ಮಗನ ಅಪಘಾತದಿಂದ ನೊಂದು ದಂಪತಿಯ ದುರಂತ ಅಂತ್ಯ ; ತಾಯಿ-ತಂದೆ ಕಳೆದುಕೊಂಡ 10 ವರ್ಷದ ಬಾಲಕ ಅನಾಥ

ಕಾರವಾರ: ಕುಟುಂಬದಲ್ಲಿ ಸಂಭವಿಸಿದ ಅಪಘಾತವೊಂದು ಇಡೀ ಕುಟುಂಬವನ್ನೇ ದುರಂತಕ್ಕೆ ದೂಡಿದ ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ.
ಮಗನಿಗೆ ಸಂಭವಿಸಿದ ಅಪಘಾತದಿಂದ ಆತನ ಆರೋಗ್ಯದ ಬಗ್ಗೆ ಆತಂಕಗೊಂಡ ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತಿಯೂ ಕಾಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಶಿರವಾಡದ ಬಂಗಾರಪ್ಪ ನಗರದ ನಿವಾಸಿಗಳಾದ ವೆಂಕಟೇಶ ವಡ್ಡರ (38) ಹಾಗೂ ವಿಜಯಾ ವಡ್ಡರ (36) ದಂಪತಿಯ ಸುಮಾರು 10 ವರ್ಷದ ಪುತ್ರ ಶರತ್ ವಾರದ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಬಾಲಕನ ತಲೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಆತನಿಗೆ 18 ವರ್ಷ ತುಂಬಿದ ಬಳಿಕ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ವೈದ್ಯರು ತಂದೆ-ತಾಯಿಗೆ ತಿಳಿಸಿದ್ದರು ಎನ್ನಲಾಗಿದೆ.

ಮಗನಿಗೆ ಎದುರಾದ ಆರೋಗ್ಯ ಸಮಸ್ಯೆಯಿಂದ ತಾಯಿ ತೀವ್ರವಾಗಿ ಆತಂಕಕ್ಕೊಳಗಾಗಿದ್ದರು. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಅವರನ್ನು ಕುಟುಂಬಸ್ಥರು ಧೈರ್ಯ ತುಂಬಿ ಸಮಾಧಾನಪಡಿಸಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಅವರಿಗೆ ಖಿನ್ನತೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಕೊನೆಗೆ ಆಗಸ್ಟ್ 9ರ ರಾತ್ರಿ ವಿಜಯಾ ಅವರು ಮನೆಯ ಮೇಲ್ಛಾವಣಿಯ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಪತ್ನಿ ಮೃತಪಟ್ಟಿರುವ ಸುದ್ದಿ ತಿಳಿದು ವೆಂಕಟೇಶ ತೀವ್ರ ಆಘಾತಕ್ಕೊಳಗಾಗಿದ್ದರು ಎನ್ನಲಾಗಿದೆ. ‘ನಾನೂ ಸಾಯುತ್ತೇನೆ’ ಎಂದು ಹೇಳುತ್ತಾ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಪತ್ನಿಯನ್ನು ಕಳೆದುಕೊಂಡ ದುಃಖದ ಜೊತೆಗೆ ಮಗನ ಭವಿಷ್ಯದ ಚಿಂತೆಯಿಂದ ಕಂಗೆಟ್ಟಿದ್ದ ಅವರು ಕೊಡಿಭಾಗದ ಬಳಿ ಕಾಳಿ ನದಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು : ಪಂಚತಾರಾ ಹೊಟೇಲ್‌ನಲ್ಲಿ ರೂಂ ಬುಕ್ ಮಾಡಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ?!

ಈ ನಡುವೆ ಮಂಗಳವಾರ ಕಾರವಾರ ತಾಲೂಕಿನ ಅಳೇವಾಡ-ಕೋಡಿಭಾಗ ಪ್ರದೇಶದಲ್ಲಿ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಧಾವಿಸಿ ಶವವನ್ನು ನೀರಿನಿಂದ ಮೇಲಕ್ಕೆ ತಂದಿದ್ದಾರೆ. ಬಳಿಕ ಮೃತ ವ್ಯಕ್ತಿ ನಾಪತ್ತೆಯಾಗಿದ್ದ ವೆಂಕಟೇಶ ವಡ್ಡರ ಎಂಬುದು ದೃಢಪಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನಿಗೆ ಆಸರೆಯಾಗಬೇಕಿದ್ದ ತಾಯಿ ಹಾಗೂ ತಂದೆ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಮೃತಪಟ್ಟಿರುವುದು ಕುಟುಂಬವನ್ನು ದುರಂತದ ಅಂಚಿಗೆ ತಳ್ಳಿದೆ. ಇದೀಗ ಸುಮಾರು 10 ವರ್ಷದ ಶರತ್ ಹೆತ್ತವರಿಬ್ಬರನ್ನೂ ಕಳೆದುಕೊಂಡು ಅನಾಥನಾಗಿ, ಅತಂತ್ರ ಸ್ಥಿತಿಗೆ ಸಿಲುಕಿದ್ದಾನೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement