ಮುಂಬೈ: ಬೊರಿವಲಿಯಲ್ಲಿ ತಡರಾತ್ರಿ ನಡೆದ ಜನ್ಮದಿನ ಆಚರಣೆಯ ವೇಳೆ, ರಸ್ತೆ ತಡೆದು, ಗೊಂದಲ ಸೃಷ್ಟಿಸಿ, ಏರ್ಗನ್ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯರಸ್ತೆಯಲ್ಲಿ ಇನ್ನೋವಾ ಕಾರು ನಿಲ್ಲಿಸಿ ಜನ್ಮದಿನ ಆಚರಿಸುತ್ತಿದ್ದ ವೇಳೆ ಏರ್ಗನ್ನಿಂದ ಪೆಲೆಟ್ ಗುಂಡು ಹಾರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು10 ಮಂದಿಯನ್ನು ಬಂಧಿಸಿದ್ದಾರೆ.
ಈ ಘಟನೆ ಬೊರಿವಲಿಯ ಗೋರೈ–2 ಪ್ರದೇಶದಲ್ಲಿ ನಡೆದಿದೆ. ಆಗಸ್ಟ್ 5ರ ರಾತ್ರಿ ಸುಮಾರು 12:30ರ ವೇಳೆಗೆ ಗೋರೈ–2ರ ಘರ್ಕುಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಸಮೀಪ ಕಪ್ಪು ಬಣ್ಣದ ಇನ್ನೋವಾ ಕಾರನ್ನು ಮಧ್ಯರಸ್ತೆಯಲ್ಲಿ ನಿಲ್ಲಿಸಿ ಯುವಕರ ಗುಂಪೊಂದು ಜನ್ಮದಿನ ಆಚರಿಸುತ್ತಿತ್ತು.
ಘಟನೆಯ ದೃಶ್ಯಾವಳಿಗಳಲ್ಲಿ ಕಾರಿನ ಬಾನೆಟ್ ಮೇಲೆ ಹಲವು ಕೇಕ್ಗಳನ್ನು ಇರಿಸಲಾಗಿದ್ದು, ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿ ಅವುಗಳನ್ನು ಕತ್ತರಿಸುತ್ತಿರುವುದು ಕಂಡುಬಂದಿದೆ. ಆತನ ಸ್ನೇಹಿತರು ಜೋರಾಗಿ ಕೂಗಾಡುತ್ತಾ ಸಾರ್ವಜನಿಕ ಸ್ಥಳದಲ್ಲೇ ಗದ್ದಲ ಸೃಷ್ಟಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಭಾರೀ ಗದ್ದಲದಿಂದ ಸಾರ್ವಜನಿಕ ಶಾಂತಿಗೂ ಭಂಗವಾಗಿದೆ ಎಂದುಹೇಳಲಾಗಿದೆ. ಆದರೂ ಸಂಭ್ರಮದಲ್ಲಿದ್ದವರು ಇದನ್ನು ಲೆಕ್ಕಿಸದೆ ಮತ್ತಷ್ಟು ಅತಿರೇಕಕ್ಕೆ ಮುಂದಾಗಿದ್ದಾರೆ.
ಸಂಭ್ರಮಾಚರಣೆಯ ನಡುವೆ ಏರ್ಗನ್ ಹೊರತೆಗೆದ ಯುವಕರಲ್ಲಿ ಒಬ್ಬ ಅದರಿಂದ ಪೆಲೆಟ್ ಗುಂಡುಗಳನ್ನು ಹಾರಿಸಿದ್ದಾನೆ. ಬೊರಿವಲಿ ಪೊಲೀಸರ ಪ್ರಕಾರ, “ಬೇಬಿ ಏರ್ಗನ್” ಅನ್ನು ಜತಿನ್ ಶರ್ಮಾ ತಂದಿದ್ದು, ಅದನ್ನು ವಿಜಯೇಶ ಉಪಾಧ್ಯಾಯ ಬಳಸಿಕೊಂಡು ಪೆಲೆಟ್ ಗುಂಡು ಹಾರಿಸಿದ್ದಾನೆ.
ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿದ್ದ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಾಶ್ ಗುಪ್ತಾ, ಜತಿನ್ ಶರ್ಮಾ ಹಾಗೂ ವಿಜಯೇಶ ಉಪಾಧ್ಯಾಯ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಮೋಟಾರು ವಾಹನಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಹಾಗೂ ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ