕೊಂಡರು. ಇದು ಪಕ್ಷದ ಚುನಾವಣಾ ವೈಫಲ್ಯದ ಪ್ರಮಾಣವನ್ನು ಸ್ಪಷ್ಟವಾಗಿ ತೋರಿಸಿತು.
ಜನ ಸುರಾಜ್ ಪಕ್ಷದ ಹೀನಾಯ ಪ್ರದರ್ಶನಕ್ಕೆ ಹಲವು ಕಾರಣಗಳನ್ನು ರಾಜಕೀಯ ವಿಶ್ಲೇಷಕರು ಸೂಚಿಸಿದ್ದಾರೆ. ಮೊದಲನೆಯದಾಗಿ, ಪಕ್ಷದ ಬಹುತೇಕ ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗೂ ಚುನಾವಣಾ ರಾಜಕೀಯಕ್ಕೆ ಹೊಸಬರಾಗಿದ್ದರು.  ಅವರಿಗೆ ಸ್ಥಳೀಯ ಮಟ್ಟದಲ್ಲಿ ರಾಜಕೀಯ ನೆಲೆ, ಸಂಘಟನೆ ಅಥವಾ ಜನಪ್ರಿಯತೆ ಇರಲಿಲ್ಲ.
ಎರಡನೆಯದಾಗಿ, ಬಿಜೆಪಿ, ಆರ್‌ಜೆಡಿ ಹಾಗೂ ಜೆಡಿಯುಗಳಂತಹ ಹಳೆಯ ಪಕ್ಷಗಳಂತೆ ಬಲಿಷ್ಠ ಸಂಘಟನೆ ಮತ್ತು ಗ್ರಾಮಮಟ್ಟದ ಕಾರ್ಯಕರ್ತರ ಜಾಲ ಜನ ಸುರಾಜ್‌ ಪಕ್ಕಕ್ಕೆ ಇರಲಿಲ್ಲ.
ಮೂರನೆಯದು ಹಾಗೂ ಅತ್ಯಂತ ಪ್ರಮುಖ ಕಾರಣವೆಂದರೆ ಪ್ರಶಾಂತ ಕಿಶೋರ ಸ್ವತಃ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಅವರು ರಾಜ್ಯಾದ್ಯಂತ ಪ್ರಚಾರ ನಡೆಸಿದರೂ,  ಪಕ್ಷದ ಪ್ರಮುಖ ಮುಖವೇ ಚುನಾವಣಾ ಕಣದಲ್ಲಿ ಕಾಣಿಸದಿರುವುದು ಮತದಾರರ ಮೇಲೆ ಪರಿಣಾಮ ಬೀರಿದೆಯೆಂದು ವಿಶ್ಲೇಷಿಸಲಾಗಿದೆ.
ಬಂಕಿಪುರ ಉಪಚುನಾವಣೆಯಲ್ಲಿ ಬಿಜೆಪಿ ಕೋಟೆ ಭೇದಿಸಿದ್ದು ಹೇಗೆ..?  
ಬಂಕಿಪುರ ಉಪಚುನಾವಣೆ ಸಂಪೂರ್ಣ ಭಿನ್ನ ರಾಜಕೀಯ ಪರಿಸ್ಥಿತಿಗೆ ಕಾರಣವಾಯಿತು. ಈ ಬಾರಿ ಪ್ರಶಾಂತ ಕಿಶೋರ ಸ್ವತಃ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣ, ಇದು ಕೇವಲ ಒಂದು ಕ್ಷೇತ್ರದ ಚುನಾವಣೆ ಮಾತ್ರವಲ್ಲದೆ ಅವರ ವೈಯಕ್ತಿಕ ರಾಜಕೀಯ ಜನಪ್ರಿಯತೆಯ ಪರೀಕ್ಷೆಯಾಗಿ ಮಾರ್ಪಟ್ಟಿತು.
ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರವಾದ ಬಂಕಿಪುರ ಈ ಉಪಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಹಠಾತ್ ಮತ್ತು ರಾತ್ರೋರಾತ್ರಿ ಜನಪ್ರಿಯತೆಗೆ ಹಲವಾರು ಕಾರಣಗಳಿವೆ.
ಬಂಕಿಪುರ ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿತ್ತು ಎಂಬುದು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಇದು ಹಲವಾರು ಅವಧಿಗಳಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್‌ ನಬಿನ್‌ ಅವರನ್ನು ಆಯ್ಕೆ ಮಾಡುತ್ತ ಬಂದಿದೆ.  ನಬಿನ್ ಅವರು   ರಾಜ್ಯಸಭೆಗೆ  ಆಯ್ಕೆಯಾದ ನಂತರ ಈ ಸ್ಥಾನವನ್ನು ತೊರೆದರು. ಈ ಕಾರಣಕ್ಕಾಗಿಯೇ ಉಪಚುನಾವಣೆ ನಡೆಯಿತು.
ಕಿಶೋರ ಕಣಕ್ಕೆ ಇಳಿದಾಗ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಚಾರವಾಗಿ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದು ಸ್ಪರ್ಧೆ  ಇನ್ನಷ್ಟು ಆಸಕ್ತಿದಾಯಕವಾಗಲು ಕಾರಣವಾಯಿತು.
ಇದೇ ವೇಳೆ ಬಿಜೆಪಿ ಮೊದಲು ಈ ಕ್ಷೇತ್ರದಿಂದ ಅಭಿಷೇಕಕುಮಾರ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಅವರು “ಕುಟುಂಬ ಕಾರಣಗಳನ್ನು” ಉಲ್ಲೇಖಿಸಿ ಸ್ಪರ್ಧೆಯಿಂದ ಹಿಂದೆ ಸರಿದರು.  ನಂತರ ಬಿಜೆಪಿ ತನ್ನ ಉಮೇದುವಾರಿಕೆಗೆ ಸಂಬಂಧಿಸಿದಂತೆ  ಯುವ ಘಟಕದ ನಾಯಕ ನೀರಜಕುಮಾರ ಅವರನ್ನು ತನ್ನ ಅಭ್ಯರ್ಥಿಯಾಗಿ ಹೆಸರಿಸಿತು. ಆದರೆ ಬಿಕ್ಕಟ್ಟನ್ನು ಎದುರಿಸಿತು.
 ಅಲ್ಲದೆ, 2025ರ ಚುನಾವಣೆಯಲ್ಲಿ ವರ ಪಕ್ಷವು ಹೀನಾಯವಾಗಿ ಸೋತಿದ್ದರೂ, ಆ ಬಳಿಕ ಬಿಹಾರದಾದ್ಯಂತ ಜನ ಸುರಾಜ್ ಪಕ್ಷ ಮತ್ತು ಪ್ರಶಾಂತ ಕಿಶೋರ ಅವರ ಗುರುತಿಸುವಿಕೆಯ ಮಟ್ಟ ಗಣನೀಯವಾಗಿ ಹೆಚ್ಚಿತ್ತು. ಬಂಕಿಪುರ ಉಪಚುನಾವಣೆ ವೇಳೆಗೆ ಮತದಾರರಿಗೆ ಪಕ್ಷದ ಸಿದ್ಧಾಂತ, ನಾಯಕತ್ವ ಮತ್ತು ಉದ್ದೇಶಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗಿತ್ತು. ಈ ಹೆಚ್ಚಿದ ಪರಿಚಯ ಹಾಗೂ ಪ್ರಶಾಂತ ಕಿಶೋರ ಅವರ ನೇರ ಸ್ಪರ್ಧೆ ಚುನಾವಣಾ ಫಲಿತಾಂಶದ ಮೇಲೆ ಮಹತ್ವದ ಪ್ರಭಾವ ಬೀರಿದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಬಂಕಿಪುರದ ಗೆಲುವಿನ ರಾಜಕೀಯ ಮಹತ್ವವೇನು?
ಬಂಕಿಪುರದ ಫಲಿತಾಂಶ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಇದು ಜನ ಸುರಾಜ್ ಪಕ್ಷದ ಮೊದಲ ಚುನಾವಣಾ ಗೆಲುವು.
ಪ್ರಶಾಂತ್ ಕಿಶೋರ್ ಅವರ ಮೊದಲ ಚುನಾವಣಾ ಸ್ಪರ್ಧೆಯಲ್ಲೇ ದಾಖಲಿಸಿದ ಜಯವಾಗಿದೆ.
2025ರಲ್ಲಿ ರಾಜ್ಯಾದ್ಯಂತ ಮತಗಳಾಗಿ ಪರಿವರ್ತನೆಯಾಗದ ಜನ ಸುರಾಜ್‌ನ ಪ್ರಚಾರ, ಪಕ್ಷದ ಸಂಸ್ಥಾಪಕರೇ ಅಭ್ಯರ್ಥಿಯಾದಾಗ ಗೆಲುವಿನ ರೂಪ ಪಡೆದಿದೆ ಎಂಬುದನ್ನು ಈ ಫಲಿತಾಂಶ ತೋರಿಸಿದೆ.
ಬಿಜೆಪಿ ಸುಮಾರು ಮೂರು ದಶಕಗಳಿಂದ ಹಿಡಿದಿಟ್ಟುಕೊಂಡಿದ್ದ ಕ್ಷೇತ್ರವನ್ನು ಗೆಲ್ಲುವ ಮೂಲಕ ಪ್ರಶಾಂತ ಕಿಶೋರ ತಮ್ಮ ರಾಜಕೀಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಮುಂದಿನ ರಾಜಕೀಯದ ಮೇಲೆ ಪರಿಣಾಮ
ಬಂಕಿಪುರದ ಗೆಲುವು ಜನ ಸುರಾಜ್ ಪಕ್ಷಕ್ಕೆ ಹೊಸ ಆತ್ಮವಿಶ್ವಾಸ ನೀಡಿದರೂ, ಇದೊಂದೇ ಆಧಾರವಾಗಿ ಪಕ್ಷ ಬಿಹಾರದಲ್ಲಿ ಪ್ರಮುಖ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲಿದೆ ಎಂದು ಈಗಲೇ ಹೇಳುವುದು ಕಷ್ಟ.
ಆದರೆ ಒಂದು ಸಂಗತಿ ಸ್ಪಷ್ಟವಾಗಿದೆ. 2025ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯವ್ಯಾಪಿ ಅಭಿಯಾನವನ್ನು ಮತಗಳಾಗಿ ಪರಿವರ್ತಿಸಲು ವಿಫಲವಾದ ಜನ ಸುರಾಜ್ ಪಕ್ಷ, ಅದರ ಸಂಸ್ಥಾಪಕ ಪ್ರಶಾಂತ ಕಿಶೋರ ಸ್ವತಃ ಜನರ ತೀರ್ಪು ಕೇಳಿದಾಗ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಬಂಕಿಪುರದ ಜನಾದೇಶ ಸಾಬೀತುಪಡಿಸಿದೆ. ಹೀಗಾಗಿ, ಈ ಗೆಲುವು ಕೇವಲ ಒಂದು ಕ್ಷೇತ್ರದ ಜಯವಲ್ಲ; ಜನ ಸುರಾಜ್ ಪಕ್ಷದ ರಾಜಕೀಯ ಭವಿಷ್ಯಕ್ಕೆ ಹೊಸ ಅಧ್ಯಾಯವನ್ನು ತೆರೆದಿರುವ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement