ಬೆಚ್ಚಿಬೀಳಿಸುವ ವಿಡಿಯೋ | ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಸಾವು ; 12 ಮಂದಿಗೆ ಗಾಯ

ಬ್ಯಾಂಕಾಕ್ : ದಕ್ಷಿಣ ಥೈಲ್ಯಾಂಡ್‌ನಲ್ಲಿ ನಡೆದ ಪ್ರಾದೇಶಿಕ ಫುಟ್ಬಾಲ್ ಪಂದ್ಯವೊಂದು ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಮುಂಗಾರು ಮಳೆಯ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ 24 ವರ್ಷದ ಆಟಗಾರ ಮೃತಪಟ್ಟಿದ್ದು, ಇನ್ನೂ 12 ಮಂದಿ ಆಟಗಾರರು ಗಾಯಗೊಂಡಿದ್ದಾರೆ.
ಈ ಘಟನೆ ನರಾಥಿವಾತ್ ಪ್ರಾಂತ್ಯದ ಸಂತಿಫಾಪ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗೋಲೋಕ್ ಕಪ್ ಪ್ರಾದೇಶಿಕ ಟೂರ್ನಿಯ ವೇಳೆ ಸಂಭವಿಸಿದೆ. ಮೃತ ಆಟಗಾರನನ್ನು ಸಫ್ವಾನ್ ಅವೇ (Safwan Awae) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಅವರು ಥಾಯ್ ಲೀಗ್–3 ದಕ್ಷಿಣ ವಲಯದ ಎಫ್‌ಸಿ ಯಾಲಾ (FC Yala) ತಂಡಕ್ಕೆ ಸೇರ್ಪಡೆಯಾಗಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ  ಸಿಡಿಲು ನೇರವಾಗಿ ಅವರಿಗೆ ಬಡಿದ ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದರು.
ಘಟನೆಯ ಬಳಿಕ ಮೈದಾನದಲ್ಲಿದ್ದ ಆಟಗಾರರು, ಪ್ರೇಕ್ಷಕರು ಹಾಗೂ ಸಿಬ್ಬಂದಿ ತಕ್ಷಣವೇ ಓಡಿ ಬಂದು ಅವರಿಗೆ ನೆರವು ನೀಡಲು ಪ್ರಯತ್ನಿಸಿದರು. ಬಳಿಕ ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ನಡೆಸಿದ ಎಲ್ಲಾ ಪ್ರಯತ್ನಗಳ ನಡುವೆಯೂ ತೀವ್ರ ಗಾಯಗಳ ಪರಿಣಾಮ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಈ ಭಯಾನಕ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಮಳೆಯಿಂದ ತೇವಗೊಂಡ ಮೈದಾನದಲ್ಲಿ ಆಟಗಾರರು ಓಡುತ್ತಿರುವ ದೃಶ್ಯ ಕಂಡುಬರುತ್ತದೆ. ಕೆಲವೇ ಕ್ಷಣಗಳಲ್ಲಿ ಭಾರೀ ಸಿಡಿಲು ಮೈದಾನದ ಸಮೀಪ ಬಡಿದಿದ್ದು, ಕ್ಷಣಾರ್ಧದಲ್ಲಿ ಇಡೀ ಮೈದಾನ ಪ್ರಕಾಶಮಾನವಾಗಿದೆ. ಬಳಿಕ ನೆಲದಿಂದ ಜ್ವಾಲೆಗಳು ಎದ್ದಿದ್ದು, ದಟ್ಟ ಹೊಗೆ ಆವರಿಸಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಭಾರೀ ಮಳೆಯ ನಡುವೆಯೂ ಪಂದ್ಯವನ್ನು ಮುಂದುವರಿಸಲಾಗುತ್ತಿತ್ತು. ಮಳೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದಾಗ ಏಕಾಏಕಿ ಸಿಡಿಲು ಹೊಡೆದು ಆಟಗಾರರಿಗೆ ತಗುಲಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಪಂದ್ಯವು ಅಬು ಎಕ್ಸ್ ನಾಂಗ್ ಸಿರಿನ್ ಹಾಗೂ ಸ್ಯಾಮ್‌ಕೊಲ್ಟ್‌ (SAMCOLT) ತಂಡಗಳ ನಡುವೆ ನಡೆಯುತ್ತಿತ್ತು. ಸ್ಯಾಮ್‌ಕೊಲ್ಟ್‌ ತಂಡದಲ್ಲಿ ಥೈ ಹಾಗೂ ಮಲೇಷ್ಯಾ ಆಟಗಾರರು ಸೇರಿದ್ದರು. ಪೊಲೀಸ್ ಮುಖ್ಯಸ್ಥ ಥುನ್ ಸಿರಿಖುಂಟ್ ಅವರ ಮಾಹಿತಿ ಪ್ರಕಾರ, ಗೋಲೋಕ್ ಎಫ್‌ಎ ಕಪ್ ಟೂರ್ನಿಯಲ್ಲಿ ಕೆಲಾಂತನ್ ಎಫ್‌ಸಿ ಸೇರಿದಂತೆ ಮಲೇಷ್ಯಾದ ಹಲವು ತಂಡಗಳು ಭಾಗವಹಿಸಿದ್ದವು.

ಈ ಟೂರ್ನಿಯು ಥೈಲ್ಯಾಂಡ್‌ನ ನರಾಥಿವಾತ್ ಪ್ರಾಂತ್ಯದ ಸುಂಗೈ ಗೋಲೋಕ್ ಪಟ್ಟಣದಲ್ಲಿ ನಡೆಯುತ್ತಿದ್ದು, ಈ ಪ್ರದೇಶವು ಮಲೇಷ್ಯಾದ ಕೆಲಾಂತನ್ ರಾಜ್ಯದ ಗಡಿಭಾಗದಲ್ಲಿದೆ.
ಸಿಡಿಲು ಹೊಡೆದಿದ್ದರಿಂದ ಒಟ್ಟು 12 ಮಂದಿ ಆಟಗಾರರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳಲ್ಲಿ 22 ವರ್ಷದ ಮಲೇಷ್ಯಾದ ಫುಟ್‌ಬಾಲ್ ಆಟಗಾರ ಅಲಿಫ್ ಎಜ್ಜಹಾನ್ ಜುಲ್ಕಿಫ್ಲಿ ಕೂಡ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಫ್ವಾನ್ ಅವೇ ಅವರ ನಿಧನಕ್ಕೆ ಎಫ್‌ಸಿ ಯಾಲಾ ಕ್ಲಬ್ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದು, ತಮ್ಮ ಹೊಸ ಆಟಗಾರನನ್ನು ಕಳೆದುಕೊಂಡಿರುವ ದುಃಖವನ್ನು ವ್ಯಕ್ತಪಡಿಸಿದೆ. ಜೊತೆಗೆ ಅವರ ಕುಟುಂಬದವರಿಗೆ ತೀವ್ರ ಸಂತಾಪವನ್ನೂ ತಿಳಿಸಿದೆ.
ಈ ಘಟನೆ ತೀವ್ರ ಗುಡುಗು-ಮಿಂಚಿನ ಸಂದರ್ಭದಲ್ಲಿ ಹೊರಾಂಗಣ ಕ್ರೀಡಾಕೂಟಗಳನ್ನು ಮುಂದುವರಿಸುವ ಅಪಾಯದ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ವಿಶೇಷವಾಗಿ ಮುಂಗಾರು ಮಳೆ ತೀವ್ರವಾಗಿರುವ ಪ್ರದೇಶಗಳಲ್ಲಿ ಸಿಡಿಲಿನ ಅಪಾಯವು ಆಟಗಾರರು ಹಾಗೂ ಪ್ರೇಕ್ಷಕರ ಜೀವಕ್ಕೆ ದೊಡ್ಡ ಬೆದರಿಕೆಯಾಗಬಹುದು ಎಂಬುದನ್ನು ಈ ದುರಂತ ಮತ್ತೊಮ್ಮೆ ನೆನಪಿಸಿದೆ.

ಪ್ರಮುಖ ಸುದ್ದಿ :-   ಚಂದ್ರನಿಗೆ ಅಪ್ಪಳಿಸಿದ 4000 ಕಿಲೋ ತೂಕದ ಫಾಲ್ಕನ್–9 ರಾಕೆಟ್‌ ಭಾಗ ; 100 ಅಡಿ ಅಗಲ-16 ಅಡಿ ಆಳದ ಕುಳಿ ಆಗಿರುವ ಸಾಧ್ಯತೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement