ರಿಯಾದ್ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಸವಾಲುಗಳ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಶುಕ್ರವಾರ ಮಹತ್ವದ ‘ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ’ (Mecca Joint Defence Agreement)ಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ ಮೂರು ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರಕ್ಕೆ ಹೊಸ ಆಯಾಮ ದೊರೆತಿದ್ದು, ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲೆ ಯಾವುದೇ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿಯೆಂದು ಪರಿಗಣಿಸಲಾಗುತ್ತದೆ.
ಈ ಒಪ್ಪಂದಕ್ಕೆ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು. ಶರೀಫ್ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾಗೆ ಆಗಮಿಸಿದ್ದು, ಅವರ ಜೊತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ನೇತೃತ್ವದ ಉನ್ನತ ಮಟ್ಟದ ನಿಯೋಗವೂ ಭಾಗವಹಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಈ ಒಪ್ಪಂದವು ಯಾವುದೇ ರೀತಿಯ ಆಕ್ರಮಣವನ್ನು ತಡೆಯುವ ಸಾಮೂಹಿಕ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಸದಸ್ಯ ರಾಷ್ಟ್ರಗಳಲ್ಲಿ ಒಂದರ ಮೇಲೆ ನಡೆದ ಸಶಸ್ತ್ರ ದಾಳಿಯನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿಯೆಂದು ಪರಿಗಣಿಸಲಾಗುವುದು. ಜೊತೆಗೆ ರಕ್ಷಣಾ ಕ್ಷೇತ್ರದ ಎಲ್ಲ ಆಯಾಮಗಳಲ್ಲಿ ಸಹಕಾರವನ್ನು ವಿಸ್ತರಿಸಲಾಗುವುದು” ಎಂದು ತಿಳಿಸಿದೆ.
ಸೌದಿ ಅರೇಬಿಯಾ ಏಕೆ ಈ ರಕ್ಷಣಾ ಒಪ್ಪಂದಕ್ಕೆ ಮುಂದಾಯಿತು?
ಇರಾನ್ ಹಾಗೂ ಅದರ ಬೆಂಬಲಿತ ಸಂಘಟನೆಗಳಿಂದ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಹೊಸ ರಕ್ಷಣಾ ಪಾಲುದಾರ ದೇಶಗಳನ್ನು ಹುಡುಕಲು ಮುಂದಾಗಿದೆ. ವಿಶೇಷವಾಗಿ ತೈಲ ಉತ್ಪಾದನಾ ಕೇಂದ್ರಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳ ನಂತರ ರಕ್ಷಣಾ ಸಹಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹೊಸ ಒಪ್ಪಂದದ ಅಡಿ ಜಂಟಿ ಸೇನಾ ತಾಲೀಮು, ಸೈನಿಕ ತರಬೇತಿ, ರಕ್ಷಣಾ ತಂತ್ರಜ್ಞಾನ ವಿನಿಮಯ ಹಾಗೂ ಗುಪ್ತಚರ ಮಾಹಿತಿ ಹಂಚಿಕೆಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದು ಟರ್ಕಿಯ ಹಬರ್‌ತುರ್ಕ್ ವರದಿ ಮಾಡಿದೆ.
ಮೂರು ರಾಷ್ಟ್ರಗಳ ಬಲಿಷ್ಠ ಒಕ್ಕೂಟ
ಈ ಒಪ್ಪಂದದ ಮೂಲಕ ತೈಲ ಸಂಪತ್ತಿನ ಸೌದಿ ಅರೇಬಿಯಾ, ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಪಾಕಿಸ್ತಾನ ಹಾಗೂ ನ್ಯಾಟೋದಲ್ಲಿ ಅಮೆರಿಕದ ನಂತರ ಎರಡನೇ ಅತಿದೊಡ್ಡ ಸೇನೆಯನ್ನು ಹೊಂದಿರುವ ಟರ್ಕಿ ಒಂದೇ ವೇದಿಕೆಗೆ ಬಂದಿವೆ. ರಕ್ಷಣಾ ಕ್ಷೇತ್ರದಲ್ಲಿ ಟರ್ಕಿಯ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ಸಾಮರ್ಥ್ಯವೂ ಈ ಮೈತ್ರಿಗೆ ಹೆಚ್ಚಿನ ಮಹತ್ವ ತಂದಿದೆ.
ಅಮೆರಿಕದ ನೀತಿಗಳ ನಡುವಿನ ಹೊಸ ಸಮೀಕರಣ
ಗಾಜಾ, ಲೆಬನಾನ್ ಮತ್ತು ಇರಾನ್‌ನ ಸಂಘರ್ಷಗಳ ಹಿನ್ನೆಲೆಯಲ್ಲಿ ಟರ್ಕಿ–ಇಸ್ರೇಲ್ ಸಂಬಂಧಗಳು ತೀವ್ರ ಉದ್ವಿಗ್ನವಾಗಿವೆ. ಈ ನಡುವೆ ಅಮೆರಿಕ ತನ್ನ ಸ್ವಹಿತಾಸಕ್ತಿ ಮತ್ತು ಇಸ್ರೇಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪರಿಸ್ಥಿತಿಯಲ್ಲಿ ಪ್ರಾದೇಶಿಕ ರಾಷ್ಟ್ರಗಳು ಹೊಸ ಭದ್ರತಾ ಮೈತ್ರಿಗಳನ್ನು ರೂಪಿಸಿಕೊಳ್ಳುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಟರ್ಕಿಯ ರಕ್ಷಣಾ ತಂತ್ರಜ್ಞ ನಿಹಾತ್ ಅಲಿ ಒಝ್ಕಾನ್ ಅವರ ಪ್ರಕಾರ, ಮಧ್ಯಪ್ರಾಚ್ಯದ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿ ಮತ್ತು ಪ್ರಾದೇಶಿಕ ಸಂಘರ್ಷಗಳ ಪರಿಣಾಮವಾಗಿ ದೇಶಗಳು ಹೊಸ ಸ್ನೇಹಿತರು ಮತ್ತು ಭದ್ರತಾ ಪಾಲುದಾರ ದೇಶವನ್ನು ಗುರುತಿಸುವತ್ತ ಸಾಗುತ್ತಿವೆ.
ಪಾಕಿಸ್ತಾನ–ಸೌದಿ ಸಂಬಂಧಗಳಿಗೆ ಮತ್ತಷ್ಟು ಬಲ
ಕಳೆದ ಸೆಪ್ಟೆಂಬರ್‌ನಲ್ಲಿಯೇ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದ್ವಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆ ಒಪ್ಪಂದದಲ್ಲಿಯೂ ಒಂದು ದೇಶದ ಮೇಲಿನ ದಾಳಿಯನ್ನು ಎರಡೂ ರಾಷ್ಟ್ರಗಳ ಮೇಲಿನ ದಾಳಿಯೆಂದು ಪರಿಗಣಿಸುವ ಅಂಶ ಸೇರಿಸಲಾಗಿತ್ತು.
ಸೌದಿ ಅರೇಬಿಯಾದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಗಳು ಉದ್ಯೋಗದಲ್ಲಿದ್ದು, ಪಾಕಿಸ್ತಾನದ ಆರ್ಥಿಕತೆಗೆ ಸೌದಿ ದೀರ್ಘಕಾಲದಿಂದ ಪ್ರಮುಖ ಬೆಂಬಲ ರಾಷ್ಟ್ರವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ