ದೇಶದೊಳಕ್ಕೆ ಅಕ್ರಮವಾಗಿ ಅಡಿಕೆ ಬರುವುದನ್ನು ತಡೆಯಲು ಕ್ರಮ ; ನಿಯೋಗಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಭರವಸೆ

ನವದೆಹಲಿ : ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ರಾಜ್ಯದ ಸಂಸದರು, ಶಾಸಕರು, ಕ್ಯಾಂಪ್ಕೋ ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವು ಶನಿವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅರಗ ಜ್ಞಾನೇಂದ್ರ, ಅಡಿಕೆ ಮಹಾಮಂಡಳದ ಅಧ್ಯಕ್ಷ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.
ಕೇಂದ್ರ ಸಹಕಾರ ಸಚಿವರೂ ಆದ ಅಮಿತ್ ಶಾ ಅವರ ಜೊತೆ ನಡೆದ ಸಭೆಯಲ್ಲಿ, ಕನಿಷ್ಠ ಆಮದು ಬೆಲೆ (ಎಂಐಪಿ) ನಿಯಮಗಳನ್ನು ಉಲ್ಲಂಘಿಸಿ ಸುಂಕ ರಹಿತವಾಗಿ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿರುವ ಕಡಿಮೆ ಬೆಲೆಯ ಅಡಿಕೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿಯುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕುವಂತೆ ನಿಯೋಗವು ಆಗ್ರಹಿಸಿತು.

ಪ್ರಮುಖ ಸುದ್ದಿ :-   ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ವರೆಗೆ ವಿಸ್ತರಣೆ

ಅಲ್ಲದೆ, ‘ಒಂದು ದೇಶ, ಒಂದು ತೆರಿಗೆ’ ಆಶಯದಂತೆ ಸಹಕಾರ ಸಂಸ್ಥೆಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚುವರಿ ಸ್ಥಳೀಯ ತೆರಿಗೆ ಹೊರೆ ತೆರವುಗೊಳಿಸಿ, ಖಾಸಗಿ ವ್ಯಾಪಾರಿಗಳ ಜೊತೆಗೆ ಸಹಕಾರ ಸಂಸ್ಥೆಗಳಿಗೂ ಸಮಾನ ಪೈಪೋಟಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು. ಈ ಕುರಿತು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದರು.
ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗವು, ಅಡಿಕೆ ತೋಟಗಳಲ್ಲಿ ಶಿಲೀಂಧ್ರನಾಶಕವಾಗಿ ಬಳಸುವ ಕಾಪರ್ ಸಲ್ಫೇಟ್ (ಮೈಲುತುತ್ತ) ಮೇಲಿನ ಜಿಎಸ್‌ಟಿ ದರವನ್ನು ಪ್ರಸ್ತುತ ಶೇ.18ರಿಂದ ಶೇ.5ಕ್ಕೆ ಇಳಿಸುವಂತೆ ಮನವಿ ಮಾಡಿತು.

ಅಕ್ರಮ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ವಿವಿಧ ಬಂದರುಗಳಲ್ಲಿ ತಪಾಸಣೆ ಹಾಗೂ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿಯೋಗಕ್ಕೆ ಮಾಹಿತಿ ನೀಡಿದರು.
ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ನಿಯೋಗದ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

ಪ್ರಮುಖ ಸುದ್ದಿ :-   ಮಂಗಳೂರು | ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: 8 ಮಂದಿಗೆ ಗಾಯ ; ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದ ಜನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement